ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಇಂದು ಬೃಹತ್ ಪ್ರತಿಭಟನೆಗೆ ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ನಿವಾಸದಿಂದ ಸೈಕಲ್ ಏರಿ ಹೊರಟರು.
ಇಂದು ಬೆಳಗ್ಗೆ ಸಿದ್ದರಾಮಯ್ಯ ನಿವಾಸ ಚಟುವಟಿಕೆಯ ಕೇಂದ್ರವಾಗಿತ್ತು. ಬಿಬಿಎಂಪಿ ಸಿಬ್ಬಂದಿ ಕೂಡ ಸಿದ್ದರಾಮಯ್ಯ ನಿವಾಸದ ಮುಂಭಾಗ ಬಿಬಿಎಂಪಿ ಸಿಬ್ಬಂದಿ ಸ್ಯಾನಿಟೈಸಿಂಗ್ ಮಾಡಿದ್ದು, ಬೆಳಗ್ಗೆಯೇ ವಿವಿಧ ನಾಯಕರು ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ದೇಶದಲ್ಲಿ ದಿನೇ ದಿನೆ ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸೈಕಲ್ ಜಾಥಾ ಮೂಲಕ ಪ್ರತಿಭಟನೆ ನಡೆಸಲಿರುವ ಕಾಂಗ್ರೆಸ್ ನಾಯಕರು, ಕೆಪಿಸಿಸಿ ಕಚೇರಿಗೆ ಸೈಕಲ್ ಮೂಲಕ ಆಗಮಿಸಿ ಅಲ್ಲಿಂದ ಆದಾಯ ತೆರಿಗೆ ಕಚೇರಿಗೆ ಸೈಕಲ್ ಮೇಲೆ ತೆರಳಿ ಪ್ರತಿಭಟನೆ ನಡೆಸಲಿದ್ದಾರೆ. ಸಿದ್ದರಾಮಯ್ಯ ಮನೆಗೆ ಶಾಸಕ ಜಮೀರ್ ಅಹಮ್ಮದ್ ಹಾಗೂ ಮಾಜಿ ಶಾಸಕ ಚೆಲುವರಾಯಸ್ವಾಮಿ ಆಗಮಿಸಿದ್ದು, ಸಿದ್ದರಾಮಯ್ಯ ಜೊತೆ ಕೆಪಿಸಿಸಿ ಕಚೇರಿಗೆ ಸೈಕಲ್ ಮೇಲೆ ಪ್ರಯಾಣ ಬೆಳೆಸಿದ್ದಾರೆ.
ಮನೆಯಿಂದ ಹೊರಡುವ ಮುನ್ನ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, 74 ನೇ ಇಸಿವಿಯಿಂದ ಸೈಕಲ್ ಹೊಡೆದಿರಲಿಲ್ಲ. ಈಗಲೇ ಸೈಕಲ್ ಹೊಡೆದಿರೋದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಕೇಂದ್ರ ಸರ್ಕಾರ ದರ ಏರಿಕೆ ಮಾಡುತ್ತಿದೆ. ನನ್ನ ಪ್ರಕಾರ ಪೆಟ್ರೋಲ್ ಗೆ 25 ರೂ. ಮಾಡಬೇಕಾಗಿತ್ತು. ಮನಮೋಹನ್ ಸಿಂಗ್ ಸರ್ಕಾರ ಸಬ್ಸಿಡಿ ಕೊಟ್ಟಿತ್ತು. ಈಗ ಈ ಸರ್ಕಾರ ಯಾವುದನ್ನೂ ಕೊಟ್ಟಿಲ್ಲ. ಸಾಮಾನ್ಯ ಜನರ ಮೇಲೆ ದುಬಾರಿ ಬೆಲೆ ಹಾಕುತ್ತಿದೆ. ರೈತರಿಗೆ ಹಾಗೂ ಕೈಗಾರಿಕೆಗಳಿಗೆ ಇಂದಿನ ಪರಿಸ್ಥಿತಿ ದುಬಾರಿಯಾಗಿದೆ ಎಂದರು.
ಕೋವಿಡ್ ಇದ್ದರೂ ಕಳೆದ 10 ದಿನಗಳಿಂದ 11 ರೂ. ಹೆಚ್ಚಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರ ಬಡವರ ಮೇಲೆ ಬರೆ ಹಾಕಿದೆ. ಕೇಂದ್ರ ಸರ್ಕಾರದ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲ ಆಗಿರುವುದರ ಬಗ್ಗೆಯೂ ಪ್ರತಿಭಟನೆ ಮಾಡುತ್ತೇನೆ ಎಂದು ಗುಡುಗಿದರು.