ಬೆಂಗಳೂರು: ನ್ಯಾಯಾಲಯದ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ನಿರ್ದೇಶನ ನೀಡಿದಾಗ ಅಧಿಕಾರಿಗಳು ತಪ್ಪದೇ ಹಾಜರಾಗುವಂತೆ ಸೂಚಿಸಿ ಸುತ್ತೋಲೆ ಹೊರಡಿಸಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ನಗರ ಮತ್ತು ಗ್ರಾಮೀಣ ಭಾಗದ ನಿರ್ವಸಿತರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹೌಸಿಂಗ್ ಫಾರ್ ಆಲ್ ಯೋಜನೆ ಅಡಿ ವಸತಿ ಸೌಲಭ್ಯ ಒದಗಿಸಲು, ಸರ್ಕಾರಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಕೋರಿ ವಕೀಲ ಮೊಹಮ್ಮದ್ ಇಕ್ಬಾಲ್ ಸಾರ್ಜಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಇದನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಸೆ.15ರಂದು ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಹಲವು ಬಾರಿ ಸೂಚಿಸಿದ್ದರೂ ಪಿಐಎಲ್ ಗೆ ಆಕ್ಷೇಪಣೆ ಸಲ್ಲಿಸದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಹಾಗೆಯೇ, ಸರ್ಕಾರ ಮುಂದಿನ ವಿಚಾರಣೆ ಒಳಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ವಿಚಾರಣೆ ವೇಳೆ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ನಿರ್ದೇಶಿಸಿತ್ತು.
ಆದರೆ, ವಸತಿ ಇಲಾಖೆ ಪಿಐಎಲ್ಗೆ ಆಕ್ಷೇಪಣೆ ಸಲ್ಲಿಸಿರಲಿಲ್ಲ. ಜತೆಗೆ ಇಂದಿನ ವಿಚಾರಣೆಗೆ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಹಾಜರಾಗಿರಲಿಲ್ಲ. ಬೆಳಗ್ಗೆ ನಡೆದಿದ್ದ ಮತ್ತೊಂದು ಪಿಐಎಲ್ ಅರ್ಜಿ ವಿಚಾರಣೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಹಾಜರಾಗಿರಲಿಲ್ಲ. ಉನ್ನತ ಅಧಿಕಾರಿಗಳು ಕೋರ್ಟ್ ನಿರ್ದೇಶನದ ಹೊರತಾಗಿಯೂ ವಿಚಾರಣೆಗೆ ಹಾಜರಾಗದೆ ಇದ್ದುದಕ್ಕೆ ಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಅಧಿಕಾರಿಗಳು ನ್ಯಾಯಾಲಯದ ಆದೇಶಗಳನ್ನು ಇಷ್ಟು ಹಗುರವಾಗಿ ಪರಿಗಣಿಸುವುದನ್ನು ಸಹಿಸಲಾಗುವುದಿಲ್ಲ.
ಕೋರ್ಟ್ ನಿರ್ದೇಶನಗಳನ್ನು ಅಧಿಕಾರಿಗಳು ಪಾಲಿಸಬೇಕು. ಈ ಬಗ್ಗೆ ಅವರಿಗೆ ಅರ್ಥವಾಗಿಲ್ಲದಿದ್ದರೆ ಅರ್ಥ ಮಾಡಿಸುವುದು ನಮಗೆ ಗೊತ್ತಿದೆ. ಹಾಗೆಯೇ, ಅಧಿಕಾರಿಗಳು ವಿಚಾರಣೆಗೆ ಹಾಜರಾಗದಿದ್ದರೆ ಅವರನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಬೇಕಾಗುತ್ತದೆ. ಅಧಿಕಾರಿಗಳನ್ನು ನ್ಯಾಯಾಲಯಕ್ಕೆ ಕರೆಸಬೇಕೆಂಬ ಉದ್ದೇಶವೇ ನಮಗಿರುವುದಿಲ್ಲ. ಈ ರೀತಿ ನಡೆದುಕೊಂಡಾಗ ಕರೆಸಲೇಬೇಕಾಗುತ್ತದೆ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿತು.
ಈ ವೇಳೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಪೀಠಕ್ಕೆ ಮನವಿ ಮಾಡಿ, ಕ್ಯಾಬಿನೆಟ್ ಮೀಟಿಂಗ್ ಇದ್ದುದರಿಂದ ಅಧಿಕಾರಿಗಳಿಗೆ ಹಾಜರಾಗಲು ಕಷ್ಟವಾಗಿದೆ. ಈ ಕುರಿತು ಅಧಿಕಾರಿಗಳಿಗೆ ಸೂಕ್ತ ತಿಳುವಳಿಕೆ ನೀಡಲಾಗುವುದು ಎಂದರು. ಇದಕ್ಕೆ ಒಪ್ಪದ ಪೀಠ, ಸರ್ಕಾರ ನ್ಯಾಯಾಲಯದ ಆದೇಶಗಳನ್ನು ತೀರಾ ಹಗುರವಾಗಿ ನೋಡುತ್ತಿದೆ. ಇದು ಕೂಡಲೇ ಕೊನೆಗೊಳ್ಳಬೇಕು. ನ್ಯಾಯಾಲಯದ ಆದೇಶ, ಸೂಚನೆಗಳಿದ್ದಾಗ ಅಧಿಕಾರಿಗಳು ಯಾವುದೇ ಕಾರಣ, ನೆಪಗಳನ್ನು ನೀಡಿ ವಿಚಾರಣೆಗೆ ತಪ್ಪಿಸಿಕೊಳ್ಳಬಾರದು. ಈ ಕುರಿತು ಸೂಕ್ತ ಸುತ್ತೋಲೆ ಹೊರಡಿಸಿ ಎಂದು ಸೂಚಿಸಿ, ವಿಚಾರಣೆ ಮುಂದೂಡಿತು.
ಇದನ್ನೂ ಓದಿ:ಮೈಸೂರಿನ ಸುಧರ್ಮ ಸಂಸ್ಕೃತ ಪತ್ರಿಕೆಯ ಕೆ.ಎಸ್.ಜಯಲಕ್ಷ್ಮಿಗೆ 'ಪದ್ಮಶ್ರೀ' ಗೌರವ