ಬೆಂಗಳೂರು: ಸಾರ್ಸ್ ವೈರಾಣುಗಿಂತ ಕೊರೊನಾ ವೈರಸ್ ಭೀಕರ ಮತ್ತು ಗಂಭೀರ ಅಲ್ಲ. ಕೊರೊನಾ ಡೆಡ್ಲಿ ವೈರಸ್ ಅಲ್ಲ. ಜನರು ಆತಂಕ ಪಡುವ ಅಗತ್ಯ ಇಲ್ಲವೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ, ರಾಯಚೂರು, ಬೀದರ್, ಮಂಡ್ಯ, ಉಡುಪಿ ಜಿಲ್ಲೆಗಳಿಂದ ವಿಡಿಯೋ ಸಂವಾದದ ಮೂಲಕ ಮಾಹಿತಿ ಪಡೆದುಕೊಂಡಿದ್ದೇನೆ ಮತ್ತು ಅಧಿಕಾರಿಗಳ ಜೊತೆಗೂ ಚರ್ಚೆ ನಡೆಸಿದ್ದೇನೆ. ಹಲವು ರಾಜ್ಯಗಳಿಂದ ಕಳೆದ ಒಂದು ವಾರದಿಂದ ಕಲಬುರಗಿ ಜಿಲ್ಲೆಗೆ ಸುಮಾರು 35, 870 ಜನರು ಬಂದಿದ್ದಾರೆ. ಇವರಲ್ಲಿ 29, 978 ಮಂದಿಗೆ ಕ್ವಾರಂಟೈನ್ ಮಾಡಲಾಗಿದೆ. 5,892 ಕ್ವಾರಂಟೈನ್ನಲ್ಲಿದ್ದಾರೆ. 13,711 ಮಂದಿಯಿಂದ ಸ್ಯಾಂಪಲ್ ಸಂಗ್ರಹಿಸಲಾಗಿದೆ. 6894 ಮಂದಿಗೆ ಪರೀಕ್ಷೆಯಾಗಿದೆ. ಇದರಲ್ಲಿ 152 ಮಂದಿಗೆ ಪಾಸಿಟಿವ್ ಬಂದಿದೆ. ಅದರಲ್ಲಿ ಒಂದು ಮಾತ್ರ ಗಂಭೀರ ಸ್ಥಿತಿ ಇದೆ. ಆ ವ್ಯಕ್ತಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವ ಹಿನ್ನೆಲೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದರು.
ಯಾದಗಿರಿ ಜಿಲ್ಲೆಗೆ ವಿವಿಧ ರಾಜ್ಯಗಳಿಂದ 14,600 ಜನ ಬಂದಿದ್ದು, ಅದರಲ್ಲಿ 244 ಪಾಸಿಟಿವ್ ಬಂದಿದೆ. ಆದರೆ ಯಾರಿಗೂ ಕೂಡ ರೋಗದ ಲಕ್ಷಣಗಳು ಕಂಡು ಬಂದಿಲ್ಲ. 6,022 ಮಂದಿಗೆ ಟೆಸ್ಟ್ ಮಾಡಿದ್ದೇವೆ. ಅದರಲ್ಲಿ ಗಂಭೀರ ಸ್ಥಿತಿ ಯಾರಿಗೂ ಇಲ್ಲ. ಜನರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಮನವಿ ಮಾಡಿದರು. ರಾಯಚೂರು ಜಿಲ್ಲೆಗೆ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ 11,300 ಬಂದಿದ್ದು, 2500 ಜನರಿಗೆ ಟೆಸ್ಟ್ ಮಾಡಿಸಲಾಗಿದೆ. ಇವರಲ್ಲಿ ಮಹಾರಾಷ್ಟ್ರದಿಂದ 3,300 ಬಂದಿದ್ದಾರೆ. ಇದರಲ್ಲಿ 133 ಮಂದಿಗೆ ಪಾಸಿಟಿವ್ ಬಂದಿದೆ. ಆಂಧ್ರ ಪ್ರದೇಶದಿಂದ ಬಂದಿರುವ ಒಬ್ಬರಿಗೆ ಮಾತ್ರ ಪಾಸಿಟಿವ್ ಬಂದಿದೆ.800 ಮಂದಿಗೆ ಟೆಸ್ಟ್ ಆಗಬೇಕಿದೆ ಎಂದು ಮಾಹಿತಿ ನೀಡಿದರು.
ಮಂಡ್ಯ ಜಿಲ್ಲೆಗೆ ಮಹಾರಾಷ್ಟ್ರದಿಂದ ಮತ್ತು ತಮಿಳುನಾಡಿನಿಂದ 15,564 ಮನೆಗೆ ಬಂದಿದ್ದು, ಇದರಲ್ಲಿ 2,242 ಬಂದಿದೆ. ಇವರಲ್ಲಿ ಯಾರಿಗೂ ಗಂಭೀರ ಸ್ಥಿತಿ ಇಲ್ಲ. ಇನ್ನೂ 706 ಜನರ ಫಲಿತಾಂಶ ಬರಬೇಕಿದೆ. ಅನ್ಯ ರಾಜ್ಯಗಳಿಂದ ಬೀದರ್ ಜಿಲ್ಲೆಗೆ 16,852 ಮಂದಿ ಬಂದಿದ್ದಾರೆ. ಇದರಲ್ಲಿ 15,016 ಜನರನ್ನು ಟೆಸ್ಟ್ ಮಾಡಿಸಲಾಗಿದೆ. 7,054 ಮಂದಿಯ ಪರೀಕ್ಷಾ ವರದಿ ಬರಬೇಕಿದೆ. ಇವರಲ್ಲಿ 72 ಮಂದಿಗೆ ಪಾಸಿಟಿವ್ ಬಂದಿದೆ. ಇದರಲ್ಲಿ ಒಬ್ಬರಿಗೆ ಹೆಚ್ಐವಿ ಇದ್ದ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಸಮುದಾಯಕ್ಕೆ ಹರಡಿಲ್ಲ: ಸೋಂಕಿತ ವ್ಯಕ್ತಿಯನ್ನು ಸಮಾಜದಿಂದ ದೂರ ಮಾಡಲಾಗುತ್ತಿದೆ. ಇಂತಹ ಮನಸ್ಥಿತಿ ಹೋಗಬೇಕು. ಹೊರ ರಾಜ್ಯದಿಂದ ಬಂದವರಿಂದ ಸೋಂಕು ಹರಡಿದೆ ಮತ್ತು ಸಮುದಾಯದಕ್ಕೆ ಬಂದಿದೆ ಎಂಬ ಮಾಹಿತಿ ತಪ್ಪು ಸಮುದಾಯದಲ್ಲಿದೆ. ಆದರೆ ಕೊರೊನಾ ಸಮುದಾಯದಕ್ಕೆ ಹರಡಿಲ್ಲವೆಂದು ಸಚಿವರು ಸ್ಪಷ್ಟಪಡಿಸಿದರು. ಕರ್ನಾಟಕದಲ್ಲಿ ವಸ್ತುನಿಷ್ಠ ಮಾಹಿತಿ ನೀಡಿದ್ದು, ಯಾವುದೇ ಪ್ರಕರಣಗಳನ್ನು ಮುಚ್ಚಿಲ್ಲ. ಅತ್ಯಂತ ಪಾರದರ್ಶಕವಾಗಿ ಮಾಹಿತಿ ನೀಡಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.
ನಾಳೆ ಲಾಕ್ ಡೌನ್ ಮುಗಿಯುವ ಹಂತದಲ್ಲಿದ್ದು, ಕ್ವಾರಂಟೈನ್ ನೀತಿಯನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡುವ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಇದಕ್ಕೆ ಸಂಬಂಧಿಸಿದ ಸಚಿವರ ಜೊತೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಕ್ವಾರಂಟೈನ್ ನೀತಿಯನ್ನು ಬದಲಾಯಿಸುವ ಬಗ್ಗೆ ಇನ್ನೆರಡು ಮೂರು ದಿನಗಳಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.