ಬೆಂಗಳೂರು:ಅಬಕಾರಿ ಸಚಿವ ಎಚ್. ನಾಗೇಶ್ ಕಚೇರಿಯ ಮೂವರು ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ವಿಕಾಸಸೌಧದಲ್ಲಿರುವ ಸಚಿವರ ಕೊಠಡಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಸಿಬ್ಬಂದಿಗೆ ಸೋಂಕು.. ಅಬಕಾರಿ ಸಚಿವರ ಕಚೇರಿ ಸೀಲ್ ಡೌನ್
ಮಹಾನಗರದಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅವರ ಆಪ್ತ ವಲಯದಲ್ಲಿ ಇರುವವರಿಗೆ ಮತ್ತು ಕಚೇರಿ ಸಿಬ್ಬಂದಿಗೆ ಸೋಂಕು ದೃಢಪಡುತ್ತಿದೆ. ಪರಿಣಾಮ ಸುಗಮ ಆಡಳಿತ ನಿರ್ವಹಣೆ ಕಷ್ಟಸಾಧ್ಯವಾಗಿದೆ.
ಸಚಿವ ಎಚ್. ನಾಗೇಶ್ ಅವರ ಇಬ್ಬರು ಗನ್ ಮ್ಯಾನ್ ಹಾಗೂ ಓರ್ವ ಆಪ್ತ ಅಹಾಯಕನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಎಚ್. ನಾಗೇಶ್ ಅವರನ್ನೂ ಕೂಡ ತಪಾಸಣೆಗೆ ಒಳಪಡಿಸಲಾಗಿದ್ದು ಅವರ ವರದಿ ನೆಗೆಟಿವ್ ಬಂದಿದೆ. ಈ ಹಿನ್ನೆಲೆ ಅವರು ಹೋಂ ಕ್ವಾರಂಟೈನ್ ಆಗಿದ್ದಾರೆ. ವಿಕಾಸ ಸೌಧದ ಮೂರನೇ ಮಹಡಿಯಲ್ಲಿರುವ ಅಬಕಾರಿ ಸಚಿವರ ಕೊಠಡಿ ಸುತ್ತಲೂ ಸ್ಯಾನಿಟೈಸ್ ಮಾಡಿ ಸೀಲ್ ಡೌನ್ ಮಾಡಲಾಗಿದೆ.
ಇತ್ತೀಚೆಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಸರ್ಕಾರಿ ನೌಕರರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಳ್ಳುತ್ತಿದ್ದು, ಇವರು ಕಾರ್ಯನಿರ್ವಹಿಸುವ ಕಚೇರಿಯನ್ನು ಕೆಲದಿನಗಳ ಮಟ್ಟಿಗೆ ಸೀಲ್ ಡೌನ್ ಮಾಡಲಾಗುತ್ತಿದೆ. ಹತ್ತು ದಿನಗಳ ಹಿಂದಷ್ಟೇ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ರವರ ಸಿಬ್ಬಂದಿಗೆ ಕೊರೊನಾ ವಕ್ಕರಿಸಿದ್ದು, ಅವರ ಕೊಠಡಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಅದೇ ರೀತಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರ ಕಚೇರಿ ಸಿಬ್ಬಂದಿಗೆ ಸೋಂಕು ತಗುಲಿದ ಹಿನ್ನೆಲೆ ಅವರ ಕೊಠಡಿಯನ್ನು ಸಹ ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಅಬಕಾರಿ ಸಚಿವರ ಕೊಠಡಿಯನ್ನು ಸೀಲ್ ಡೌನ್ ಮಾಡಲಾಗಿದೆ.