ಬೆಂಗಳೂರು:ನಿನ್ನೆ ದೇಶದಲ್ಲಿ ಕೊವ್ಯಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ ದೊರೆತಿದ್ದು, ಇಂದಿನಿಂದ ರಾಜ್ಯದಲ್ಲಿ ಕೊರೊನಾ ವ್ಯಾಕ್ಸಿನ್ ತಾಲೀಮು ಆರಂಭವಾಗಿದೆ. ರಾಜ್ಯದ 5 ಜಿಲ್ಲೆಗಳಲ್ಲಿ ವ್ಯಾಕ್ಸಿನ್ ಡ್ರೈ ರನ್ ನಡೆಯುತ್ತಿದೆ.
ಬೆಂಗಳೂರು, ಕಲಬುರಗಿ, ಮೈಸೂರು, ಬೆಳಗಾವಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಡ್ರೈ ರನ್ ಆರಂಭಗೊಂಡಿದೆ. ಪ್ರತಿ ಜಿಲ್ಲೆಯಲ್ಲಿಯೂ 3 ಕೇಂದ್ರಗಳಲ್ಲಿ ಲಸಿಕಾ ಹಂಚಿಕೆ ತಾಲೀಮು ನಡೆಯುತ್ತಿದೆ. ಪ್ರತಿಯೊಂದು ಆರೋಗ್ಯ ಕೇಂದ್ರದಲ್ಲಿ ತಲಾ 5 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಮತ್ತು ಈ ನಿಯೋಜಿತ ಸಿಬ್ಬಂದಿಗೆ ಲಸಿಕೆ ಡ್ರೈ ರನ್ ಕುರಿತು ತರಬೇತಿ ನೀಡಲಾಗಿದೆ.
ಹೇಗಿರಲಿದೆ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆ: ಪ್ರತಿ ಜಿಲ್ಲೆಯಲ್ಲಿಯೂ ಆರೋಗ್ಯ ಕೇಂದ್ರದಲ್ಲಿರುವ ಕೊರೊನಾ ವಾರಿಯರ್ಸ್‌ಗಳನ್ನು ಲಸಿಕೆಯ ಫಲಾನುಭವಿಗಳಾಗಿ ಆಯ್ಕೆ ಮಾಡಲಾಗಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಆರಂಭವಾಗಿ ಮಧ್ಯಾಹ್ನ 12 ಗಂಟೆಯ ವರೆಗೂ ಏಕಕಾಲಕ್ಕೆ ಲಸಿಕಾ ತಾಲೀಮು ನಡೆಯುತ್ತಿದೆ. ಫಲಾನುಭವಿಗಳು ಹೆಸರು ನೊಂದಾಯಿಸುವಾಗ ನೀಡಿದ ದಾಖಲಾತಿಗಳನ್ನು, ವ್ಯಾಕ್ಸಿನ್ ಪಡೆಯಲು ಬರುವಾಗ ತರಬೇಕು. ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿಯನ್ನು ದಾಖಲೆಗಳಾಗಿ ಪರಿಗಣಿಸಲಾಗಿದೆ.
ಇದನ್ನೂ ಓದಿ;ಕೋವಿಡ್ ವ್ಯಾಕ್ಸಿನ್ ಡ್ರೈ ರನ್: ಕರ್ನಾಟಕ ಸೇರಿ ಎಲ್ಲ ಕಡೆ ಶುರು
ಬಳಿಕ ಪ್ರತಿ ಕೇಂದ್ರದಲ್ಲಿ ತರಬೇತಿ ಪಡೆದ ಐದು ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಯ್ಕೆಯಾದ ಫಲಾನುಭವಿಗಳು ಅವರಿಗಾಗಿ ನಿಗದಿ ಪಡಿಸಿದ ಕೇಂದ್ರಕ್ಕೆ ಬರುತ್ತಾರೆ. ಬಳಿಕ ಕೇಂದ್ರದಲ್ಲಿ ದಾಖಲಾತಿ ಪರಿಶೀಲನೆ ನಡೆಸಿ, ಒಂದು ಕೋಣೆಯಲ್ಲಿ ಕೂರಿಸಲಾಗುತ್ತದೆ. ನಂತರ ಓರ್ವ ಸಿಬ್ಬಂದಿ, ಅವರಿದ್ದ ಕೋಣೆಗೆ ತೆರಳಿ ಫಲಾನುಭವಿಗೆ ವ್ಯಾಕ್ಸಿನ್ ಬಗ್ಗೆ ಮಾಹಿತಿ ನೀಡುತ್ತಾರೆ. ಸಂಪೂರ್ಣ ಮಾಹಿತಿ ನೀಡಿದ ಬಳಿಕವೇ ಫಲಾನುಭವಿಯನ್ನು ಲಸಿಕೆ ಹಾಕುವ ಕೋಣೆಗೆ ಕರೆದೊಯ್ಯಲಾಗುತ್ತದೆ. ಬಳಿಕ ವ್ಯಾಕ್ಸಿನ್ ರೋಂನಲ್ಲಿರುವ ಸಿಬ್ಬಂದಿ ಫಲಾನುಭವಿಗೆ ಕೊರೊನಾ ಲಸಿಕೆ ಹಾಕುತ್ತಾರೆ. ವ್ಯಾಕ್ಸಿನ್ ಪಡೆದ ಫಲಾನುಭವಿಯನ್ನು ಮತ್ತೊಂದು ಕೋಣೆಯಲ್ಲಿ ಕೂರಿಸಿ ಅರ್ಧ ಗಂಟೆಗಳ ಕಾಲ ಅವರ ಮೇಲೆ ನಿಗಾವಹಿಸಲಾಗುತ್ತದೆ. ಮೂವತ್ತು ನಿಮಿಷದಲ್ಲಿ ಯಾವುದೇ ಸಮಸ್ಯೆ ಕಂಡು ಬರದೇ ಆರಾಮವಾಗಿದ್ದರೆ ಆ ಫಲಾನುಭವಿಯನ್ನು ಮನೆಗೆ ಕಳುಹಿಸಲಾಗುತ್ತದೆ.
ರಾಜ್ಯದ 5 ಜಿಲ್ಲೆಗಳಲ್ಲಿ ವ್ಯಾಕ್ಸಿನ್ ಡ್ರೈ ರನ್:
- ಬೆಂಗಳೂರು: ದಕ್ಷಿಣ ವಲಯದ ವಿದ್ಯಾಪೀಠ ಸಾರ್ವಜನಿಕ ಆರೋಗ್ಯ ಕೇಂದ್ರ, ಪಶ್ಚಿಮ ವಲಯದ ಕಾಮಾಕ್ಷಿಪಾಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆನೇಕಲ್‌ನ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ - 19 ವ್ಯಾಕ್ಸಿನೇಷನ್ ಡ್ರೈ ರನ್ ನಡೆಯುತ್ತಿದೆ. 1,65,000 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ.
- ಮೈಸೂರು: ಜಯನಗರದ ಸಮುದಾಯ ಆರೋಗ್ಯ ಕೇಂದ್ರ, ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆ ಮತ್ತು ಹುಣಸೂರಿನ ಬಿಳಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಡ್ರೈ ರನ್ ನಡೆಯುತ್ತಿದೆ.
- ಕಲಬುರಗಿ :ಅಶೋಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಜೇವರ್ಗಿ ತಾಲೂಕು ಆಸ್ಪತ್ರೆ ಮತ್ತು ಔರಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆ ತಾಲೀಮು ನಡೆಯುತ್ತಿದೆ.
- ಶಿವಮೊಗ್ಗ: ಭದ್ರಾವತಿ ಅಂತರಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿಕಾರಿಪುರ ತಾಲೂಕು ಆಸ್ಪತ್ರೆ, ಶಿವಮೊಗ್ಗ ಮೆಡಿಕಲ್ ಕಾಲೇಜ್ ಕೇಂದ್ರದಲ್ಲಿ ಲಸಿಕೆ ಡ್ರೈ ರನ್ ನಡೆಯುತ್ತಿದೆ.
- ಬೆಳಗಾವಿ: ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರ, ಹುಕ್ಕೇರಿ ತಾಲೂಕು ಅಸ್ಪತ್ರೆಯಲ್ಲಿ ಲಸಿಕೆ ಡ್ರೈ ರನ್ ನಡೆಯುತ್ತಿದೆ.