ಬೆಂಗಳೂರು: ಬರೋಬ್ಬರಿ ಎರಡು ವರ್ಷಗಳ ಬಳಿಕ ಹೊಸ ವರ್ಷದ ಸಂಭ್ರಮಾಚರಣೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಿದ್ಧವಾಗಿದೆ. ಕೋವಿಡ್ ಕಾರಣದಿಂದ ಎರಡು ವರ್ಷ ಸಾಮೂಹಿಕ ಸಂಭ್ರಮಾಚರಣೆಗೆ ವಿಧಿಸಲಾಗಿದ್ದ ನಿರ್ಬಂಧ ಈ ವರ್ಷ ಇಲ್ಲ. ಇವತ್ತು ಸಂಜೆಯಿಂದಲೇ ನಗರದ ಪ್ರಮುಖ ಸ್ಥಳಗಳಲ್ಲಿ ಪಾರ್ಟಿ ಪ್ರಿಯರು ಕಿಕ್ಕಿರಿದು ಸೇರುವ ನಿರೀಕ್ಷೆಯಿದೆ. ಆದ್ದರಿಂದ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಎಚ್ಚರ ವಹಿಸುವ ಜವಬ್ದಾರಿ ಬೆಂಗಳೂರು ಪೊಲೀಸರ ಮೇಲಿದೆ.
ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಎಂದರೆ ಮೊದಲು ನೆನಪಾಗುವುದೇ ಬ್ರಿಗೇಡ್ ರೋಡ್, ಎಂ.ಜಿ.ರೋಡ್ ಹಾಗೂ ಚರ್ಚ್ ಸ್ಟ್ರೀಟ್. ಈ ಮೂರು ರಸ್ತೆಗಳಲ್ಲಿ ಪಾರ್ಟಿ ಪ್ರಿಯರ ಸಂಖ್ಯೆ ಅಧಿಕವಾಗಿರಲಿದ್ದು, ಭದ್ರತಾ ದೃಷ್ಟಿಯಿಂದ ರಸ್ತೆಯ ಮೂಲೆ ಮೂಲೆಯಲ್ಲಿ ಸಿಸಿಟಿವಿಗಳನ್ನ ಅಳವಡಿಸಲಾಗಿದೆ. ಎಲ್ಲ ಸಿಸಿಟಿವಿ ದೃಶ್ಯಗಳ ಮೇಲೆ ಕಣ್ಣಿಡಲು ಬ್ರಿಗೇಡ್ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ತಾತ್ಕಾಲಿಕ ವಾರ್ ರೂಮ್ ತೆರೆಯಲಾಗಿದ್ದು, 500ಕ್ಕೂ ಅಧಿಕ ಸಿಸಿಟಿವಿಗಳನ್ನ ಒಂದೇ ಕೊಠಡಿಯಿಂದ ನಿಯಂತ್ರಿಸುವ ವ್ಯವಸ್ಥೆ ಒದಗಿಸಲಾಗಿದೆ.