ಬೆಂಗಳೂರು:ಇಡೀ ರಾಜ್ಯ ಕೊರೊನಾ ಭೀತಿಯಿಂದ ಸ್ತಬ್ಧವಾಗಿದ್ದು, ಜನರಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. ಮೆಟ್ರೋ, ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳಿಗೆ ಪ್ರಯಾಣಿಕರಿಲ್ಲದೆ ನಷ್ಟ ಅನುಭವಿಸ್ತವೆ. ಅಲ್ಲದೆ ಕೊರೊನಾ ಎಫೆಕ್ಟ್ನಿಂದ ಖಾಸಗಿ ಟ್ರಾವೆಲ್ ಉದ್ಯಮವು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಎಲ್ಲಾ ಲಕ್ಷ್ಮಣ ಕಂಡು ಬರುತ್ತಿದೆ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಸಂಘ(ರಿ.)ದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ.
ಕೊರೊನಾ ಸೋಂಕಿಗೆ ಸಾರಿಗೆ ಕ್ಷೇತ್ರ ತಲ್ಲಣ ಕಳೆದ ಎರಡೂವರೆ ತಿಂಗಳಿಂದ ಯಾವುದೇ ಪ್ರವಾಸಿ ಕ್ಷೇತ್ರದಲ್ಲಾಗಲಿ, ಔದ್ಯಮಿಕ ಕ್ಷೇತ್ರದ ಸಭೆಗಳಾಗಲಿ, ದೊಡ್ಡ ಮಟ್ಟದಲ್ಲಿ ಐಟಿ-ಬಿಟಿ ಸಂಸ್ಥೆಗಳ ವ್ಯಾವಹಾರಿಕ ಸಮಾರಂಭಗಳು, ಜಾಗತಿಕವಾಗಿ ಗುರುತಿಸಿಕೊಂಡ ವ್ಯಾಪಾರಿ ಸಂಸ್ಥೆಗಳ ಒಪ್ಪಂದಗಳಂತಹ ಸಭೆಗಳು ನಡೆದಿಲ್ಲ.
ವಾಯುಯಾನದಲ್ಲಿ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವೀಸಾ ಸೌಲಭ್ಯಗಳನ್ನು ರದ್ದು ಪಡಿಸಿದ್ದು (ರಾಜತಾಂತ್ರಿಕರಿಗೆ ಮಾತ್ರ ಅನುವು ಮಾಡಿರುವುದು), ಹಲವಾರು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆ ಸ್ಥಗಿತಗೊಳಿಸಿರುವುದು ಉದ್ಯಮಕ್ಕೆ ಕೊರೊನಾ ಸೋಂಕಿನ ಕರಿನೆರಳು ಬೀಳಲು ಶುರು ಆಗಿದೆ ಎಂದರು.
ಇದರ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ರೋಗವನ್ನು ಸಾಂಕ್ರಾಮಿಕ ರೋಗ ಎಂದು ಪರಿಗಣಿಸಿದ್ದರಿಂದ ರಾಜ್ಯ ಸರ್ಕಾರ ಮೆಡಿಕಲ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು ರಾಜ್ಯಾದ್ಯಂತ ಬಂದ್ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಎಲ್ಲಾ ಯಾತ್ರೆ, ಪ್ರವಾಸ, ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಲಾಗಿದೆ. ಐಟಿ-ಬಿಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಲ್ಲಿ ದುಡಿಯುವ ಥರ ವರ್ಕ್ ಫ್ರಮ್ ಹೋಮ್ ಎಂಬ ವ್ಯವಸ್ಥೆ ಮಾಡಿರುವುದರಿಂದ ದೇಶದಲ್ಲಿ ಎರಡನೇ ಅತ್ಯಂತ ಜಾಸ್ತಿ ಸೇವೆ ಕೊಡುವ ಕಾರ್ಮಿಕರನ್ನು ಹೊತ್ತೊಯ್ಯುವ ಕ್ಯಾಬ್ಗಳು ಕೆಲಸವಿಲ್ಲದೆ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ದೊಡ್ಡಮಟ್ಟದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಉದ್ಯೋಗ ಕೊಡುವ 50 ಸಾವಿರಕ್ಕೂ ಅಧಿಕ ಕಾರ್ಮಿಕರನ್ನು (ಚಾಲಕರು, ನಿರ್ವಾಹಕರು, ಮ್ಯಾನೇಜರ್‌ಗಳು) ಹೊಂದಿಕೊಂಡಿರುವ ಉದ್ಯಮ ಸಂಕಷ್ಟದಲ್ಲಿ ಸಿಲುಕುವ ಲಕ್ಷಣ ಕಂಡು ಬರುತ್ತಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿರುವ ಕೊರೊನಾ ವೈರಸ್ ಸಾರಿಗೆ ಕ್ಷೇತ್ರದಲ್ಲಿ ಕಳೆದ ಎರಡೂವರೆ ತಿಂಗಳಲ್ಲಿ ಸಾಧಾರಣ 2000 ರೂ. ಕೋಟಿ ವಹಿವಾಟು ಕಳೆದುಕೊಂಡು ನೆಲಕಚ್ಚಿ ನಿಂತಿದೆ. ಇದರ ಜೊತೆಗೆ ಕಾಯ್ದಿರಿಸಿದ ವಾಹನಗಳಿಗೂ ಪ್ರವಾಸಿಗರು ಆಗಮಿಸದ ಹಿನ್ನೆಲೆಯಲ್ಲಿ ರದ್ದು ಮಾಡುತ್ತಿರುವುದು ದೊಡ್ಡ ಹೊಡೆತ ಬೀಳುವುದರ ಮುನ್ಸೂಚನೆಯಾಗಿದೆ. ಇದೆಲ್ಲದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಮಹಾಮಾರಿ ಕೊರೊನಾ ಚಿಕ್ಕ ಪುಟ್ಟ ಮಧ್ಯಮ ವರ್ಗದ ಜನರಿಗೆ ಮತ್ತು ಚಾಲಕರಿಗೆ, ನಿರ್ವಾಹಕರಿಗೆ ಹರಡಬಾರದು ಎಂಬ ದೃಷ್ಟಿಯಿಂದ ನಗರದಲ್ಲಿ ಸರ್ಕಾರದ ಕ್ರಮದ ಬಗ್ಗೆ ಮುಂದಿನ ನಿಲುವನ್ನು ಆಶಾಭಾವದಿಂದ ಕಾಯುತ್ತಿದ್ದಾರೆ ಎಂದರು.
ಇದರ ಮಧ್ಯೆ ತೆರಿಗೆ ಹೊರೆ, ವಾಹನಗಳ ಲೋನ್ ಹೊರೆಯನ್ನು ಮೂರು ತಿಂಗಳ ಕಾಲ ತಪ್ಪಿಸಿಕೊಳ್ಳಲು ತೆರಿಗೆ ರಜೆಗಾಗಿ ಮುಖ್ಯಮಂತ್ರಿಗಳನ್ನು ನೋಡಲು ಸಂಘಟನೆಗಳು ಸಜ್ಜಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆಗೆ ಬೇಡಿಕೆ ಇಡುವ ಕೆಲಸವನ್ನು ಸಂಘಟನೆ ಮಾಡುತ್ತಿದೆ. ಎಲ್ಲಾ ದುಡಿಯುವ ಚಾಲಕ-ಮಾಲೀಕರಿಗೆ ಕೆಲಸವಿಲ್ಲದಂತಾಗಿದೆ. ಸರ್ಕಾರ ರಾಜ್ಯದಲ್ಲಿ ಎಲ್ಲಾ ವರ್ಗದ ಜನರಿಗೆ ಭೇದ-ಭಾವವಿಲ್ಲದೆ ಉಚಿತವಾಗಿ ಉತ್ತಮ ದರ್ಜೆಯ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ರೋಗ ನಿರೋಧಕ ಶುಶ್ರೂಷೆ ನೀಡಲು ಸಜ್ಜಾಗಬೇಕಿದೆ. ಅಲ್ಲದೆ ಬ್ಯಾಂಕ್ ಲೋನ್, ಜಿಎಸ್‌ಟಿ, ವಾಹನ ತೆರಿಗೆಗೆ ಆರು ತಿಂಗಳ ಕಾಲಾವಕಾಶ ಕೇಳಿ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಕೋರಿಕೆ ಇಡಲಾಗಿದೆ. ದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬರಗಾಲದ ಛಾಯೆ ಆವರಿಸಿರುವುದರಿಂದ ಆರ್ಥಿಕವಾಗಿ ಮುಗ್ಗಟ್ಟನ್ನು ನೀಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಆಶಾಭಾವ ವ್ಯಕ್ತಪಡಿಸಿದರು.