ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಲಾಕ್ಡೌನ್ ಮುಂದುವರಿಕೆಯಾಗಿದ್ದು, ಇಲ್ಲಿನ ಮನೆ ಮಾಲೀಕರಿಗೂ ಆತಂಕ ತಂದೊಡ್ಡಿದೆ. ಈಗಾಗಲೇ ಬೆಂಗಳೂರಿನಲ್ಲಿ ಸಾಕಷ್ಟು ಮನೆಗಳು ಖಾಲಿಯಾಗಿದ್ದು, ಬಾಡಿಗೆದಾರರು ಹಾಗೂ ಮನೆ ಮಾಲೀಕರಿಗೆ ಕೊರೊನಾ ಸಂಕಷ್ಟ ಎದುರಾಗಿದೆ.
ಹೊಸ ಬಾಡಿಗೆ ಮನೆಗೆ ಮುಂಗಡ ಹಣವನ್ನು ನೀಡಿದ್ದ ಕೆಲವರು ಮನೆಗೆ ಪ್ರವೇಶಿಸುವ ಮುಂಚೆ ಪೂಜೆ ನೆರವೇರಿಸಿ ವಾಪಸ್ಸಾಗಿದ್ದರು. ಈಗ ಲಾಕ್ಡೌನ್ನಿಂದಾಗಿ ದಿಕ್ಕು ತೋಚದಂತಾಗಿದ್ದು ಆದಷ್ಟು ಬೇಗ ಲಾಕ್ಡೌನ್ ಅಂತ್ಯವಾಗಲಿ ಎಂದು ಕಾಯುತ್ತಿದ್ದಾರೆ.
ಇನ್ನೊಂದೆಡೆ ಉದ್ಯಾನನಗರಿಯ ಬಹುತೇಕ ಮನೆಗಳ ಮುಂದೆ ಟು ಲೆಟ್ ಬೋರ್ಡ್ಗಳು ಕಾಣಸಿಗುತ್ತವೆ. ಕೊರೊನಾ ಶುರುವಾದಾಗಿನಿಂದಲೂ ಕೂಡಾ ಬಾಡಿಗೆದಾರರು ಸಿಗುತ್ತಿಲ್ಲ. ಮನೆ ಹುಡುಕಿ ಬರುವವರೂ ಕಡಿಮೆ ಇದ್ದಾರೆ. ಕೆಲವೊಮ್ಮೆ ಮನೆ ಇಷ್ಟವಾದರೂ ಕೂಡಾ ಈಗಿನ ನಿಯಮಗಳು ಕುಟುಂಬ ಸ್ಥಳಾಂತರಕ್ಕೆ ಪೂರಕವಾಗಿಲ್ಲ. ಇದರಿಂದ ಮನೆ ಮಾಲೀಕರ ಜೊತೆಗೆ ಮನೆ ಹುಡುಕುವವರಿಗೂ ತಲೆ ನೋವು ಶುರುವಾಗಿದೆ.
ಹೊಸ ಶೈಕ್ಷಣಿಕ ವರ್ಷಾರಂಭಕ್ಕೆ ಮಕ್ಕಳಿಗೆ ಸೂಕ್ತವೆನಿಸುವ ಶಾಲಾ ಪ್ರದೇಶವನ್ನು ಆಧರಿಸಿ ಪೋಷಕರು ಮನೆಗಳನ್ನು ಹುಡುಕುವ ಕೆಲಸಕ್ಕೆ ಕೈ ಹಾಕುತ್ತಾರೆ. ಮಕ್ಕಳಿಗೆ ರಜೆ ಇರುವ ಕಾರಣಕ್ಕೂ ಕೂಡಾ ಮನೆಗಳನ್ನು ಬದಲಾಯಿಸೋದು ಕೂಡಾ ಸುಲಭದ ಕೆಲಸವಾಗಿರುತ್ತದೆ. ಪ್ರತೀ ವರ್ಷ ಇದೇ ರೀತಿಯಲ್ಲಿ ನಡೆಯುತ್ತಿದ್ದು, ಈಗ ಕೊರೊನಾ ಕಾರಣಕ್ಕೆ ಯಾರೂ ಕೂಡಾ ಬಾಡಿಗೆಗೆ ಬರುತ್ತಿಲ್ಲ ಎಂಬುದು ಮಾಲೀಕರಿಗೆ ಸಂಕಷ್ಟ ತಂದೊಡ್ಡಿದೆ.
ಶ್ರೀನಗರದ ನಾಗೇಂದ್ರ ಬ್ಲಾಕ್ ಮನೆಯೊಂದಕ್ಕೆ ಆಗಮಿಸಲು ಸಿದ್ಧತೆ ನಡೆಸಿದ್ದ ಕುಮಾರ್ ದಂಪತಿ ಹೊಸಮನೆಗೆ ಆಗಮಿಸಿ ಹಾಲು ಉಕ್ಕಿಸಿ ತೆರಳಿದ್ದರು. ಒಳ್ಳೆ ದಿನ ನೋಡಿ ಆಗಮಿಸಲು ನಿರ್ಧರಿಸಿದ್ದವರಿಗೆ ಲಾಕ್ ಡೌನ್ ಕಂಟಕವಾಗಿದೆ. ಇದೇ ರೀತಿ ಹೊಸಕೆರೆಹಳ್ಳಿ ದತ್ತಾತ್ರೇಯ ನಗರದ ವೃದ್ಧ ದಂಪತಿ ತಮಗೆ ಬರುವ ವೃದ್ಧಾಪ್ಯ ವೇತನ ಜೊತೆ ಎರಡು ಮನೆಯಿಂದ ಬರುವ ಬಾಡಿಗೆ ನಂಬಿಕೊಂಡಿದ್ದರು. ಆದರೆ ಒಂದು ಮನೆ ಖಾಲಿ ಆಗಿ ಸದ್ಯ ಬಾಡಿಗೆದಾರರೂ ಬಾರದಂತೆ ಆಗಿರುವ ಹಿನ್ನೆಲೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕೆಂದು ತಿಳಿಯದಂತಾಗಿ ಕಂಗಲಾಗಿದ್ದಾರೆ.
ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಶೇ.20ರಿಂದ 30ರಷ್ಟು ಮನೆಗಳು ಖಾಲಿಯಾಗಿ ಬೇರೊಬ್ಬರಿಂದ ತುಂಬುತ್ತವೆ. ಆದರೆ ಮಹಾಮಾರಿ ಕೊರೊನಾ ಹಿನ್ನೆಲೆ ಮನೆ ಹುಡುಕುವವರಿಗೆ ಸದ್ಯಕ್ಕೆ ನೆಲೆಯಿಲ್ಲ ಎಂಬಂತಾಗಿದೆ.