ಬೆಂಗಳೂರು :ದೇಶಾದ್ಯಂತ ಮೊದಲ ಹಾಗೂ ಎರಡನೇ ಕೋವಿಡ್ ಅಲೆ ಮುಗಿಯಿತು ಎನ್ನುವಾಗಲೇ ಮೂರನೇ ಅಲೆ ಭೀತಿ ಶುರುವಾಗಿದೆ. ಮೂರನೇ ಅಲೆಯ ತಡೆಗೆ ತಾಂತ್ರಿಕ ಸಮಿತಿ ಮಧ್ಯಂತರ ವರದಿ ನೀಡಿದೆ. ಅಂತಿಮ ವರದಿ ತಯಾರಿಯಲ್ಲಿ ತಜ್ಞರು ಇದ್ದಾರೆ. ಎರಡನೇ ಅಲೆ ಮುಗಿಯುವ ಮುನ್ನವೇ ಈಗಾಗಲೇ ಡೆಲ್ಟಾ ಪ್ಲಸ್ ರೂಪಾಂತರಿ ರಾಜ್ಯದಲ್ಲೂ ಪತ್ತೆಯಾಗಿದೆ. ಇದುವೇ ಮೂರನೇ ಅಲೆಯ ಭೀಕರತೆಗೆ ಸಾಕ್ಷಿಯಾಗಲಿದೆಯಾ ಎಂಬ ಆತಂಕ ಶುರುವಾಗಿದೆ.
ಮೂಲ ಕೊರೊನಾ ಸೋಂಕು ಎಲ್ಲಾ ದೇಶಗಳಿಗೆ ಹರಡಿ, ಅಲ್ಲಿ ಜನರ ದೇಹ ಸೇರಿರುವ ವೈರಾಣು ಅಲ್ಲಿನ ಪ್ರಾದೇಶಿಕವಾರು ವಾತಾವರಣಕ್ಕನುಗುಣವಾಗಿ ಹೊಸ ತಳಿಯಾಗಿ ಬದಲಾಗುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಯುಕೆ ರೂಪಾಂತರಿ, ಆಫ್ರಿಕಾ ರೂಪಾಂತರಿಯನ್ನು ಕಾಣಬಹುದು. ಮೂರನೇ ಅಲೆಯಲ್ಲಿ ಜಿಲ್ಲಾವಾರು ಸಂಪೂರ್ಣ ಮಾಹಿತಿಕ್ಕನುಗುಣವಾಗಿ ಯಾವ ಜಿಲ್ಲೆಯಲ್ಲಿ ಎಷ್ಟು ಮಕ್ಕಳಿಗೆ ಸೋಂಕು ತಗುಲಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಇದಕ್ಕೆ ತಕ್ಕಂತೆ ಜಿಲ್ಲಾ ಮಟ್ಟದಲ್ಲಿ ಮೂರನೇ ಅಲೆಗೆ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು? ಮೂರನೇ ಅಲೆಯಲ್ಲಿ ಟಾರ್ಗೆಟ್ ಆಗುವ ಜಿಲ್ಲೆಗಳು ಯಾವುವು? ಮುನ್ನೆಚ್ಚರಿಕೆಯನ್ನು ಯಾವ ಜಿಲ್ಲೆ ಹೆಚ್ಚು ವಹಿಸಬೇಕು? ಎಚ್ಚರ ತಪ್ಪಿದ್ರೆ ಎಷ್ಟರ ಮಟ್ಟಿಗೆ ಅಪಾಯ ಆಗಲಿದೆ ಎಂಬುದನ್ನು ತಜ್ಞರು ಅಂದಾಜಿಸಿದ್ದಾರೆ.
ಮಹಾರಾಷ್ಟ್ರ- ಕೇರಳ ಗಡಿಭಾಗದಲ್ಲಿ ಎಚ್ಚರಿಕೆ ಅಗತ್ಯ :ಮಹಾರಾಷ್ಟ್ರ- ಕೇರಳ ರಾಜ್ಯದಲ್ಲಿ ಹೆಚ್ಚು ಕೊರೊನಾ ಸೋಂಕು ಹಾಗೂ ರೂಪಾಂತರಿ ಸೋಂಕು ಮೊದಲು ಪತ್ತೆಯಾಗುತ್ತಿದೆ. ಹೀಗಾಗಿ, ಕರ್ನಾಟಕಕ್ಕೆ ಹೊಂದಿಕೊಂಡಿರುವ ಕಾರಣಕ್ಕೆ ಮಹಾರಾಷ್ಟ್ರ ಹಾಗೂ ಕೇರಳ ಗಡಿ ಭಾಗದಲ್ಲಿ ಜನರ ಓಡಾಟದ ಕುರಿತು ಎಚ್ಚರಿಕೆ ವಹಿಸುವ ಅಗತ್ಯ ಇದೆ.
ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೆಳಗಾವಿ, ಉತ್ತರಕನ್ನಡ, ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚು ನಿರ್ಬಂಧ ವಹಿಸುವ ಅಗತ್ಯವಿದೆ. ಕೇರಳ ಗಡಿ ಭಾಗಗಳಾದ ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಎಚ್ಚರಿಕೆ ಅಗತ್ಯ ಇದೆ. ಗಡಿ ಭಾಗದಿಂದ ಆಗಮಿಸುವ ಜನರಿಗೆ ರ್ಯಾಂಡಮ್ ಟೆಸ್ಟ್ ಮಾಡುವುದು ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರ ಕುರಿತು ಮಾಹಿತಿ ಪಡೆದು, ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇದ್ದರಷ್ಟೇ ಪ್ರವೇಶಿಸಲು ಅನುಮತಿ ನೀಡಬೇಕು.
ಮೂರನೇ ಅಲೆಯಲ್ಲಿ ಯಾವ ಜಿಲ್ಲೆಗೆ ಆಪತ್ತು :ಕೋವಿಡ್ ಮೂರನೇ ಅಲೆಯ ಕುರಿತು ವರದಿ ನೀಡಿರುವ ತಜ್ಞರು, ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.2.2 ಮಂದಿ ಸೋಂಕಿಗೀಡಾಗಬಹುದು ಎಂದಿದ್ದಾರೆ. ಅಂದರೆ 15.4ಲಕ್ಷ ಮಂದಿಗೆ ಸೋಂಕು ತಗುಲಬಹುದು. 18 ವರ್ಷದೊಳಗಿನ 2.38 ಕೋಟಿ ಮಕ್ಕಳು ಇದ್ದು, ಸುಮಾರು 3.40 ಲಕ್ಷ ಮಕ್ಕಳಲ್ಲಿ ಸೋಂಕು ಪತ್ತೆಯಾಗುವ ಸಾಧ್ಯತೆಯಿದೆ.