ಬೆಂಗಳೂರು : ನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಯುವತಿ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಈಗ ಈ ಪ್ರಕರಣ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಜೂನಿಯರ್ ವಿದ್ಯಾರ್ಥಿ ಮೇಲೆ ಮಾರಕಾಸ್ತ್ರ ಬೀಸಿದ್ದ 7 ಜನ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿ ಸಾಹಸ್ ಗೌಡ ಸೇರಿದಂತೆ 7 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಇದೇ ತಿಂಗಳ 5ರಂದು ನಾಗರಭಾವಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ಸಂಭವಿಸಿತ್ತು. ದರ್ಶನ್ ಎಂಬ ವಿದ್ಯಾರ್ಥಿಯ ಮೇಲೆ ಆರೋಪಿಗಳು ಮಾರಕಾಸ್ತ್ರ ಬೀಸಿದ್ದರು. ಈ ಪ್ರಕರಣಕ್ಕೆ ಸಂಬಂಧಿದಂತೆ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ.
ಯುವತಿಯ ವಿಚಾರಕ್ಕೆ ಆರಂಭವಾದ ಕಿರಿಕ್ : ನಾಗರಭಾವಿಯ ಖಾಸಗಿ ಕಾಲೇಜಿನಲ್ಲಿ ದರ್ಶನ್ ಮೊದಲ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದರು. ಅದೇ ಕಾಲೇಜಿನಲ್ಲಿ ಸಾಹಸ್ ಗೌಡ, ಇನ್ನಿಬ್ಬರು ವಿದ್ಯಾಭ್ಯಾಸ ಮಾಡುತ್ತಿದ್ದರು. ಕಾಲೇಜಿನಲ್ಲಿ ತಾವೇ ದೊಡ್ಡವರು ಎಂದು ಆರೋಪಿಗಳು ಬಿಲ್ಡಪ್ನಿಂದ ತಿರುಗುತ್ತಿದ್ದರು ಎಂಬ ಆರೋಪ ಅವರ ಮೇಲಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ಯುವತಿಯೊಬ್ಬಳ ವಿಚಾರವಾಗಿ ದರ್ಶನ್ ಸ್ನೇಹಿತರು ಮತ್ತು ಸಾಹಸ್ ಸ್ನೇಹಿತರು ಗಲಾಟೆ ಮಾಡಿಕೊಂಡಿದ್ದರು. ಆಗ ದರ್ಶನ್ ಮೇಲೆ ಸಾಹಸ್ ಹಲ್ಲೆಗೆ ಮುಂದಾದಾಗ ದರ್ಶನ್ ಅಲ್ಲಿಂದ ಎಸ್ಕೇಪ್ ಆಗಿದ್ದ. ನಂತರ ದರ್ಶನ್ ಅನ್ನು ಹೊಡೆಯುತ್ತೇನೆ ಎಂದು ಸಾಹಸ್ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ ಗಲಾಟೆಯೊಂದರ ವಿಚಾರವಾಗಿ ಸಾಹಸ್ ಗೌಡ ಕಾಲೇಜಿನಿಂದ ಸಸ್ಪೆಂಡ್ ಆಗಿದ್ದ. ಹೀಗೆ ಬಿಟ್ಟರೆ ದರ್ಶನ್ ತನ್ನನ್ನೇ ಹೊಡೆಯಬಹುದು ಅಂತಾ ತನ್ನ ಸ್ನೇಹಿತರಾದ ಅದೇ ಕಾಲೇಜಿನ ಇಬ್ಬರು ಸ್ನೇಹಿತರು ಮತ್ತು ಬೇರೆ ಖಾಸಗಿ ನಾಲ್ವರು ವಿದ್ಯಾರ್ಥಿಗಳನ್ನು ಕರೆಸಿಕೊಂಡಿದ್ದಾನೆ. ಬಳಿಕ ಜೂನ್ 5ರಂದು ಕಾಲೇಜು ಮುಂಭಾಗದಲ್ಲೇ ದರ್ಶನ್ ಮೇಲೆ ಸಾಹಸ್ ಗೌಡ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದನು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಕಣ್ಣೀರಿಟ್ಟ ವಿದ್ಯಾರ್ಥಿಗಳು:ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಕಣ್ಣೀರಿಟ್ಟಿದ್ದಾರೆ. ದರ್ಶನ್ ಅನ್ನು ಸುಮ್ಮನೆ ಹೆದರಿಸಲು ಅಂತಾ ಸಾಹಸ್ ನಮ್ಮನ್ನ ಕರೆದುಕೊಂಡು ಬಂದಿದ್ದ. ಆತ ಲಾಂಗ್ ತಂದಿರೋದು ನಮಗೆ ಗೊತ್ತಿರಲಿಲ್ಲ. ಆತನಿಂದಾಗಿ ನಮ್ಮ ಲೈಫೇ ಹಾಳಾಯ್ತು ಅಂತಾ ಉಳಿದ ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ. ಘಟನೆ ಸಂಬಂಧ 7 ಜನ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.
ಓದಿ:ತೆಪ್ಪ ದರ ದುಪ್ಪಟ್ಟು: ಹೊಗೆನಕಲ್ನಲ್ಲಿ ಪ್ರವಾಸಿಗರು-ತೆಪ್ಪ ನಡೆಸುವವರ ಮಧ್ಯೆ ಗಲಾಟೆ
ಇನ್ನು, ವಿದ್ಯಾರ್ಥಿಗಳ ಭವಿಷ್ಯದ ಜೀವನ ಬಗ್ಗೆ ಆಲೋಚಿಸಿ ಪೊಲೀಸರು ಮುಂದೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕು. ಈಗಾಗಲೇ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ಮುಟ್ಟಿದ್ದು, ಪೊಲೀಸ್ ಠಾಣೆಗೆ ಭೇಟಿ ನೀಡುವ ಸಾಧ್ಯತೆಯಿದೆ.