ಬೆಂಗಳೂರು: ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಾಲ್ಕು ವರ್ಷದಿಂದಲೂ ನನಗೆ ಉಸಿರಾಟದ ಸಮಸ್ಯೆ ಇತ್ತು. ನಮ್ಮ ವಾರ್ಡ್ ಬಡಜನರಿಂದ ಕೂಡಿದ್ದು, ಹಬ್ಬದ ಸಮಯದಲ್ಲಿ ಜವಾಬ್ದಾರಿ ಹೆಚ್ಚಾಗಿಯೇ ಇತ್ತು. ಈ ನಡುವೆ ಹೆಚ್ಚಿನ ಓಡಾಟ ಮಾಡಿ ಜನರ ಮಧ್ಯೆ ಹೋಗಿ ಸೇವೆ ಸಲ್ಲಿಸಿದ್ದೆ. ಬಳಿಕ ಹೊರಗೆ ಹೋಗುವುದನ್ನು ಸ್ವಲ್ಪ ಅವಾಯ್ಡ್ ಮಾಡಿ ಮನೆಯಲ್ಲೇ ಇದ್ದೆ. ಹಬ್ಬದ ಬಳಿಕ ಮನೆಯಿಂದ ಹೊರಗೆ ಹೋಗಿಲ್ಲ. ನಿನ್ನೆ ವೀಸಿಂಗ್ ಸಮಸ್ಯೆಯ ಚೆಕಪ್ಗಾಗಿ ಆಸ್ಪತ್ರೆಗೆ ಹೋಗಿದ್ದು, ವೈದ್ಯರು ಕೊರೊನಾ ಟೆಸ್ಟ್ ಮಾಡಿಸಿ ಎಂದಿದ್ದರು. ಹಾಗಾಗಿ ಕೋವಿಡ್-19 ಟೆಸ್ಟ್ ಮಾಡಿದಾಗ ಪಾಸಿಟಿವ್ ಎಂದು ವರದಿ ಬಂದಿದೆ ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ಚೀನಾದಿಂದ ಬಂದಿದ್ದು, ಎಲ್ಲರೂ ಇದರ ವಿರುದ್ಧ ಹೋರಾಡಬೇಕಿದೆ. ಜನತೆಗೆ ಕಷ್ಟ ಇದ್ದಾಗ ಜೊತೆಗೆ ನಿಲ್ಲಬೇಕಿತ್ತು. ಹಾಗಾಗಿ ವಾರ್ಡ್ ತುಂಬಾ ಓಡಾಡಿ ಕೆಲಸ ಮಾಡಿದೆ. ಜವಾಬ್ದಾರಿ ಕೊಟ್ಟ ಮೇಲೆ ನಾವು ಎದುರಿಸಬೇಕು. ನಾನು ಸ್ವಾರ್ಥಕ್ಕಾಗಿ ರಾಜಕೀಯ ಮಾಡಲ್ಲ. ಸುರಕ್ಷತೆ ತಗೆದುಕೊಂಡೇ ಮೊದಲ ದಿನದಿಂದಲೂ ಫೀಲ್ಡ್ನಲ್ಲಿದ್ದೆ. ಆದ್ರೆ ಇದೀಗ ಕೊರೊನಾ ತಗುಲಿದ್ದು, ವಾರ್ಡ್ ಜನರು ನನಗಾಗಿ ಪ್ರಾರ್ಥಿಸುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಆದಷ್ಟು ಬೇಗ ಗುಣಮುಖವಾಗಿ ಬರುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆಸ್ಪತ್ರೆಗೆ ಶಿಫ್ಟ್: ಬರೋಬ್ಬರಿ ಹನ್ನೆರಡು ಗಂಟೆ ಬಳಿಕ ಕೊರೊನಾ ಸೋಂಕಿತರಾದ ಕಾರ್ಪೋರೇಟರ್ರನ್ನು ಆಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪಿಪಿಇ ಕಿಟ್ ಧರಿಸಿ ಮನೆಯಿಂದ ತೆರಳಿ ಆಸ್ಪತ್ರೆಗೆ ದಾಖಲಾದರು. ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಬೆಂಬಲಿಗರು ಮನೆ ಬಳಿ ಜಮಾಯಿಸಿದ್ದರು. ಆಸ್ಪತ್ರೆಗೆ ಶಿಫ್ಟ್ ಮಾಡಿದ ಬಳಿಕ ಮನೆ ಸುತ್ತಮುತ್ತ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ನಿನ್ನೆ ರಾತ್ರಿ ವರದಿ ಕನ್ಫರ್ಮ್ ಆಗಿರಲಿಲ್ಲ. ಇಂದು ಬೆಳಗ್ಗೆ ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಹೋಗುತ್ತಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.