ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಡಾ.ಸುಧಾಕರ್, ಸಿ.ಟಿ ರವಿ ಕುಟುಂಬದ ನಂತರ ಇದೀಗ ಕೃಷಿ ಸಚಿವ ಬಿ.ಸಿ ಪಾಟೀಲ್ ಕುಟುಂಬ ಹಾಗು ಸಿಬ್ಬಂದಿ ವರ್ಗಕ್ಕೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಬಿಸಿ ಪಾಟೀಲ್ ಹಾಗೂ ಅವರ ಪತ್ನಿ , ಅಳಿಯ ಹಾಗೂ ಹಿರೇಕೆರೂರಿನ ನಿವಾಸದ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಬಗ್ಗೆ ಸಚಿವರ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಇದೀಗ ಬಂದ ವರದಿಯ ಪ್ರಕಾರ ನನಗೆ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಬೆಂಗಳೂರಿನ ನನ್ನ ನಿವಾಸದಲ್ಲಿ ಹೋಂ ಕ್ವಾರಂಟೈನ್ ಆಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಕೊರೊನಾ ಹಬ್ಬುತ್ತಿರುವುದರಿಂದ, ಎಲ್ಲರೂ ಮನೆಯಲ್ಲಿ ಸುರಕ್ಷಿತವಾಗಿರಿ, ಹೊರಗೆ ಬರಲೇ ಬೇಡಿ, ಮನೆಯಿಂದ ಹೊರಗೆ ಬರಲೇ ಬೇಕಾದ ಸಂದರ್ಭವಿದ್ದಲ್ಲಿ, ಆಗಾಗ ಕೈ ತೊಳೆಯುತ್ತಾ, ಸ್ಯಾನಿಟೈಜರ್ ಬಳಸುತ್ತಾ, ಅಂತರ ಕಾಯ್ದುಕೊಂಡು, ಸರ್ಕಾರದ ನಿಯಮಗಳನ್ನು ಚಾಚೂತಪ್ಪದೇ ಪಾಲಿಸಿ ಎಂದು ಜನರಿಗೆ ಸಲಹೆ ನೀಡಿದ್ದಾರೆ.
ಆತಂಕ: ಇದೇ ಜುಲೈ 27 ರಂದು ಸಚಿವ ಬಿ.ಸಿ. ಪಾಟೀಲ್ ಅವರು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಕಚೇರಿ ಉದ್ಘಾಟನೆ, ಜಿಲ್ಲಾಡಳಿತದ ಭವನದಲ್ಲಿರುವ ಆಡಿಟೋರಿಯಂ ಹಾಲ್ನಲ್ಲಿ ನಡೆದ ಬಿಜೆಪಿ ಸರ್ಕಾರದ ಒಂದು ವರ್ಷದ ನೇರ ಸಂವಾದ ಕಾರ್ಯಕ್ರಮ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ದಡೇಸೂಗೂರು, ಹಾಲಪ್ಪ ಆಚಾರ್, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಸೇರಿ ಅನೇಕ ಅಧಿಕಾರಿಗಳು, ಕಾರ್ಯಕರ್ತರು, ಮುಖಂಡರು ಅಂದು ಸಚಿವರನ್ನು ಭೇಟಿ ಮಾಡಿದ್ದಾರೆ. ಈಗ ಸಚಿವರಿಗೆ ಸೋಂಕು ದೃಢಪಟ್ಟಿರೋದು ಆತಂಕಕ್ಕೆ ಕಾರಣ ಮೂಡಿಸಿದೆ.