ಬೆಂಗಳೂರು:ಕರ್ನಾಟಕದ ರಾಯಚೂರಿನ ಜನತೆ ತಮ್ಮ ಜಿಲ್ಲೆಯನ್ನು ತೆಲಂಗಾಣದಲ್ಲಿ ವಿಲೀನ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹೇಳಿಕೆಯು ವಿವಾದವನ್ನು ಸೃಷ್ಟಿಸಿದೆ. ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರ ಹೇಳಿಕೆಯ ಆಧಾರದಲ್ಲಿ ತೆಲಂಗಾಣದ ಸಿಎಂ 'ರಾಯಚೂರಿನ ಜನ ತೆಲಂಗಾಣಕ್ಕೆ ಸೇರಲು ಬಯಸುತ್ತಿದ್ದಾರೆ' ಎಂದು ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ ಇಂತಹ ಗಂಭೀರ ಹೇಳಿಕೆಗೆ ನಿಮ್ಮ ಉತ್ತರವಿಲ್ಲವೇಕೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಪ್ರಶ್ನಿಸಿದೆ. ನಿಮ್ಮ ಈ 'ಮೌನ', ಸಮ್ಮತಿಯ ಲಕ್ಷಣವೇ?. ಕಲ್ಯಾಣ ಕರ್ನಾಟಕದೆಡೆಗಿನ ನಿರ್ಲಕ್ಷ್ಯವೇ?, ಅಭಿವೃದ್ಧಿ ವಂಚಿಸಿದ ಪಾಪಪ್ರಜ್ಞೆಯೇ ಎಂದೂ ಕಾಂಗ್ರೆಸ್ ಹರಿಹಾಯ್ದಿದೆ.
ಅಲ್ಲದೇ, ಬಸವರಾಜ ಬೊಮ್ಮಾಯಿ ಅವರೇ, ನಿಮ್ಮದೇ ಪಕ್ಷದ ಶಾಸಕ ಶಿವರಾಜ್ ಪಾಟೀಲ್‌ರವರು ರಾಯಚೂರಿನ ಕಡೆಗಣನೆಯ ಬಗ್ಗೆ ನಿಮ್ಮದೇ ಸಚಿವರಿಗೆ ವಿವರಿಸುತ್ತಾ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿಬಿಡಿ ಎನ್ನುತ್ತಾರೆ. ಇದು ನಿಮ್ಮ ಸರ್ಕಾರದ ದುರಾಡಳಿತಕ್ಕೆ ಮತ್ತು ಕಲ್ಯಾಣ ಕರ್ನಾಟಕದ ನಿರ್ಲಕ್ಷ್ಯಕ್ಕೆ ವ್ಯಕ್ತಪಡಿಸಿದ ಆಕ್ರೋಶವೇ?. ಅಥವಾ ಬಿಜೆಪಿ ವರ್ಸಸ್ ಬಿಜೆಪಿಯ ಮುಂದುವರೆದ ಅಧ್ಯಾಯವೇ ಎಂದು ಈ ಹಿಂದೆ ಶಿವರಾಜ್ ಪಾಟೀಲ್ ನೀಡಿದ್ದ ಹೇಳಿಕೆಯ ವಿಡಿಯೋ ತುಣುಕವನ್ನು ಟ್ವೀಟ್ ಮಾಡಿ ಕಾಂಗ್ರೆಸ್ ಕಿಡಿಕಾರಿದೆ.
ಇದಲ್ಲದೇ, ಅಭಿವೃದ್ಧಿ, ಮೂಲಸೌಕರ್ಯಗಳನ್ನು ಮುಂದಿಟ್ಟು ಹಿಂದೆ ಕರ್ನಾಟಕದ ಬಂಡವಾಳ ಹೂಡಿಕೆದಾರರನ್ನು ತೆಲಂಗಾಣಕ್ಕೆ ಆಹ್ವಾನಿಸಿದ್ದರು. ಈಗ ರಾಯಚೂರನ್ನೇ ಆಹ್ವಾನಿಸುತ್ತಿದ್ದಾರೆ. ಇದು ನಿಮ್ಮ ಅಭಿವೃದ್ಧಿಶೂನ್ಯ ಆಡಳಿತಕ್ಕೆ ಮಾಡುತ್ತಿರುವ 'ಅಣಕ' ಅಲ್ಲವೇ ಬೊಮ್ಮಾಯಿ ಅವರೇ?, ಅಸಮರ್ಥ ಬಿಜೆಪಿಯ ಆಡಳಿತದಲ್ಲಿ ಕರ್ನಾಟಕ ಎಲ್ಲವನ್ನೂ ಕಳೆದುಕೊಳ್ಳಬೇಕೆ ಎಂದು ಪ್ರಶ್ನಿಸಲಾಗಿದೆ.