ಬೆಂಗಳೂರು: ನಗರವನ್ನೇ ಬೆಚ್ಚಿಬೀಳಿಸಿದ್ದ ಜೋಡಿ ಕೊಲೆ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದ ಅಮೃತಹಳ್ಳಿ ಪೊಲೀಸರು ಇದೀಗ ಕೊಲೆಗೀಡಾದ ಎಂ.ಡಿ ಹಾಗೂ ಸಿಇಒ ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿ ಮಾಲೀಕನನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಅರುಣ್ ಕುಮಾರ್ ಬಂಧಿತ ಆರೋಪಿ.
ಅರುಣ್ ಕುಮಾರ್ ಜಿ-ನೆಟ್ ಕಂಪನಿ ಮಾಲೀಕನಾಗಿದ್ದರು. ಜಿ-ನೆಟ್ ಕಂಪನಿಯಲ್ಲಿ ಫಣೀಂದ್ರ ಹೆಚ್ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿನು ಕುಮಾರ್ ಸಿಇಒ ಆಗಿ ಕೆಲಸ ಮಾಡುತ್ತಿದ್ದರು. 8 ತಿಂಗಳ ಹಿಂದೆ ಫಣೀಂದ್ರ ಹಾಗೂ ವಿನು ಕುಮಾರ್ ಕೆಲಸ ತೊರೆದು ಅಮೃತಹಳ್ಳಿಯಲ್ಲಿ ತಮ್ಮದೇ ಆದ ಹೊಸ ಕಂಪನಿ ಸ್ಥಾಪಿಸಿದ್ದರು. ಹೊಸ ಕಂಪನಿ ಸ್ಥಾಪನೆಯಿಂದ ಅರುಣ್ ಕುಮಾರ್ಗೆ ವ್ಯವಹಾರದಲ್ಲಿ ನಷ್ಟವಾಗಿತ್ತು. ಇದೇ ಕಾರಣಕ್ಕೆ ಜೋಕರ್ ಫೆಲಿಕ್ಸ್ ಅಲಿಯಾಸ್ ಶಬರೀಶ್ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾರೆ ಎಂಬ ಅನುಮಾನದ ಮೇರೆಗೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಕೃತ್ಯದಲ್ಲಿ ಶಾಮೀಲಾಗಿರುವುದರಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೆಸರು ಬದಲಿಸಿಕೊಂಡಿದ್ದ: ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿ ಫೆಲಿಕ್ಸ್ನ ಒಂದೊಂದೇ ಕಥೆ ಬೆಳಕಿಗೆ ಬರುತ್ತಿದೆ. ಶಿವಮೊಗ್ಗ ನಿವಾಸಿಯಾಗಿದ್ದ ಶಬರೀಶ್ ಬೆಂಗಳೂರಿಗೆ ಬಂದು ಫೆಲಿಕ್ಸ್ ಎಂದು ಹೆಸರು ಬದಲಾಯಿಸಿಕೊಂಡಿದ್ದ. ರ್ಯಾಪರ್ ಹಾಗೂ ರೀಲ್ಸ್ ನಲ್ಲಿ ಹುಚ್ಚುತನದ ವರ್ತನೆಯಿಂದಲೇ ಫೇಮಸ್ ಆಗಿದ್ದ. ಜಿನೆಟ್ ನಲ್ಲಿ ಕೆಲಸ ಬಿಟ್ಟ ಬಳಿಕ ಮುಂಬೈ ಮತ್ತು ಕಾಶಿಯಲ್ಲಿ ಕೆಲಸ ಮಾಡುತ್ತಿದ್ದ. ವಿಚಿತ್ರವಾಗಿ ವೇಷ ತೊಟ್ಟು ರೀಲ್ಸ್ ಮಾಡ್ತಿದ್ದ. ಇದೇ ಕಾರಣಕ್ಕೆ ಹೆಚ್ಚಾಗಿ ಫೆಲಿಕ್ಸ್ ಸ್ಮಶಾನದಲ್ಲಿ ವಾಸ, ಗಾಂಜಾ ಸೇವನೆ ಮಾಡುತ್ತಿದ್ದ ಎನ್ನಲಾಗಿದೆ.