ಬೆಂಗಳೂರು: ಜನರ ಮನಸ್ಸಿನಲ್ಲಿ ಕೊರೊನಾ ಭೀತಿ ಎಷ್ಟು ಅಚ್ಚೊತ್ತಿದೆ ಎನ್ನುವುದಕ್ಕೆ ಬೇಕರಿಯಲ್ಲಿ ನಡೆಯುತ್ತಿರುವ ವ್ಯಾಪಾರವೇ ಸಾಕ್ಷಿಯಾಗಿ ಗೋಚರಿಸುತ್ತದೆ. ರಾಜ್ಯ ಸರ್ಕಾರ ಬೇಕರಿ ಉತ್ಪನ್ನವನ್ನೂ ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿ ಬೇಕರಿಗಳನ್ನು ತೆರೆಯಲು ಪರವಾನಗಿ ನೀಡಿ ಆದೇಶ ಹೊರಡಿಸಿದೆ. ಆದರೆ, ಇದಾಗಿ 15 ದಿನ ಕಳೆದರೂ, ಜನ ಹೆಚ್ಚಾಗಿ ಬೇಕರಿ ಉತ್ಪನ್ನ ಕೊಳ್ಳಲು ಬರುತ್ತಿಲ್ಲ. ಇದಕ್ಕೆ ಕಾರಣ ಮತ್ತದೇ ಕೊರೊನಾ ಆತಂಕ..!
ಬೆಂಗಳೂರಿನಲ್ಲಿ ಸದ್ಯ ಕೋವಿಡ್-19 ಅಟ್ಟಹಾಸ ಕೊಂಚ ತಣ್ಣಗಾಗಿದೆ. ಕೆಲ ಪ್ರದೇಶ ಹೊರತುಪಡಿಸಿದರೆ ಉಳಿದೆಲ್ಲಿಯೂ ಇದರ ಅಸ್ಥಿತ್ವ ಗೋಚರಿಸುತ್ತಿಲ್ಲ. ಲಾಕ್ಡೌನ್ ತೆರವಾಗದಿದ್ದರೂ, ಸಾಕಷ್ಟು ಸಡಿಲಿಕೆಯಾಗಿ ಜನರಂತೂ ಬೀದಿಗಿಳಿದಿದ್ದಾರೆ. ಆದರೆ, ಮಹಾನಗರದ ಬಹುತೇಕ ಬೇಕರಿಗಳು ಬಾಗಿಲು ತೆರೆದಿದ್ದರೂ, ನಿತ್ಯ ಆಗಬೇಕಿದ್ದ ಕನಿಷ್ಠ ವ್ಯಾಪಾರ ಕೂಡ ಆಗದೇ ಬಸವಳಿದಿವೆ.
ಅಸಂಘಟಿತ ವಲಯದಲ್ಲಿ ಬರುವ ಬೇಕರಿಗಳು ಬೆಂಗಳೂರಿನಲ್ಲಿ ಸರಿಸುಮಾರು 1 ಲಕ್ಷದಷ್ಟಿವೆ. ಆದರೆ, ಕೆಲ ಕಂಪನಿಗಳು ಸರಣಿ ರೂಪದಲ್ಲಿ ಬೇಕರಿ ಹೊಂದಿವೆ. ದೇಶ - ವಿದೇಶಗಳ ಮಾಲೀಕತ್ವದ ಬೇಕರಿ ಬೆಂಗಳೂರಿನಲ್ಲಿದೆ. ನಿತ್ಯ ಲಕ್ಷಾಂತರ ರೂ. ವಹಿವಾಟು ಮಾಡುತ್ತಿದ್ದ ಬೇಕರಿಗಳು ಕೂಡ ನಗರದಲ್ಲಿವೆ. 1.38 ಕೋಟಿ ಜನಸಂಖ್ಯೆ ಒಳಗೊಂಡಿರುವ ಬೆಂಗಳೂರು ನಗರದಲ್ಲಿ ಬೆಳಗಿನ ಆಹಾರ, ಮಧ್ಯಾಹ್ನದ ಕುರುಕಲು ತಿಂಡಿ, ಸಂಜೆಯ ಉಪಹಾರ, ಮಕ್ಕಳ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಕಂಪನಿಯ ಪ್ರಮೋಷನ್, ಯಾರನ್ನಾದರೂ ಸಂತಸ ಪಡಿಸಲು ವಿಶೇಷ ತಿಂಡಿಗೆ ಬೆಂಗಳೂರಿಗರು ಅವಲಂಬಿಸಿದ್ದು ಬೇಕರಿಯನ್ನು. ಮನೆಯಲ್ಲಿ ಸಿದ್ಧಪಡಿಸಿಕೊಳ್ಳಲು ಸಾಧ್ಯವಿರುವಂತಹ ತಿಂಡಿಯನ್ನೇ ಬೇಕರಿಯಲ್ಲಿ ಸಿದ್ಧಪಡಿಸಲಾಗುತ್ತದೆ. ಆದರೆ, ಇಲ್ಲಿ ಕೊಂಡು ತಿನ್ನುವ ರುಚಿಯೇ ಬೇರೆ. ಸಿಹಿ ತಿಂಡಿಗಳು ಹೆಚ್ಚಾಗಿ ಸಿಗುವ ಬೇಕರಿಯಲ್ಲಿ ಖಾರದ ತಿಂಡಿಗೂ ಬರವಿಲ್ಲ. ಮನೆಗೆ ಕೊಂಡೊಯ್ದು ತಿಂಗಳುಗಳ ಕಾಲ ಇಟ್ಟು ಬಳಸುವ ಉತ್ಪನ್ನಗಳು ಕೂಡ ಇಂದು ಬೇಕರಿಯಲ್ಲಿ ಲಭ್ಯವಿದೆ. ಆದರೆ, ಜನರ ಮನಸ್ಸಿನಲ್ಲಿರುವ ಕೊರೊನಾ ಆತಂಕ ಇವೆಲ್ಲಕ್ಕೂ ಬೆಲೆ ಇಲ್ಲದಂತೆ ಮಾಡಿದೆ.