ಬೆಂಗಳೂರು: ಬಿಬಿಎಂಪಿ ವಾರ್ಡ್ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ ಆಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ನಾಯಕರು ಸೇರಿದಂತೆ ಕಾರ್ಯಕರ್ತರುನ್ನು ಪೊಲೀಸರು ತಡೆದು, ವಶಕ್ಕೆ ಪಡೆದರು.
ಮಾಜಿ ಸಚಿವ ರಾಮಲಿಂಗರೆಡ್ಡಿ ನೇತೃತ್ವದಲ್ಲಿ ಸುಮಾರು 100-150 ಜನ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಸ್ವಾತಂತ್ರ್ಯ ಉದ್ಯಾನದಿಂದ ಹೊರಟು ಮಹಾರಾಣಿ ಕಾಲೇಜ್ ಮಾರ್ಗವಾಗಿ ಸಿಎಂ ನಿವಾಸಕ್ಕೆ ತೆರಳಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರನ್ನ ಮಹಾರಾಣಿ ಕಾಲೇಜು ಮುಂಭಾಗವೇ ತಡೆದು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಇಂದು ಸಂಜೆ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರ ನಿಯೋಗ ಸಿಎಂ ನಿವಾಸಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಲಿದೆ.
ಕೈ ಮುಖಂಡರು ಪೊಲೀಸ್ ವಶಕ್ಕೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ: ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನಕ್ಕೂ ಮುನ್ನ ರಾಜ್ಯ ಕಾಂಗ್ರೆಸ್ ನಾಯಕರು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದರು. ಅವೈಜ್ಞಾನಿಕ ಬಿಬಿಎಂಪಿ ವಾರ್ಡ್ ಮೀಸಲಾತಿ ವಿರುದ್ಧ 3 ಸಾವಿರಕ್ಕೂ ಹೆಚ್ಚು ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಅವುಗಳಿಗೆ ಮನ್ನಣೆ ನೀಡದ ಜನವಿರೋಧಿ ಬಿಜೆಪಿ ಸರ್ಕಾರ ಎಲ್ಲಾ ಅರ್ಜಿಯನ್ನು ಕಸದ ಬುಟ್ಟಿಗೆ ಎಸೆದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು. ಬೆಂಗಳೂರು ಕೇಂದ್ರ, ದಕ್ಷಿಣ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬಿಬಿಎಂಪಿ ವಾರ್ಡ್ ಮೀಸಲಾತಿ ಹಂಚಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗರೆಡ್ಡಿ, ಸಲೀಂ ಅಹ್ಮದ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಕೃಷ್ಣ ಬೈರೇಗೌಡ, ಮಾಜಿ ಮೇಯರ್ ರಾಮಚಂದ್ರಪ್ಪ, ಸಂಪತ್ ರಾಜ್ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮಾಜಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ರಾಜಕೀಯಕಗಕಾಗಿ ಬಿಜೆಪಿಯವರು ಒಬ್ಬರನ್ನೊಬ್ಬರು ಸಾಯಿಸುತ್ತಿದ್ದಾರೆ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಐಟಿ ಕ್ಯಾಪಿಟಲ್ ಮಾಡಿದ್ದೆವು. ಇಂದು ಬಿಜೆಪಿಯವರು ಪಾಥ್ ಹೋಲ್ ಸಿಟಿ ಮಾಡಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆ ಮಾಡಲು ಹೊರಟಿದ್ದಾರೆ. ಧೈರ್ಯವಾಗಿ ಚುನಾವಣೆ ಎದುರಿಸುವ ಶಕ್ತಿ ಇಲ್ಲ. ಜನ ಸೋಲಿಸುತ್ತಾರೆ ಎಂಬ ಆತಂಕಕ್ಕೆ ಹೆದರಿ ಮೀಸಲಾತಿ ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇಲಿ ಮಾರ್ಗದಲ್ಲಿ ಹೋಗುತ್ತಿದ್ದಾರೆ. ನಾರಿ ಶಕ್ತಿ ಎಂದು ಹೇಳಿ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಕ್ಕೆ ಮಹಿಳಾ ಮೀಸಲಾತಿ ನೀಡಿದ್ದಾರೆ. ಶೇ.50 ರಷ್ಟು ಮಹಿಳಾ ಮೀಸಲಾತಿ ನೀಡಿಲ್ಲ. ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಮೀಸಲಾತಿ ಸರಿಯಾಗಿ ಹಂಚಿ, ಅನ್ಯಾಯ ಸರಿ ಮಾಡಬೇಕು. ಮಹಿಳೆಯರಿಗೆ ನ್ಯಾಯ ಒದಗಿಸಲು ಶ್ರಮಿಸುತ್ತೇವೆ. ಬಿಜೆಪಿಯ ಹೇಡಿ ರಾಜಕಾರಣಿಗಳು, ನರಿಗಳ ವಿರುದ್ಧ ಹೋರಾಡುತ್ತೇವೆ ಎಂದರು.
ಬಿಬಿಎಂಪಿ ವಾರ್ಡ್ ಮೀಸಲಾತಿ ಹಂಚಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಬಿ.ಕೆ. ಹರಿಪ್ರಸಾದ್ ಮಾತನಾಡಿ, ರಾಜಕೀಯ ಪ್ರೇರಿತ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಬೊಮ್ಮಾಯಿ ರಾಜ್ಯದ ಘನತೆಯನ್ನು ಮಣ್ಣುಪಾಲು ಮಾಡಿದೆ. ಹಿಂದೆ ಬಂದ ಸಿಎಂಗಳು ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆಕೊಂಡೊಯ್ಯುವ ಪ್ರಯತ್ನ ಮಾಡಿದ್ದರು. ಆದರೆ ಇಂದು ಸಿಎಂ ಕರ್ನಾಟಕವನ್ನು ಉತ್ತರ ಪ್ರದೇಶ ಮಾದರಿ ಮಾಡುತ್ತೇವೆ ಅಂತಾರೆ. ಅಭಿವೃದ್ಧಿಯಲ್ಲಿ ಹಿಂದಿರುವ ಯುಪಿ ನಮಗೆ ಹೇಗೆ ಮಾದರಿ ಆಗಲು ಸಾಧ್ಯ? ಅವಧಿ ಮುಗಿದ ಆರು ತಿಂಗಳಲ್ಲಿ ಚುನಾವಣೆ ಮಾಡಬೇಕಿತ್ತು. ಆದರೆ ಎರಡು ವರ್ಷ ತಡ ಮಾಡಿದ್ದಾರೆ. ಕೊಲೆಗಿಂತ ರಸ್ತೆ ಗುಂಡಿಗೆ ಬಿದ್ದು ಜನ ಸಾಯುತ್ತಿದ್ದಾರೆ. ನಗರದ ಅಭಿವೃದ್ಧಿ ಆಗಿಲ್ಲ. ಶೇ.40 ರಷ್ಟು ಕಮಿಷನ್ಗೆ ಕಾರ್ಪೊರೇಟರ್ಗಳಿಗೆ ಸಿಗಬಾರದು, ಎಲ್ಲವೂ ತಮಗೆ ಬರಬೇಕು, ಕೇಶವಕೃಪಾಗೆ ಸಿಗಬೇಕೆಂದು ಬೊಮ್ಮಾಯಿ ಬಯಸುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಾರೆ. ಮುಂದಿನ ಸರ್ಕಾರ ನಮ್ಮದೇ. ದಾವಣಗೆರೆ, ಬೆಂಗಳೂರಿನ ಕಾರ್ಯಕ್ರಮದಿಂದ ಬಿಜೆಪಿ ಹೆದರಿದೆ. ಪರಿಸ್ಥಿತಿ ಬದಲಾಗಬೇಕಿದೆ ಎಂದು ಕಿಡಿಕಾರಿದರು.
ಪ್ರಮುಖರ ಅನುಪಸ್ಥಿತಿ:ಸ್ವಾತಂತ್ರ್ಯ ಉದ್ಯಾನದಲ್ಲಿ ಪೊಲೀಸರ ಬಿಗಿ ಭದ್ರತೆ ಒದಗಿಸಲಾಗಿತ್ತು. ಪ್ರವಾಸದಲ್ಲಿದ್ದ ಹಿನ್ನೆಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಗೈರಾಗಿದ್ದರು. ಉಳಿದಂತೆ ಬೆಂಗಳೂರು ನಗರ ಶಾಸಕರಾದ ಸೌಮ್ಯ ರೆಡ್ಡಿ, ದಿನೇಶ್ ಗುಂಡೂರಾವ್, ಎನ್ ಎ ಹ್ಯಾರಿಸ್, ಕೆಜೆ ಜಾರ್ಜ್, ಎಂ ಕೃಷ್ಣಪ್ಪ, ಬೈರತಿ ಸುರೇಶ್ ಸೇರಿದಂತೆ ಯಾವೊಬ್ಬ ಶಾಸಕರು ಆಗಮಿಸಲಿಲ್ಲ. ರಾಮಚಂದ್ರಪ್ಪ ಹಾಗೂ ಸಂಪತ್ ರಾಜ್ ಹೊರತುಪಡಿಸಿದರೆ ಬೇರೆ ಯಾವ ಮಾಜಿ ಮೇಯರ್ಗಳು ಪ್ರತಿಭಟನೆಯಲ್ಲಿ ಕಾಣಿಸಲಿಲ್ಲ.
ವಿದ್ಯಾರ್ಥಿ ಯುವ ಮಹಿಳಾ ಕಾರ್ಮಿಕ ಸೇರಿದಂತೆ ಕಾಂಗ್ರೆಸ್ನ ಯಾವುದೇ ವಿಭಾಗದ ಅಧ್ಯಕ್ಷರು ಪ್ರತಿಭಟನೆಯಲ್ಲಿ ಕಂಡು ಬರಲಿಲ್ಲ. ಬೆರಳಿಕೆಯಷ್ಟು ಕಾರ್ಯಕರ್ತರು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.