ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆಂಪಣ್ಣ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ. ಸಿಎಂ ಸರ್ಕಾರಿ ಕಚೇರಿಗೆ ಬಂದ ನಿಯೋಗ ಚರ್ಚೆ ನಡೆಸಿದರು. ಈ ಭೇಟಿ ಕುತೂಹಲವನ್ನೂ ಕೆರಳಿಸಿತು. ಫ್ರೀ ಸ್ಕೀಮ್ ನಿಂದ ಕಾಮಗಾರಿ ಬಾಕಿ ಬಿಲ್ ಬಗ್ಗೆ ಗುತ್ತಿಗೆದಾರರು ಆತಂಕಕ್ಕೊಳಗಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಕಾಮಗಾರಿಗಳ ಬಿಲ್ ತಡೆ ಹಿಡಿಯಲಾಗಿದೆ. ಹೀಗಾಗಿ ಬಾಕಿ ಕಾಮಗಾರಿಗಳ ಬಿಲ್ ಪಾವತಿ ಮಾಡುವಂತೆ ಸಿಎಂ ಬಳಿ ಕೋರಿದ್ದಾರೆ ಎಂದು ತಿಳಿದು ಬಂದಿದೆ.
ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಕಾಮಗಾರಿಗಳನ್ನು ತಡೆ ಹಿಡಿಯುವಂತೆ ಸುತ್ತೋಲೆ ಹೊರಡಿಸಲಾಗಿದೆ. ಪೂರ್ಣಗೊಂಡಿರುವ ಕಾಮಗಾರಿಗಳ ಬಾಕಿ ಮೊತ್ತವನ್ನೂ ಬಿಡುಗಡೆ ಮಾಡದಂತೆಯೂ ಸುತ್ತೋಲೆಯಲ್ಲಿ ಹೇಳಲಾಗಿದೆ. ಇದರಿಂದ ಗುತ್ತಿಗೆದಾರರಿಗೆ ತೀವ್ರ ತೊಂದರೆಯಾಗಲಿದೆ. ಜತೆಗೆ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಕಾಮಗಾರಿಗಳನ್ನು ಕೈಗೊಳ್ಳಲು ಅಸಾಧ್ಯವಾಗುತ್ತದೆ ಎಂದು ಆತಂಕ ಹೊರಹಾಕಿದ್ದಾರೆ.
ಇದನ್ನೂ ಓದಿ:ಲಂಚ ಸ್ವೀಕರಿಸಲ್ಲ ಅಂತ ನಿಮ್ಮ & ಸಚಿವರ ಕಚೇರಿ ಮನೆ ಮುಂದೆ ಫಲಕ ಹಾಕಿಸಿ: ಸಿಎಂಗೆ ಸಿದ್ದರಾಮಯ್ಯ ಸಲಹೆ
ಇದರಿಂದ ರಾಜ್ಯದ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಧಕ್ಕೆ ಉಂಟಾಗುತ್ತದೆ. ಕಾನೂನು ಬದ್ದವಾಗಿ ನಡೆಯುತ್ತಿರುವ ಕಾಮಗಾರಿಗಳನ್ನು ಮುಂದುವರಿಸಲು ಮತ್ತು ಪೂರ್ಣಗೊಂಡಿರುವ ಕಾಮಗಾರಿಗಳ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಲು ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆಂಪಣ್ಣ ಹಿಂದಿನ ಬೊಮ್ಮಾಯಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿತ್ತು. ಇದರ ವಿರುದ್ಧ ಕಾಂಗ್ರೆಸ್ ಚುನಾವಣೆ ವೇಳೆ ಜನಭಿಪ್ರಾಯ ಮೂಡಿಸಿತ್ತು. ಕಮಿಷನ್ ಆರೋಪವನ್ನೇ ಚುನಾವಣಾ ಅಸ್ತ್ರವಾಗಿ ಬಳಸಿ ಕಾಂಗ್ರೆಸ್ ಬಿಜೆಪಿಗೆ ಸೋಲುಣಿಸಿತ್ತು.