ಕುಡಿದು ಬಂದು ನಿತ್ಯ ಕಿರುಕುಳ, ತಾಯಿ ಮೇಲೆ ಹಲ್ಲೆ.. ಪುತ್ರನನ್ನು ಮರಕ್ಕೆ ಕಟ್ಟಿಹಾಕಿ ಬೆಂಕಿ ಹಚ್ಚಿ ಕೊಂದ ತಂದೆ ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತಲು ಮಿಗಿಲು ಎಂಬ ಮಾತಿದೆ. ಆದ್ರೆ ಇಲ್ಲಿ ವಯಸ್ಸಿಗೆ ಬಂದ ಮಗ ಕುಡಿತದ ಚಟಕ್ಕೆ ದಾಸನಾಗಿ ಮನೆಗೆ ಮುಳುವಾದಗಿದ್ದಲ್ಲದೆ, ಹೆತ್ತ ತಾಯಿ ಮೇಲೆಯೇ ಹಲ್ಲೆ ಮಾಡಿದ್ದ. ಇದರಿಂದ ಬೇಸತ್ತ ತಂದೆ ಮಗನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಕುಡಿದು ಬಂದು ಮನೆಯಲ್ಲಿ ನಿತ್ಯ ಮಗನಿಂದ ಕಿರುಕುಳ ನೀಡುತ್ತಿದ್ದ ಪುತ್ರನ ಕಾಟ ತಾಳಲಾರದೇ ತಂದೆಯೇ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಆದರ್ಶ್ (28) ಕೊಲೆಯಾದ ಮಗ, ಜಯರಾಮಯ್ಯ (58) ಮಗನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ತಂದೆ.
ಅಂದಹಾಗೆ, ಕೊಲೆಯಾದ ಆದರ್ಶ್ ಜಯರಾಮಯ್ಯನಿಗೆ ಒಬ್ಬನೇ ಮಗನಾಗಿದ್ದಾನೆ. ಮಗ ಪ್ರತಿನಿತ್ಯ ಕುಡಿದು ಮನೆಗೆ ಬಂದು ಗಲಾಟೆ ಮಾಡಿ ತಂದೆಗೆ ಕಿರಕುಳ ನೀಡ್ತಿದ್ದ. ಖಾಲಿ ಪೋಲಿಗಳ ಜೊತೆ ಸೇರಿಕೊಂಡು ದಿನನಿತ್ಯ ನಶೆಯಲ್ಲೇ ತೇಲಾಡುತ್ತಿದ್ದ. ಆದರೆ ಮಗನನ್ನು ಸರಿಯಾದ ದಾರಿಗೆ ತರಬೇಕು ಅಂತಾ ಪಣತೊಟ್ಟ ಅಪ್ಪ ಆದರ್ಶನನ್ನ ಮದ್ಯಪಾನ ವ್ಯಸನಿ ಮುಕ್ತ ಸೆಂಟರ್ನಲ್ಲಿ ಕುಡಿತ ಚಟ ಬಿಡಿಸಲು ಹಾಕಿದ್ದ.
ಆದ್ರೆ ಮನೆಗೆ ಬಂದವನು ಮತ್ತದೆ ಕುಡಿತದಿಂದ ತಂದೆ ಬಳಿ ಜಗಳ ಮಾಡುತ್ತಿದ್ದ. ಮೂರು ದಿನಗಳ ಹಿಂದೆಯೂ ಕೂಡ ಅದೇ ರೀತಿ ಕುಡಿದವನು ತಂದೆಯ ಬಳಿ ಜಗಳ ಮಾಡಿದ್ದ. ಈ ವೇಳೆ ತಾಯಿಯ ಮೇಲೆ ಹಲ್ಲೆ ಮಾಡಿದ್ದ. ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಷ್ಟು ದಿನ ಮಗನ ಉಪಟಳಗಳನ್ನು ಸಹಿಸಿಕೊಂಡಿದ್ದ ತಂದೆ ಕೊನೆಗೆ ಮಗನನ್ನೇ ಕೊಲೆ ಮಾಡಲು ಮುಂದಾಗಿದ್ದಾರೆ. ನಿನ್ನೆ ರಾತ್ರಿ ತಂದೆ ಮಗನ ಕುಡಿತದ ಅವಾಂತರಕ್ಕೆ ರೋಸಿ ಹೋಗಿದ್ದರು. ಅದಕ್ಕೆ ಮಗನಿಗೆ ಹೊಡೆದು, ತನ್ನ ತೋಟದ ಬಳಿ ಹಲಸಿನ ಮರಕ್ಕೆ ಕಟ್ಟಿ ಹಾಕಿ, ಪೆಟ್ರೋಲ್ ಸುರಿದು ಸುಟ್ಟು ಕೊಲೆಗೈದಿದ್ದಾರೆ.
ಇನ್ನು ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗನನ್ನು ಕೊಂದ ತಂದೆ ಜಯರಾಮಯ್ಯನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ತನಿಖೆಯನ್ನ ಮುಂದುವರೆಸಿದ್ದಾರೆ.
ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪ್ರಕರಣದ ಬಗ್ಗೆ ಮಾತನಾಡಿ,"ತಂದೆ ಜಯರಾಮಯ್ಯ ಮತ್ತು ಇತರರು ಸೇರಿ ಆದರ್ಶ್ ಎಂಬುವವನನ್ನು ಕೊಲೆ ಮಾಡಿದ್ದಾರೆ. ತನಿಖೆಯ ಪ್ರಕಾರ ಆದರ್ಶ ಎಂಬುವವನು ಕುಡಿತದ ಚಟವನ್ನು ಹೊಂದಿದ್ದ. ಇದರಿಂದ ದಿನಾ ಮನೆಗೆ ಬಂದು ತಂದೆ ತಾಯಿಗೆ ಕಿರುಕುಳ ಕೊಡುತ್ತಿದ್ದ, ಅಲ್ಲದೇ ಪೋಷಕರಿಗೆ ಹೊಡೆಯುತ್ತಿದ್ದ ಎಂದು ತಿಳಿದು ಬಂದಿದೆ. ಮೊನ್ನೆ ದಿನ ಕುಡಿದು ಬಂದು ತಾಯಿಗೆ ಹಲ್ಲೆ ಮಾಡಿದ್ದಾನೆ. ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಾರಣಕ್ಕೆ ತಂದೆಯೇ ಮಗನನ್ನು ಕಟ್ಟಿಹಾಕಿ, ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ.. ಮೂವರ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ