ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಕೋವಿಡ್ ಕರಿಛಾಯೆ ಎಲ್ಲೆಡೆ ಹಬ್ಬುವ ಲಕ್ಷಣಗಳು ಕಾಣುತ್ತಿವೆ. ಇತ್ತೀಚೆಗೆ ದಿನಕ್ಕೆ ನೂರರ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದ ಸೋಂಕಿತರ ಪ್ರಮಾಣ ಇದೀಗ ಸಾವಿರದತ್ತ ಹೆಜ್ಜೆಯಿಟ್ಟಿದೆ. ನಿನ್ನೆ ಒಂದೇ ದಿನ 1,135 ಮಂದಿಗೆ ಸೋಂಕು ತಗುಲಿರುವುದು ದೃಢವಾಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಏರಿಕೆ ಕಾಣುತ್ತಿರುವ ಸೋಂಕು ಪ್ರಕರಣಗಳು:
ಕೋವಿಡ್ನ ಮೊದಲ ಅಲೆಯಲ್ಲಿ ಅಂದರೆ, 2020ರ ಜೂನ್ 26ರಂದು ಮೊದಲ ಬಾರಿಗೆ 1,267 ಮಂದಿಗೆ ಸೋಂಕು ತಗುಲಿತ್ತು. ಬಳಿಕ ಸಾವಿರದ ಸಂಖ್ಯೆ ಹತ್ತು ಸಾವಿರ ಗಡಿದಾಟಿ ಲಕ್ಷದತ್ತ ಹೋದದ್ದು ಇದೀಗ ಇತಿಹಾಸ. ಕಳೆದ ವರ್ಷ ಡಿಸೆಂಬರ್ 25 ರಂದು 1,005 ಪ್ರಕರಣಗಳು ಕಾಣಿಸಿಕೊಂಡ ಬಳಿಕ ನಿಧಾನಗತಿಯಲ್ಲಿ ಸೋಂಕು ಪ್ರಕರಣಗಳು ಇಳಿಕೆ ಕಂಡಿದ್ದವು. ಜನವರಿ- ಫೆಬ್ರವರಿಯ ಅಂತ್ಯದವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 500ರೊಳಗೆ ಇತ್ತು. ಆದರೆ, ಮಾರ್ಚ್ನ ಎರಡನೇ ವಾರದಿಂದ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು, ಇದೀಗ ಹಿಸ್ಟರಿ ಮತ್ತೆ ರಿಪೀಟ್ ಆಗುವ ಲಕ್ಷಣಗಳಾಗಿವೆ. ಅದರಲ್ಲೂ ಬೆಂಗಳೂರೇ ಕೊರೊನಾ ಹಾಟ್ ಸ್ಪಾಟ್ ಆಗಿದ್ದು, ಇದೀಗ ಇನ್ನಷ್ಟು ಮುನ್ನೆಚ್ಚರಿಕೆ ಅಗತ್ಯವಾಗಿದೆ.
ರಾಜ್ಯ ರಾಜಧಾನಿಯಲ್ಲಿನ ಸೋಂಕಿತರ ಪ್ರಮಾಣ:
ರಾಜ್ಯ ರಾಜಧಾನಿಯಲ್ಲಿ ನಿನ್ನೆ ಒಂದೇ ದಿನ 710 ಹೊಸ ಪ್ರಕರಣಗಳು ಪತ್ತೆಯಾಗಿದೆ. ಫೆಬ್ರವರಿ ಇಡೀ ತಿಂಗಳು ದಾಖಲಾಗಿದ್ದ ಕೇಸ್ಗಳು ಮಾರ್ಚ್ನ ಅರ್ಧ ತಿಂಗಳಲ್ಲೇ ದಾಖಲಾಗಿದೆ. ಕ್ಲಸ್ಟರ್ ಪ್ರಕರಣಗಳು ಮಾತ್ರ ಅಲ್ಲ, ಮನೆ ಮನೆಗಳಲ್ಲೂ ಸೋಂಕು ಕಾಣಿಸಿಕೊಳ್ತಿದೆ. ಫೆಬ್ರವರಿ ತಿಂಗಳಲ್ಲಿ ಪಾಸಿಟಿವ್ ರೇಟ್ 0.94 ರಷ್ಟು ಇದಿದ್ದು ಮಾರ್ಚ್ನಲ್ಲಿ 1.26 ರಷ್ಟು ಇದೆ. ಮಾರ್ಚ್ 12 ರಿಂದ 500ರ ಗಡಿದಾಟಿದ ಸೋಂಕಿತರ ಸಂಖ್ಯೆ ಇದೀಗ 700ಕ್ಕೆ ತಲುಪಿದೆ