ಬೆಂಗಳೂರು/ದುಬೈ:''ದೇಶದ ಜಿಡಿಪಿ ಸದಾ ಏರುಮುಖವಾಗಿ ಚಲಿಸುತ್ತಿದೆ ಎಂದರೆ, ಕೆಂಪೇಗೌಡರು ಕಟ್ಟಿದ್ದ ಬೆಂಗಳೂರು ನಗರದ ಕಾಣಿಕೆ ಹಿರಿದು'' ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಯುಎಇ ಒಕ್ಕಲಿಗರ ಸಂಘ ಇಂದು ಹಮ್ಮಿಕೊಂಡಿದ್ದ ದುಬೈನ ಶೇಕ್ ರಶೀದ್ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ''ಉತ್ತಮ ಬದುಕು ರೂಪಿಸಿಕೊಳ್ಳಲು ಹೊರನಾಡಿಗೆ ಬಂದಿರುವ ಕನ್ನಡಿಗರು ನಮ್ಮ ಸಂಸ್ಕೃತಿ, ಭಾಷೆ, ನೆಲ ಜಲದ ಮೇಲೆ ಇರಿಸಿರುವ ಪ್ರೀತಿ, ಬದ್ಧತೆ ಕಂಡು ನನ್ನ ಹೃದಯ ಉಕ್ಕಿ ಬಂದಿದೆ. ಹೊರನಾಡಿನಲ್ಲಿ ನೆಲೆಸಿದ್ದರೂ ತಾಯ್ನಾಡಿನ ಪ್ರೇಮ ಉಳಿಸಿಕೊಂಡು, ಕನ್ನಡ ಸೊಗಡನ್ನು ಬದುಕಿನಲ್ಲಿ ಹಾಸುಹೊಕ್ಕಾಗಿಸಿಕೊಂಡು ಬಾಳ್ವೆ ನಡೆಸುತ್ತಿರುವ ಕನ್ನಡಿಗರಿಗೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸಿದರೂ ಸಾಲದು. ಈ ದಿನ ನಡೆದ ಕೆಂಪೇಗೌಡರ ಉತ್ಸವದಲ್ಲಿ ಕನ್ನಡ ಸಂಸ್ಕೃತಿಯ ಸೊಗಡು ಸಾಕ್ಷಾತ್ಕಾರವಾಗಿದೆ'' ಎಂದು ಅವರು ಸಂತಸ ವ್ಯಕ್ತಪಡಿಸಿದರು.
''ನಾಡಪ್ರಭು ಕೆಂಪೇಗೌಡ ಅವರ ಆಡಳಿತ, ದೂರದೃಷ್ಟಿ ಎಲ್ಲೆ, ಸೀಮೆಗಳು ಇಲ್ಲ. ಅವರ ಆದರ್ಶ ಆಡಳಿತ ಎಲ್ಲರೂ ಅನುಕರಣೀಯ ಮಾಡಬೇಕು. ಸರ್ವರನ್ನು ಸಮನಾಗಿ ಕಂಡು ಆಳ್ವಿಕೆ ನಡೆಸಿದವರು. ಅಂತಹವರನ್ನು ದುಬೈನಲ್ಲಿ ಸ್ಮರಿಸಿಕೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ'' ಎಂದು ಕುಮಾರಸ್ವಾಮಿ ಹೇಳಿದ್ದಾರೆ.
''ಅದಾವ ಶುಭ ಮುಹೂರ್ತದಲ್ಲಿ ನಾಡಪ್ರಭುಗಳು ಬೆಂಗಳೂರು ಮಹಾನಗರಕ್ಕೆ ಅಡಿಪಾಯ ಹಾಕಿದ್ದರು. ಇಂದು ಜಾಗತಿಕ ನಗರವಾಗಿ ಬೆಳೆದಿದ್ದು, ಕರ್ನಾಟಕ ಹಾಗೂ ಭಾರತದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡುತ್ತಿದೆ. ಜಾಗತಿಕ ಪೈಪೋಟಿ ನೀಡುತ್ತಾ ಜಗತ್ತಿನ ಅತ್ಯುತ್ತಮ ನಗರಗಳಲ್ಲಿ ಒಂದಾಗಿ ಬೆಳೆದಿದೆ ಎಂದಿದ್ದಾರೆ.
''ಕೆಂಪೇಗೌಡರ ಆದರ್ಶದೊಂದಿಗೆ ಶ್ರಮಿಸಿದ ನಮ್ಮ ಪೂರ್ವಿಕ ರೈತ ಬಂಧುಗಳು ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. ಅದರ ಪರಿಣಾಮವಾಗಿಯೇ ಬೆಂಗಳೂರಿನಲ್ಲಿ ಇವತ್ತಿನ ದಿನ ಆಗುತ್ತಿರುವ ಆರ್ಥಿಕ ಉತ್ಪಾದನೆ ನಾಡಿಗೆ, ದೇಶಕ್ಕೆ ಬೆನ್ನುಲುಬಾಗಿ ನಿಂತಿದೆ. ಇವತ್ತು ದೇಶದ ಜಿಡಿಪಿ ಸದಾ ಏರುಮುಖವಾಗಿ ಚಲಿಸುತ್ತಿದೆ. ಎಂದರೆ ಕೆಂಪೇಗೌಡರು ಕಟ್ಟಿದ್ದ ಬೆಂಗಳೂರು ನಗರದ ಕಾಣಿಕೆ ಹಿರಿದು'' ಎಂದು ತಿಳಿಸಿದ್ದಾರೆ.