ಬೆಂಗಳೂರು:ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿರುವ ರಿಂಗ್ ರಸ್ತೆಗೆ ಡಾ. ಪುನೀತ್ ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಉದ್ಘಾಟನೆ ಮಾಡಿದರು. ಇದೇ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಿದರು.
ಹೊರ ವರ್ತುಲ ರಸ್ತೆಯ ನಾಯಂಡಹಳ್ಳಿ ಜಂಕ್ಷನ್ನಿಂದ ಬನ್ನೇರುಘಟ್ಟವರೆಗಿನ ಸಂಪರ್ಕ ರಸ್ತೆಗೆ ದಿ. ಡಾ. ಪುನೀತ್ ರಾಜ್‌ಕುಮಾರ್ ಹೆಸರು ನಾಮಕರಣ ಮಾಡಲಾಯಿತು. ಸ್ಥಳದಲ್ಲಿದ್ದ ಅಭಿಮಾನಿಗಳು ಪುನೀತ್ ಪರ ಘೋಷಣೆ ಕೂಗಿದರು. ಸಿಎಂ ಸಹ ಅಭಿಮಾನಿಗಳತ್ತ ಕೈ ಬೀಸಿದರು. ಕಾರ್ಯಕ್ರಮದಲ್ಲಿ ಬೊಂಬೆ ಹೇಳುತೈತಿ ಹಾಡು ಹಾಡಿದ ಸಿಎಂ ಎಲ್ಲಾ ಕಲಾವಿದರೊಂದಿಗೆ ದನಿಗೂಡಿಸಿದರು. ಸಚಿವರು, ಶಾಸಕರು ಸಾಥ್ ಕೊಟ್ಟರು.
ಬಳಿಕ ಮಾತನಾಡಿದ ಸಿಎಂ, 2 ಉದ್ಯಾನವನ ಉದ್ಘಾಟನೆ ಮಾಡಿದ್ದೇನೆ. ಸಚಿವ ಅಶೋಕ್ಗೆ ಧನ್ಯವಾದ. ಅಪ್ಪು ಹೆಸರಿಡೋ ಮೂಲಕ ಅವರ ನೆನಪಿಗೆ ಮತ್ತೊಂದು ಗೌರವ ನೀಡಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಟ್ಟ ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಧನ್ಯವಾದಗಳು ಎಂದರು.
ರಾಜಕೀಯ ಭಾಷಣ:ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದ ರಾಜ್ಯವಾಗಿದೆ. ಮುಂದೆಯೂ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತದೆ. 6 ಸಾವಿರ ಕೋಟಿ ಅನುದಾನದಲ್ಲಿ ಬೆಂಗಳೂರು ಅಭಿವೃದ್ಧಿ ಆಗುತ್ತಿದೆ. ಇವತ್ತು ಎಲ್ಲಾ ಕ್ಷೇತ್ರಕ್ಕೆ ಹೋಗಿದ್ದೆ. ಆ ಕ್ಷೇತ್ರದ ಶಾಸಕರು ಸಾಕಷ್ಟು ಅಭಿವೃದ್ಧಿಪಡಿಸಿದ್ದಾರೆ. 6 ಬಾರಿ ಅಶೋಕ್ ಅವರು ಪದ್ಮನಾಭನಗರಕ್ಕೆ ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರಂತಹ ಜನೋಪಯೋಗಿ ಶಾಸಕರು ಸಿಗೋದು ಕಷ್ಟ. ಪದ್ಮನಾಭನಗರ ನಿರಂತರ ಅಭಿವೃದ್ಧಿಯಾಗಬೇಕು ಅಂದ್ರೆ ಅಶೋಕ್ಗೆ ಬೆಂಬಲ ಕೊಡಬೇಕು ಎಂದು ವೇದಿಕೆ ಮೇಲೆ ರಾಜಕೀಯ ಭಾಷಣ ಮಾಡಿದರು.