ಕರ್ನಾಟಕ

karnataka

ETV Bharat / state

ದೋಷಪೂರಿತ ನೀರಿನ ಮೀಟರ್ ಸರಿಪಡಿಸದ ಬೆಂಗಳೂರು ಜಲಮಂಡಳಿಗೆ 55 ಸಾವಿರ ರೂ. ದಂಡ

ದೋಷಪೂರಿತ ನೀರಿನ ಮೀಟರ್​ ಅನ್ನು ಸರಿಪಡಿಸಲು ಕೋರಿದ್ದ ಪ್ರಕರಣದಲ್ಲಿ 1 ಲಕ್ಷ ಹಣ ಪಾವತಿಸಲು ಸೂಚಿಸಿದ್ದ ಬೆಂಗಳೂರು ಜಲಮಂಡಳಿಗೆ ಗ್ರಾಹಕರ ಹಕ್ಕುಗಳ ಕೋರ್ಟ್​ 50 ಸಾವಿರ ರೂಪಾಯಿ ದಂಡ ವಿಧಿಸಿದೆ.

By

Published : Sep 4, 2022, 3:07 PM IST

consumer-court-fine-on-bwssb
ಜಲಮಂಡಳಿಗೆ ಬಿತ್ತು ₹50 ಸಾವಿರ ದಂಡ!

ಬೆಂಗಳೂರು:ದೋಷಪೂರಿತ ನೀರಿನ ಮೀಟರ್‌ನ್ನು ಸರಿಪಡಿಸದೇ, ಒಳಚರಂಡಿ ಸಂಪರ್ಕವನ್ನು ಕಡಿತ ಮಾಡುವುದಾಗಿ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿದ್ದ ಬೆಂಗಳೂರು ಜಲಮಂಡಳಿಗೆ ಗ್ರಾಹಕರ ಹಕ್ಕುಗಳ ನ್ಯಾಯಾಲಯ 50 ಸಾವಿರ ರೂಪಾಯಿ ದಂಡ ವಿಧಿಸಿದೆ.

ಮಹಿಳಾ ಗ್ರಾಹಕರು ನೀರಿನ ಸಂಪರ್ಕವನ್ನು ಪುನರ್ ಸ್ಥಾಪಿಸುವುದಕ್ಕಾಗಿ ನ್ಯಾಯಾಂಗ ಹೋರಾಟ ನಡೆಸಿದ ಫಲವಾಗಿ 5 ಸಾವಿರ ರೂಪಾಯಿ ಪರಿಹಾರವನ್ನು ನೀಡುವಂತೆ ಜಲಮಂಡಳಿಗೆ ಬೆಂಗಳೂರು ನಗರ 2ನೇ ಹೆಚ್ಚುವರಿ ಗ್ರಾಹಕರ ಹಕ್ಕುಗಳ ವೇದಿಕೆಯ ಅಧ್ಯಕ್ಷರಾದ ಎಂ.ಶೋಭಾ ಅವರ ನೇತೃತ್ವದ ತ್ರಿಸದಸ್ಯ ಪೀಠ ನಿರ್ದೇಶಿಸಿದೆ. ದಂಡದ ಮೊತ್ತವನ್ನು ಆದೇಶ ಪ್ರತಿ ಸಿಕ್ಕ 30 ದಿನದಲ್ಲಿ ದೂರುದಾರರಿಗೆ ಪಾವತಿಸಲು ಸೂಚಿಸಿದೆ.

ಪ್ರಕರಣದ ಹಿನ್ನೆಲೆ:ಅರಮನೆ ಗುಟ್ಟಹಳ್ಳಿಯ ನಿವಾಸಿಯಾದ ಬಿ. ಸದಾಶಿವಮ್ಮ(53) ಎಂಬುವರು ಜಲ ಮಂಡಳಿಯಿಂದ ನೀರಿನ ಸಂಪರ್ಕವನ್ನು ಪಡೆದುಕೊಂಡಿದ್ದರು. ಮೊದಲು ಪ್ರತಿ ತಿಂಗಳು ಕೇವಲ 100- 200 ರೂಪಾಯಿ ಬರುತ್ತಿದ್ದ ಬಿಲ್, ಏಕಾಏಕಿ 2 ಸಾವಿರ ದಿಂದ 3 ಸಾವಿರ ರೂಪಾಯಿ ಬರುತ್ತಿತ್ತು.

ಈ ಸಂಬಂಧ ಜಲಮಂಡಳಿಗೆ ಸದಾಶಿವಮ್ಮ ಅವರು 2018 ರಲ್ಲಿಯೇ ದೂರು ನೀಡಿ ಮೀಟರ್ ಸರಿಪಡಿಸುವಂತೆ ಕೋರಿದ್ದರು. ಜಲಮಂಡಳಿ ಅಧಿಕಾರಿಗಳು ಮನೆಗೆ ನೀರಿನ ಸಂಪರ್ಕವನ್ನು ಕಡಿತ ಮಾಡಿದ್ದಾರೆ. ಆದರೆ, ದೋಷಪೂರಿತ ನೀರಿನ ಮೀಟರ್ ಸರಿಪಡಿಸಲು ನಿರಾಕರಿಸಿದ್ದರು.

ನೀರನ್ನು ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಬಳಸದೆ ಕೇವಲ ಗೃಹ ಬಳಕೆಗೆ ಮಾತ್ರ ಉಪಯೋಗಿಸಲಾಗುತ್ತಿದೆ. ನೀರು ಸ್ಥಗಿತವಾಗಿ ತೀವ್ರ ತೊಂದರೆಯಾಗಿದೆ. ಆದ್ದರಿಂದ ನೀರಿನ ಸಂಪರ್ಕವನ್ನು ಪುನರ್ ಕಲ್ಪಿಸಿ, ಹೊಸ ಮೀಟರ್ ಅಳವಡಿಸಬೇಕು ಎಂದು ದೂರುದಾರ ಮಹಿಳೆ ಮತ್ತೊಂದು ಮನವಿ ಸಲ್ಲಿಸಿದ್ದರು. ಆದರೆ, ಜಲ ಮಂಡಳಿ ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮನ ಹರಿಸಿರಲಿಲ್ಲ.

2018 ರಿಂದ ನೀರಿನ ಸಂಪರ್ಕ ಕಡಿತವಾಗಿದ್ದರೂ, 98 ಸಾವಿರ ಬಿಲ್‌ ಪಾವತಿಸಲು ಜಲ ಮಂಡಳಿ ದೂರುದಾರ ಮಹಿಳೆಗೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಮನೆಗೆ ಬಂದಿದ್ದ ಜಲಮಂಡಳಿ ಅಧಿಕಾರಿಗಳು ಒಳಚರಂಡಿ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಜಲ ಮಂಡಳಿ ವಿರುದ್ಧಹೈಕೋರ್ಟ್ ಮೊರೆ:ಜಲಮಂಡಳಿಯ ಕ್ರಮವನ್ನು ಪ್ರಶ್ನಿಸಿ ಸದಾಶಿವಮ್ಮ ಅವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸಕ್ಷಮ ಪ್ರಾಧಿಕಾರದ ಮುಂದೆ ಮನವಿ ಸಲ್ಲಿಸುವಂತೆ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿತ್ತು. ಹೈಕೋರ್ಟ್ ಸೂಚನೆ ಮೇರೆಗೆ ದೂರುದಾರರು ಮತ್ತೊಮ್ಮೆ ಜಲಮಂಡಳಿಯ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಧಿಕಾರಿಗಳು 1,91,896 ರೂಪಾಯಿ ಪಾವತಿಸಲು ಸೂಚಿಸಿದ್ದರು. ಇದರಿಂದ ದಿಕ್ಕು ತೋಚದಂತಾದ ಮಹಿಳೆ ಗ್ರಾಹಕರ ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಿದ್ದರು.

ಆಕ್ಷೇಪಣೆ ಸಲ್ಲಿಸದ ಜಲಮಂಡಳಿ:ದೂರಿನ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಗ್ರಾಹಕರ ನ್ಯಾಯಾಲಯ ಜಲಮಂಡಳಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ, ಜಲ ಮಂಡಳಿಯ ಅಧಿಕಾರಿಗಳು ಈ ಬಗ್ಗೆ ಯಾವುದೇ ಆಕ್ಷೇಪಣೆ ಸಲ್ಲಿಸಿರಲಿಲ್ಲ. ಅವರ ಪರ ವಕೀಲರೂ ಹಾಜರಾಗಿರಲಿಲ್ಲ. ಈ ನಿಟ್ಟಿನಲ್ಲಿ ಅರ್ಜಿರಾರರ ಮನವಿಯನ್ನು ಪುರಸ್ಕಿರಿಸಿರುವ ನ್ಯಾಯಾಲಯ 50 ಸಾವಿರ ರೂಪಾಯಿ ದಂಡ ವಿಧಿಸಿದೆ.

ಓದಿ:ಹಳದಿ ಲೋಹದ ಬೆಲೆ ಹೆಚ್ಚಳ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಹೀಗಿದೆ ಚಿನ್ನ-ಬೆಳ್ಳಿ ದರ

ABOUT THE AUTHOR

...view details