ಬೆಂಗಳೂರು:ಪಾಗಲ್ ಪ್ರೇಮಿಯೊಬ್ಬ ಆ್ಯಸಿಡ್ ಎರಚುವ, ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 37 ವರ್ಷದ ಮಹಿಳೆ ನೀಡಿರುವ ದೂರಿನ ಅನ್ವಯ ಶ್ರೀನಿವಾಸ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣದ ಸಂಪೂರ್ಣ ವಿವರ:ಪತಿಯಿಂದ ದೂರವಾಗಿದ್ದ ಮಹಿಳೆಯ ಹಿಂದೆ ಬಿದ್ದಿದ್ದ ಆರೋಪಿ ಶ್ರೀನಿವಾಸ್, ತನ್ನನ್ನ ಪ್ರೀತಿಸುವಂತೆ ಕಾಡಿಸುತ್ತಿದ್ದನಂತೆ. ಮದುವೆಯಾಗಿ ಗಂಡನಿಂದ ದೂರವಾಗಿದ್ದ ಮಹಿಳೆ ಶ್ರೀನಿವಾಸನಿಗೆ ಮನಸೋತು ಪ್ರೀತಿಗೆ ಸಮ್ಮತಿಸಿದ್ದಳಂತೆ. ಕೆಲಕಾಲ ಪ್ರೀತಿಯ ಗುಂಗಲ್ಲಿದ್ದ ಇಬ್ಬರ ನಡುವೆ ಮದುವೆ ವಿಚಾರ ಬಂದಾಗ ಶ್ರೀನಿವಾಸ ಉಲ್ಟಾ ಹೊಡೆದಿದ್ದನಂತೆ.
ಮದುವೆ ಆಗಲ್ಲ. ಆದರೆ ನನ್ನ ಜೊತೆಯಲ್ಲೇ ಇರು ಎಂದಿದ್ದನಂತೆ. ಅಲ್ಲದೇ ಶ್ರೀನಿವಾಸ ಹಾಗೂ ಆತನ ತಾಯಿ ದೂರುದಾರಳ ಮೇಲೆ ಹಲ್ಲೆ ನಡೆಸಿದ್ದರಂತೆ. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದರು. ದೂರಿನ ಅನವಯ ಶ್ರೀನಿವಾಸನನ್ನು ಬಂಧಿಸಲಾಗಿತ್ತು. ಪರಪ್ಪನ ಅಗ್ರಹಾರ ಸೇರಿದ ಮೇಲೂ ಅಲ್ಲಿಂದಲೇ ಕರೆ ಮಾಡುತ್ತಿದ್ದ ಆತ ನೀನು ನನ್ನೊಂದಿಗೆ ಬಂದು ಇರಬೇಕು. ಇಲ್ಲವಾದರೆ ಹತ್ಯೆಗೈಯ್ಯುವುದಾಗಿ ಬೆದರಿಕೆ ಹಾಕಿದ್ದನಂತೆ.
ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದ ಶ್ರೀನಿವಾಸ ಕಳೆದ ಶನಿವಾರ ರಾತ್ರಿ ದೂರುದಾರಳನ್ನ ಭೇಟಿಯಾಗಿ ಆಕೆಯ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ನೊಂದ ಮಹಿಳೆ ಮತ್ತೊಮ್ಮೆ ಬ್ಯಾಟರಾಯನಪುರ ಠಾಣೆಯ ಮೆಟ್ಟಿಲೇರಿದ್ದಾಳೆ.
ಇದನ್ನೂ ಓದಿ:ಪ್ರೀತಿಸುವಂತೆ ಯುವತಿಗೆ ಕಿರುಕುಳ; ಕಿಡಿಗೇಡಿ ವಿರುದ್ಧ ಪ್ರಕರಣ ದಾಖಲು
ಕುಳ್ಳನೆಂಬ ಖಿನ್ನತೆ-ಯುವಕ ಆತ್ಮಹತ್ಯೆ(ಪ್ರತ್ಯೇಕ ಪ್ರಕರಣ):ಕುಳ್ಳಗಿದ್ದೇನೆ ಎಂಬ ಖಿನ್ನತೆಯಿಂದ ಬಳಲುತ್ತಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿಯ ಕೆಂಗಲ್ ಕೆಂಪೋಹಳ್ಳಿಯಲ್ಲಿ ನಡೆದಿದೆ. ಬೆಂಗಳೂರಿನ ಯಶವಂತಪುರ ಮೂಲದ ಉದಯ್ ರಾಜ್ ದಿ(27) ಆತ್ಮಹತ್ಯೆಗೆ ಶರಣಾದ ಯುವಕ.
ಘಟನೆಯ ಸಂಪೂರ್ಣ ವಿವರ:ಉದಯ್ ರಾಜ್ ಹಲವು ವರ್ಷಗಳಿಂದ ಮೊಬೈಲ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಾ ಜೀವನ ಸಾಗಿಸುತ್ತಿದ್ದ. ಈತ ತಾನು ಕುಳ್ಳಗಿದ್ದೇನೆ ಎಂದು ಖಿನ್ನತೆಗೆ ಒಳಗಾಗಿದ್ದಂತೆ. ಪರಿಹಾರಕ್ಕಾಗಿ ಹಲವು ಆಸತ್ರೆಗಳಲ್ಲಿ ವೈದ್ಯರನ್ನೂ ಸಂಪರ್ಕಿಸಿದ್ದನಂತೆ. ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದು, ಅದರಲ್ಲಿ ನನ್ನ ಸಾವಿಗೆ ಮಾನಸಿಕ ಒತ್ತಡವೇ ಕಾರಣ ಎಂದು ಹೇಳಿಕೊಂಡಿದ್ಧಾನೆ. ಬಳಿಕ ಆ ವಿಡಿಯೋವನ್ನು ಆತನ ತಂದೆ ಹಾಗೂ ಕಂಪನಿಯ ಮ್ಯಾನೇಜರ್ ಮೊಬೈಲ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ವಾಟ್ಸ್ ಆ್ಯಪ್ ವಿಡಿಯೋ ನೋಡಿ ಲೊಕೇಶನ್ ಆಧಾರದ ಮೇಲೆ ಕುಟುಂಬಸ್ಥರು ಸ್ಥಳಕ್ಕೆ ಬರುವ ವೇಳೆಗಾಗಲೇ ಆತ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಡಾಬಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ:World Suicide Prevention Day 2023: ಹೆಚ್ಚಾಗುತ್ತಿದೆ ಆತ್ಮಹತ್ಯೆ ಪ್ರಕರಣ; ತಡೆಗಟ್ಟುವಿಕೆ ನಿಟ್ಟಿನಲ್ಲಿ ಮಾಡಬೇಕಿದೆ ಕೆಲಸ