ಬೆಂಗಳೂರು: ಒಂದು ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ 'ಬಿ' ರಿಪೋರ್ಟ ಅನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದು, ನೇರ ವಿಚಾರಣೆ ಆರಂಭಿಸಲು ನಿರ್ಧರಿಸಿದೆ.
ಪ್ರಕರಣದ ಹಿನ್ನೆಲೆ: 2014ರಲ್ಲಿ ವೈಯಾಲಿಕಾವಲ್ ವ್ಯಾಪ್ತಿಯ ಆರೆಂಜ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದ್ದ ಗಲಾಟೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅಲ್ಲಿನ ಪೊಲೀಸ್ ಕಾನ್‌ಸ್ಟೇಬಲ್ ಚಂದ್ರು ಅಲಿಯಾಸ್ ಚಂದ್ರಶೇಖರ್ 5 ಲಕ್ಷ ಲಂಚ ಪಡೆದಿದ್ದು, ಆಗ ಬೆಂಗಳೂರಿನ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರ ಹುದ್ದೆಯಲ್ಲಿದ್ದ ಅಲೋಕ್ ಕುಮಾರ್ ಶೇಷಾದ್ರಿಪುರಂ ಉಪವಿಭಾಗದ ಎಸಿಪಿ ದಾನೇಶ್ವರ್ ರಾವ್ ಹಾಗೂ ವೈಯಾಲಿಕಾವಲ್ ಠಾಣಾ ಇನ್‌ಸ್ಪೆಕ್ಟರ್ ಶಂಕರಾಚಾರಿ ಮೂಲಕ 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. 48 ಗಂಟೆಗಳೊಳಗೆ ಹಣ ಹೊಂದಿಸುವಂತೆ ಒತ್ತಡ ಹೇರಲಾಗಿದ್ದು, ಲಂಚ ನೀಡದಿದ್ದರೆ ಶಸ್ತ್ರಾಸ್ತ್ರ ಕಾಯೆ ಹಾಗೂ ಐಪಿಸಿ ಅಡಿಯಲ್ಲಿ ತೀವ್ರ ಸ್ವರೂಪದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಆರೋಪಿತ ಕಾನ್‌ಸ್ಟೆಬಲ್ ಜತೆಗಿನ ಮಾತುಕತೆಯ ಆಡಿಯೊ ರೆಕಾರ್ಡಿಂಗ್ ತುಣುಕುಗಳಿದ್ದ ಮೂರು ಸಿಡಿಗಳನ್ನೂ ದೂರುದಾರರು ತನಿಖಾ ಸಂಸ್ಥೆಗೆ ಸಲ್ಲಿಸಿದ್ದರು. ಮಾತ್ರವಲ್ಲದೇ ತಮ್ಮ ಸಂಬಂಧಿ ಪುಟ್ಟೇಗೌಡ ಎಂಬುವರು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಹುದ್ದೆಯಲ್ಲಿದ್ದು ತನ್ನಿಂದ 1 ಕೋಟಿ ಲಂಚ ಪಡೆಯಲು ಒತ್ತಡ ಸೃಷ್ಟಿಸುವುದಕ್ಕಾಗಿ ಪುಟ್ಟೇಗೌಡ ಅವರನ್ನು ಅಮಾನತು ಮಾಡಲಾಗಿತ್ತು ಎಂದು ಮಲ್ಲಿಕಾರ್ಜುನ್ ಎಂ.ಬಿ ಎಂಬುವವರು 2015ರ ಮೇ 30ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರನ್ವಯ ಪುಟ್ಟೇಗೌಡ ಕೂಡ ಲೋಕಾಯುಕ್ತ ಪೊಲೀಸರ ಎದುರು ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಮೊಹಮ್ಮದ್ ಮುಖಾರಾಂ ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಸಿದ್ದರು.