ಬೆಂಗಳೂರು: ತೆಲಂಗಾಣ ಕಾಂಗ್ರೆಸ್ ನಾಯಕ ಕುಂಭಂ ಶಿವಕುಮಾರ್ ರೆಡ್ಡಿ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಹೊಟೇಲ್ಗೆ ಕರೆಸಿಕೊಂಡು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ವಿಡಿಯೋ ಚಿತ್ರೀಕರಿಸಿಕೊಂಡು ಬೆದರಿಸಿರುವ ಆರೋಪ ಶಿವಕುಮಾರ್ ರೆಡ್ಡಿ ವಿರುದ್ಧ ಕೇಳಿ ಬಂದಿದೆ.
ತೆಲಂಗಾಣದ ನಾರಾಯಣ್ ಪೇಟ್ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಕುಂಭಂ ಶಿವಕುಮಾರ್ ರೆಡ್ಡಿ ಅವರು 2018ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ನಾರಾಯಣ್ ಪೇಟ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು.
ಈ ಹಿಂದೆ ಹೈದರಾಬಾದ್ ಪಂಜಾಗುಟ್ಟ ಪೊಲೀಸ್ ಠಾಣೆಯಲ್ಲಿ ಕುಂಭಂ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದೀಗ ಮಹಿಳೆಯ ನೀಡಿದ ದೂರಿನ ಅನ್ವಯ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯಲ್ಲಿಯೂ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Rape case: ದಾವಣಗೆರೆಯಲ್ಲಿ ಜೈಲಿನ ಗೋಡೆ ಜಿಗಿದು ಪರಾರಿಯಾಗಿದ್ದ ಅತ್ಯಾಚಾರ ಪ್ರಕರಣದ ಆರೋಪಿ ಸೆರೆ
ಬೆಂಗಳೂರಲ್ಲಿ ಯುವತಿಯ ಸೋಗಿನಲ್ಲಿ ಕರೆಸಿಕೊಂಡು ಸುಲಿಗೆಗೈಯ್ಯುತ್ತಿದ್ದ ಆಸಾಮಿಗಳ ಬಂಧನ:ಯುವತಿಯ ಸೋಗಿನಲ್ಲಿ ಕರೆಸಿ ಬೆದರಿಸಿ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನ ಹೆಚ್ಎಸ್ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ನದೀಂ ಪಾಶಾ ಹಾಗೂ ನಾಗೇಶ್ ಬಂಧಿತ ಆರೋಪಿಗಳು. ಯುವತಿಯ ಹೆಸರಿನಲ್ಲಿ ಗ್ರಾಹಕರನ್ನ ಸೆಳೆಯುತ್ತಿದ್ದ ಆರೋಪಿಗಳು ಬೆದರಿಸಿ ಸುಲಿಗೆ ಮಾಡುತ್ತಿದ್ದರು.
ಆ್ಯಪ್ವೊಂದರಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸುತ್ತಿದ್ದ ಆರೋಪಿಗಳು, ಆ ಪ್ರೊಫೈಲ್ ಮೇಲೆ ಆಸಕ್ತಿ ತೋರಿಸುವ ಗ್ರಾಹಕರನ್ನ ಟಾರ್ಗೆಟ್ ಮಾಡುತ್ತಿದ್ದರು. ಬಳಿಕ ಯುವತಿಯ ಸೋಗಿನಲ್ಲಿ ಒಂದು ಲೊಕೇಷನ್ ಹಾಕಿ ಕರೆಸಿಕೊಳ್ಳುತ್ತಿದ್ದರು. ನಂತರ ಆಟೋದಲ್ಲಿ ಬಂದು, ಹತ್ತಿಸಿಕೊಂಡು ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದರು. ಮಾತ್ರವಲ್ಲದೇ ಬ್ಯಾಂಕ್ ಖಾತೆಯಿಂದಲೂ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಇದೇ ರೀತಿ ಯುವಕನೊಬ್ಬನನ್ನ ಸೆಳೆದಿದ್ದ ಆರೋಪಿಗಳು, ಆಗಸ್ಟ್ 21ರ ಸಂಜೆ 7:30ರ ಸುಮಾರಿಗೆ ಆತನನ್ನ ಹೆಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯ 5ನೇ ಮುಖ್ಯರಸ್ತೆ ಬಳಿ ಕರೆಸಿಕೊಂಡಿದ್ದರು. ಬಳಿಕ ಆತನನ್ನ ಬಲವಂತವಾಗಿ ಆಟೋದಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಚಾಕು ತೋರಿಸಿ, ಹಣ ನೀಡುವಂತೆ ಬೆದರಿಸಿದ್ದರು. ಬಳಿಕ ಆತನ ಬಳಿಯಿದ್ದ ನಗದು, ಆನ್ಲೈನ್ ಮೂಲಕ ಸೇರಿದಂತೆ 60 ಸಾವಿರ ರೂ ಸುಲಿಗೆ ಮಾಡಿದ್ದರು. ನಂತರ ವಿಷಯವನ್ನ ಯಾರಿಗಾದರೂ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿ ಆಟೋದಿಂದ ಕೆಳಗಿಳಿಸಿ ಪರಾರಿಯಾಗಿದ್ದರು.
ಯುವತಿಯ ಸೋಗಿನಲ್ಲಿ ಕರೆಸಿಕೊಂಡು ಸುಲಿಗೆಗೈಯ್ಯುತ್ತಿದ್ದ ಆರೋಪಿಗಳು ಹಣ ಕಳೆದುಕೊಂಡ ಯುವಕ ಹೆಚ್ಎಸ್ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ನೇಹಿತನೊಂದಿಗೆ ತೆರಳುತ್ತಿದ್ದ ಯುವತಿಯ ಅವಹೇಳನ ಆರೋಪ: ವೈದ್ಯಕೀಯ ವಿದ್ಯಾರ್ಥಿ ಬಂಧನ