ಕರ್ನಾಟಕ

karnataka

ಪಿಎಸ್​ಐ ನೇಮಕಾತಿ ಹಗರಣ.. ಗೃಹ ಸಚಿವರ ವಜಾ, ಬೊಮ್ಮಾಯಿ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

By

Published : Jul 5, 2022, 1:36 PM IST

ಪಿಎಸ್​ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಬಂಧನ- ಗೃಹ ಸಚಿವರನ್ನು ವಜಾ, ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಲಿ- ಸಿದ್ದರಾಮಯ್ಯ, ಡಿಕೆಶಿ ಆಗ್ರಹ

Congress outrage against BJP
ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಕೆಲ ವಿಚಾರವಾಗಿ ರಾಜ್ಯದ ಆಡಳಿತಕ್ಕೆ ಕಪ್ಪು ಚುಕ್ಕೆ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನ್ಯಾಯಾಂಗಕ್ಕೆ ಭದ್ರತೆ ಇಲ್ಲ. ನ್ಯಾಯಮೂರ್ತಿ ಸ್ಥಾನಕ್ಕೆ ಕಂಟಕ ಬರುವ ಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರದ ಮೇಲೆ ಬಂದ ಆರೋಪಕ್ಕೆ ಮಾಹಿತಿ ನೀಡದೇ ವಿವರ ಮುಚ್ಚಿ ಹಾಕುವ ಕಾರ್ಯ ಸರ್ಕಾರದಿಂದ ಆಗಿದೆ. ನಿನ್ನೆ ಸರ್ಕಾರದ ಇಬ್ಬರು ಅಧಿಕಾರಿಗಳ ಬಂಧನವಾಗಿದೆ. ಪಿಎಸ್ಐ ನೇಮಕದಲ್ಲಿ ಅಕ್ರಮವಾಗಿದೆ. ಪ್ರಕ್ರಿಯೆಯಲ್ಲಿ ಲೋಪವಾಗಿದೆ. ಅಧಿಕಾರಿ ಬಂಧನವಾದ ಅರ್ಧ ಗಂಟೆಯಲ್ಲಿ ಆರೋಗ್ಯ ತಪಾಸಣೆಗೆ ಕಳುಹಿಸಿದ್ದೀರಿ. ಅಷ್ಟು ತ್ವರಿತವಾಗಿ ವಿಚಾರಣೆ ಮುಗಿಸಿದ್ದು ಏಕೆ? ನಮ್ಮನ್ನು ವಿಚಾರಣೆಗೆ ಕರೆಸಿದಾಗ ಅರ್ಧ ದಿನ ವಿಚಾರಣೆ ನಡೆಸುತ್ತೀರಿ ಎಂದು ಕಿಡಿಕಾರಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಸರ್ಕಾರ ನೇರವಾಗಿ ಶಾಮೀಲಾಗಿದೆ. ಸಿಎಂ ಇದರ ಹೊಣೆಗಾರಿಕೆ ವಹಿಸಿಕೊಂಡು ರಾಜೀನಾಮೆ ಸಲ್ಲಿಸಬೇಕು. ಗೃಹ ಸಚಿವರು ಸುಳ್ಳು ಹೇಳಿದ್ದಾರೆ. ಸರ್ಕಾರದ ದಾರಿ ತಪ್ಪಿಸಿದ್ದಾರೆ. ಅವರ ವಿರುದ್ಧವೂ ಕೇಸ್​ ದಾಖಲಾಗಬೇಕು. ಕೂಡಲೇ ಸರ್ಕಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ರಾಜ್ಯದ ಗೌರವ ಉಳಿಸಲು ರಾಜ್ಯಪಾಲರು ಸರ್ಕಾರವನ್ನು ವಿಸರ್ಜಿಸಲು ಸೂಚನೆ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಪಿಎಸ್ಐ ಅಕ್ರಮ ನೇಮಕಾತಿ ಹಗರಣದಲ್ಲಿ ಅಮೃತ್ ಪಾಲ್ ಅವರನ್ನು ಬಂಧಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಅಕ್ರಮವನ್ನು ನಾವು ಸದನದಲ್ಲಿ ಪ್ರಸ್ತಾಪಿಸಿದಾಗ ಆಡಳಿತ ಪಕ್ಷದವರು ನಮ್ಮ ಮೇಲೆಯೇ ಮುಗಿಬಿದ್ದಿದ್ದರು. ಅಕ್ರಮ, ಅವ್ಯವಹಾರ ನಡೆದಿಲ್ಲ ಎಂದು ಸಿಎಂ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ನಮ್ಮ ಆರೋಪವನ್ನು ತಳ್ಳಿಹಾಕಿದ್ದರು. ಇದೀಗ ಅವರನ್ನು ಬಂಧಿಸಿದ್ದೇವೆ ಎಂದು ಬೆನ್ನುತಟ್ಟಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ

ರಾಜ್ಯದ ಮುಖ್ಯಮಂತ್ರಿ ಭ್ರಷ್ಟರ ರಕ್ಷಣೆ ಮಾಡುತ್ತಿದ್ದಾರೆ. ನ್ಯಾಯಮೂರ್ತಿಗೆ ಭದ್ರತೆ ಇಲ್ಲವೆಂದರೆ ಇನ್ನು ಯಾರಿಗೆ ರಕ್ಷಣೆ ಸಿಗಲಿದೆ. ಜಡ್ಜ್ ಆದೇಶ ಮಾಡದಿದ್ದರೆ ಡಿಸಿ ವಿರುದ್ಧ ಪ್ರಕರಣ ದಾಖಲಾಗುತ್ತಲೇ ಇರಲಿಲ್ಲ. ಬೆದರಿಕೆ ಒಡ್ಡುವುದು ಹೆಚ್ಚಾಗಿದೆ. ಲಂಚ ಹಗರಣಗಳು ಮುಗಿಲು ಮುಟ್ಟಿವೆ. ಎಸಿಬಿಯನ್ನು ಭ್ರಷ್ಟಾಚಾರದ ಕೂಪ ಮಾಡಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪರ ಪುತ್ರ ವಿಜಯೇಂದ್ರ, ಸಚಿವ ಅಶ್ವತ್ಥ್ ನಾರಾಯಣ ಪ್ರಕರಣದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ ಎಂಬ ಆರೋಪ ಇದೆ. ಅಶ್ವತ್ಥ್ ನಾರಾಯಣ ಅವರ ಸಂಬಂಧಿಕರಾದ ಐವರು ಅಂಕ ತಿದ್ದುಪಡಿ ಮಾಡಿಕೊಂಡು ಆಯ್ಕೆಯಾಗಿದ್ದಾರೆ. ಸಿಎಂ ಇವರ ಪೋಷಣೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಇದನ್ನೂ ಓದಿ:ಆರಗ ಜ್ಞಾನೇಂದ್ರ ಅವರಿಂದ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

ಜಮೀರ್ ನಿವಾಸದ ಮೇಲೆ ಎಸಿಬಿ ದಾಳಿ ಕುರಿತು ಮಾತನಾಡಿ, ಯಾರು ದಾಳಿ ಮಾಡಿದ್ದಾರೋ ಗೊತ್ತಿಲ್ಲ. ಇಡಿ, ಎಸಿಬಿ ವಿಚಾರಣೆಯಲ್ಲಿ ಸಾಮ್ಯತೆ ಇದೆ. ಇಡಿ ಒತ್ತಡದ ಮೇಲೆ ದಾಳಿ ನಡೆದಿದೆ ಅಂತ ಒಪ್ಪಲ್ಲ. ಪಿಎಸ್ಐ ಅಕ್ರಮ ಪ್ರಕರಣ ಮರೆಮಾಚಲು ಸಹ ಎಸಿಬಿ ದಾಳಿ ನಡೆದಿರಬಹು ಎಂದು ಶಂಕೆ ವ್ಯಕ್ತಪಡಿಸಿದರು.

ABOUT THE AUTHOR

...view details