ಕರ್ನಾಟಕ

karnataka

ETV Bharat / state

ಇಂದಿನಿಂದ ಕಾಂಗ್ರೆಸ್​ ಪ್ರಜಾಧ್ವನಿ ಯಾತ್ರೆ ಪುನಾರಂಭ - ರಾಜ್ಯ ಕಾಂಗ್ರೆಸ್ ನಾಯಕರು​ ಭಾಗಿ

ಎಐಸಿಸಿ ಅಧಿವೇಶನದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು​ ಭಾಗಿಯಾಗಿದ್ದ ಕಾರಣ ಕಳೆದ ನಾಲ್ಕು ದಿನದಿಂದ ನಿಂತಿದ್ದ ಪ್ರಜಾಧ್ವನಿ ಯಾತ್ರೆ ಇಂದಿನಿಂದ ಪುನಾರಂಭಗೊಂಡಿದೆ.

praja dhwani yatra
​ ಪ್ರಜಾಧ್ವನಿ ಯಾತ್ರೆ

By

Published : Feb 27, 2023, 2:31 PM IST

ಬೆಂಗಳೂರು: ಛತ್ತೀಸಗಢದ ರಾಯಪುರದಲ್ಲಿ ನಡೆಯುತ್ತಿರುವ ಎಐಸಿಸಿ ಅಧಿವೇಶನದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು​ ಪಾಲ್ಗೊಂಡ ಹಿನ್ನೆಲೆ ಕಳೆದ ನಾಲ್ಕು ದಿನದಿಂದ ನಿಂತಿದ್ದ ಪ್ರಜಾಧ್ವನಿ ಯಾತ್ರೆ ಇಂದು ಮರು ಆರಂಭಗೊಳ್ಳಲಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಾಳೆಯಿಂದ ಹಾಸನ ಜಿಲ್ಲೆಯಲ್ಲಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿನಿಂದ ಪ್ರವಾಸ ಆರಂಭಿಸಲಿದ್ದಾರೆ.

ಈಗಾಗಲೇ ಜಮಖಂಡಿ ಕಡೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದ್ದಾರೆ. ನಾಳೆ ಹಾಸನದ ಸಕಲೇಶಪುರದತ್ತ ಡಿಕೆಶಿ ಹೊರಡಲಿದ್ದಾರೆ. ನಿನ್ನೆ ರಾತ್ರಿ ಎಐಸಿಸಿ ಮಹಾಧಿವೇಶನ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್​ ಆಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇಂದು ಮಹಾರಾಷ್ಟ್ರಕ್ಕೆ ತೆರಳಿ, ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಪ್ರಜಾಧ್ವನಿ ಯಾತ್ರೆ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡ ಮಾಜಿ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಚಿವ ಜಮೀರ್ ಅಹಮ್ಮದ್, ರಘು ಆಚಾರ್ ಸಾಥ್ ನೀಡಿದ್ದಾರೆ. ಇನ್ನೊಂದೆಡೆ, ನಾಳೆಯಿಂದ ಡಿಕೆಶಿ ಸಕಲೇಶಪುರದ ಆಲೂರಿನಲ್ಲಿ ಪ್ರಜಾಧ್ವನಿ ಯಾತ್ರೆ ಸಮಾವೇಶ ಕೈಗೊಂಡಿದ್ದಾರೆ. ಸಂಜೆ 4ಕ್ಕೆ ಹೊಳೆನರಸೀಪುರದಲ್ಲಿ ಸಮಾವೇಶ ನಡೆಸಿ, ರಾತ್ರಿ ಹಾಸನದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಈ ವೇಳೆ, ಇಲ್ಲಿನ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ. ಮಾ.1 ರಂದು ಹಾಸನ ಜಿಲ್ಲೆಯ ಬೇಲೂರು ವಿಧಾನಸಭೆ ಕ್ಷೇತ್ರದಲ್ಲಿ ಬೆಳಗ್ಗೆ ಹಾಗೂ ಚನ್ನರಾಯಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಸಂಜೆ ಸಮಾವೇಶ ನಡೆಸಿ, ರಾತ್ರಿ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

ಸಂಧಾನ ಸಭೆ:ಟಿಕೆಟ್ ಪೈಪೋಟಿ ಹಿನ್ನೆಲೆ ಇಂದು ಪ್ರವಾಸಕ್ಕೆ ತೆರಳುವ ಮುನ್ನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಂಧಾನ ಸಭೆ ನಡೆಸಿದರು. ಬೆಳಗಾವಿ ಜಿಲ್ಲೆಯ ರಾಮದುರ್ಗಾ ಕ್ಷೇತ್ರದ ಆಕಾಂಕ್ಷಿಗಳ ನಡುವೆ ಸಂಧಾನ ಸಭೆ ಮಾಡಿದರು. ಟಿಕೆಟ್​ಗಾಗಿ ಅಶೋಕ್ ಪಟ್ಟಣ್ ಹಾಗೂ ಚಿಕ್ಕರೇವಣ್ಣ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇಬ್ಬರನ್ನು ಕರೆಯಿಸಿ ಮಾತನಾಡಿದ್ದಾರೆ. ಶಿವಾನಂದ ವೃತ್ತದ ಸರ್ಕಾರಿ ನಿವಾಸದಲ್ಲಿ ಸಭೆ ನಡೆಸಿದ ಮಾಜಿ ಸಿಎಂ, ಟಿಕೆಟ್​ಗಾಗಿ ಪಟ್ಟು ಹಿಡಿದಿದ್ದ ಚಿಕ್ಕರೇವಣ್ಣನವರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ. ಈಗ ಅಶೋಕ್ ಪಟ್ಟಣ್​ಗೆ ಟಿಕೆಟ್ ಕೊಡೋಣ. ಸರ್ಕಾರ ಬಂದಾಗ ಸ್ಥಾನಮಾನ ನೀಡೋಣ ಎಂದು ಚಿಕ್ಕರೇವಣ್ಣಗೆ ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯ ಮಾತಿಗೆ ಕೊನೆಗೂ ಒಪ್ಪಿಗೆ ನೀಡಿದ ಚಿಕ್ಕರೇವಣ್ಣ ಅಲ್ಲಿಂದ ತೆರಳಿದ್ದಾರೆ.

ಇದನ್ನೂ ಓದಿ:ಬಿಜೆಪಿ ಸರ್ಕಾರ ಜನರಿಗೆ ಮಕ್ಮಲ್​ ಟೋಪಿ ಹಾಕಿದೆ.. ಪ್ರಜಾಧ್ವನಿ ಮೂಲಕ ಕಾಂಗ್ರೆಸ್​ ನಾಯಕರ ವಾಗ್ದಾಳಿ

ಯತ್ನಾಳ್ ಗೆಲ್ಲಲ್ಲ: 'ಸಾಬರಿಗೆ ಓಟ್ ಹಾಕಬೇಡಿ' ಎಂಬ ಯತ್ನಾಳ್​ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ,ಈ ಬಾರಿ ಯತ್ನಾಳ್​ ಗೆಲ್ಲಲ್ಲ ಎಂದರು. ಬಳಿಕ ರಾಮದುರ್ಗ ಟಿಕೆಟ್ ಸಂಧಾನ ವಿಚಾರದ ಬಗ್ಗೆ ಮಾತನಾಡಿ, ಚಿಕ್ಕರೇವಣ್ಣ ಕೆಲಸ ಮಾಡಿಕೊಂಡು ಬರ್ತಾ ಇದ್ರು. ದುಡ್ಡು ಖರ್ಚು ಮಾಡಿ ಸಂಘಟನೆ ಮಾಡುತ್ತಾ ಇದ್ರು. ನಾನು ರೇವಣ್ಣನನ್ನು ಕರೆದು ಮಾತನಾಡಿದೆ. ಈ ಬಾರಿ ಅಶೋಕ್ ಪಟ್ಟಣ್​ಗೆ ಟಿಕೆಟ್ ಕೋಡೋಣ, ಗೆಲ್ಲಲು ಕೆಲಸ ಮಾಡೋಣ ಅಂತ ಹೇಳಿದ್ದೇನೆ. ಮುಂದೆ ಅವಕಾಶ ನೀಡುವ ಬಗ್ಗೆ ಹೇಳಿದ್ದೇನೆ. ಇದಕ್ಕೆ ಚಿಕ್ಕರೇವಣ್ಣ ಒಪ್ಪಿಕೊಂಡಿದ್ದಾರೆ. ಬೇಕಿದ್ರೆ, ಅವರನ್ನೇ ಕೇಳಿ ಅಂದ ಸಿದ್ದರಾಮಯ್ಯ ಮಾತಿಗೆ ಚಿಕ್ಕರೇವಣ್ಣ ತಲೆ ಅಲ್ಲಾಡಿಸಿ ಸಮ್ಮತಿ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಮೋದಿ ಆಗಮನದ ವಿಚಾರ ಮಾತನಾಡಿ, 'ಪ್ರವಾಹ, ಜನ ಸತ್ತಾಗ ಬರಲಿಲ್ಲ. ಈಗ ಬರಲು ಶುರು ಮಾಡಿದ್ದಾರೆ. ಯಾಕೆಂದರೆ, ಬಿಜೆಪಿ ಅವರಿಗೆ ನಾಯಕತ್ವ ಇಲ್ಲ. ಅದಕ್ಕೆ ಮೋದಿ ಮುಖ ಇಟ್ಟುಕೊಂಡು ಮತ ಕೇಳ್ತಾರೆ' ಎಂದು ರಾಜ್ಯ ಬಿಜೆಪಿ ನಾಯಕರಿಗೆ ಕುಟುಕಿದರು.

ABOUT THE AUTHOR

...view details