ಬೆಂಗಳೂರು:ರಾಜ್ಯದ ಕಾಂಗ್ರೆಸ್ ನಾಯಕರಲ್ಲಿ ಮುಂದಿನ ಸಿಎಂ ಯಾರು ಆಗಬೇಕು ಎನ್ನುವ ಕುರಿತು ಚರ್ಚೆ ಆಗದಿರುವುದು ಪಕ್ಷಕ್ಕೆ ಹಾಗೂ ಜನರಿಗೆ ಒಳಿತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು ಪ್ರಸ್ ಕ್ಲಬ್ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಈ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಮುಂದಿನ ಸಿಎಂ ಯಾರಾಗಬೇಕು ಎನ್ನುವ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಾತನಾಡದಿದ್ದರೆ ಪಕ್ಷಕ್ಕೆ ಅನುಕೂಲ. ಜನರು ಹಾಗೂ ಪಕ್ಷದ ಹಿತದೃಷ್ಟಿಯಿಂದ ಇದು ಅನಿವಾರ್ಯವಾಗಿದೆ ಎಂದರು.
ಸಿದ್ದು ಡಿಕೆಶಿ ಸಿಎಂ ಹೇಳಿಕೆ ವಿಚಾರ ಪಕ್ಷಕ್ಕೆ ಮುಜುಗರ:ಕಾಂಗ್ರೆಸ್ ಅಧಿಕಾರಕ್ಕೆ ಬರುವ ಅನಿವಾರ್ಯತೆ ರಾಜ್ಯದಲ್ಲಿ ಇದ್ದು, ಯಾವುದೇ ರೀತಿಯಲ್ಲಿಯೂ ಜನರ ದೃಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಪರ್ಧೆ ಇದೆ ಎಂಬ ಭಾವನೆ ಮೂಡಬಾರದು. ಒಂದೊಮ್ಮೆ ಭಾವನೆ ಮೂಡಿದರೆ ಅದು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಮಾರಕ ಆಗಿಯೂ ಪರಿಣಮಿಸಬಹುದು. ಯಾರು ಸಿಎಂ ಆಗಬೇಕು ಎಂಬ ಹೇಳಿಕೆಯನ್ನು ಸಿದ್ದರಾಮಯ್ಯ ಹಾಗೂ ಡಿಕೆಶಿ ನೀಡದಿದ್ದರೆ ಜನರ, ಕಾಂಗ್ರೆಸ್ ಮೇಲಿರುವ ವಿಶ್ವಾಸ ಇನ್ನು ಹೆಚ್ಚಾಗುತ್ತೆ ಹಾಗೂ ಇದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಅಭ್ಯರ್ಥಿಗಳ ಘೋಷಣೆ ಆರು ತಿಂಗಳು ಮುನ್ನ ಆಗ್ಬೇಕಿತ್ತು:ಕಾಂಗ್ರೆಸ್ ಪಕ್ಷ ಚುನಾವಣಾ ಅಭ್ಯರ್ಥಿಯ ಘೋಷಣೆ ಆರು ತಿಂಗಳು ಮುನ್ನವೇ ಮಾಡಬೇಕು ಎಂಬ ಒತ್ತಡ ಇತ್ತು. ಪಕ್ಷದ ನಾಯಕರು ಚುನಾವಣೆಗೆ ಒಂದು ವರ್ಷಕ್ಕೆ ಮುನ್ನ ಇದೇ ನಿಟ್ಟಿನಲ್ಲಿ ಚಿಂತನೆ ನಡೆಸಿ ಸಿದ್ಧತೆ ಕೈಗೊಂಡಿದ್ದರು. ಆರು ತಿಂಗಳು ಮುನ್ನ ಸಾಧ್ಯವಾಗದಿದ್ದರೂ ಚುನಾವಣೆಗೆ ಸಾಕಷ್ಟು ಕಾಲಾವಕಾಶ ಇರುವಾಗಲೇ ಎರಡು ಪಟ್ಟಿಗಳನ್ನ ಬಿಡುಗಡೆ ಮಾಡಿ ನಾವು ಬಿಜೆಪಿ ಹಾಗೂ ಜೆಡಿಎಸ್ ಗಿಂತ ಮುಂದಿದ್ದೇವೆ.
ಒಂದೊಮ್ಮೆ ಚುನಾವಣೆಗೆ ಆರು ತಿಂಗಳು ಮುನ್ನವೇ ಪಕ್ಷದ ಅಭ್ಯರ್ಥಿಯ ಹೆಸರು ಘೋಷಿತವಾಗಿದ್ದರೆ ಪ್ರಚಾರಕ್ಕೆ ಅನುಕೂಲ ಆಗ್ತಿತ್ತು ಎಂದ ಅವರು, ಬಿಜೆಪಿ ಪಟ್ಟಿ ಇನ್ನೂ ಬಿಡುಗಡೆ ಆಗಿಲ್ಲ. ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಆದಾಗ ಸ್ವಲ್ಪ ಗೊಂದಲ ಆಗಿದ್ದು ನಿಜ ಎಂದು ಒಪ್ಪಿಕೊಂಡರು. ಆದರೆ, ಬಿಜೆಪಿ ಪಟ್ಟಿ ಬಿಡುಗಡೆ ಆದಾಗ ಅದರ ಹತ್ತರಷ್ಟು ಗೊಂದಲ ಸೃಷ್ಟಿ ಆಗುತ್ತೆ ಎಂದೂ ಇದೇ ವೇಳೆ ಭವಿಷ್ಯ ನುಡಿದರು.
ಯಡಿಯೂರಪ್ಪ ಮೂಲೆಗುಂಪು:ಬಿಜೆಪಿ ಪಕ್ಷದಲ್ಲಿ ಸಾಕಷ್ಟು ನ್ಯೂನತೆಗಳು ಎದ್ದು ಕಾಣುತ್ತಿವೆ. ಸರ್ಕಾರವನ್ನು ನಡೆಸಿ ಜನರ ನಿರೀಕ್ಷೆಗೆ ತಕ್ಕ ಉತ್ತಮ ಆಡಳಿತ ನೀಡಿಲ್ಲ. ಇನ್ನು ಪಕ್ಷವನ್ನ ಕಟ್ಟಿ ಬೆಳೆಸಿದ್ದ ಬಿಎಸ್ ಯಡಿಯೂರಪ್ಪ ಅವರನ್ನ ಮೂಲೆಗುಂಪು ಮಾಡಲಾಗಿದೆ. ಇದರಿಂದ ಸಾಕಷ್ಟು ತಪ್ಪು ಸಂದೇಶ ಜನರಿಗೆ ರವಾನೆ ಆಗಿದೆ ಎಂದರು. ಯಡಿಯೂರಪ್ಪ ಜಾತಿಗೆ ಸೀಮಿತವಾದ ನಾಯಕ ಆಗಿರಲಿಲ್ಲ. ಇವಾಗ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿರುವುದು ಕಾಂಗ್ರೆಸ್ಗೆ ಅನುಕೂಲವಾಗಿದೆ. ಯಾವುದೇ ಸಕಾರಣ ಇಲ್ಲದೇ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದು ಮಾತ್ರವಲ್ಲದೇ ಅಧಿಕಾರದಿಂದಲೂ ದೂರ ಇಡಲಾಗಿದೆ. ಇದು ಲಿಂಗಾಯತ ಸಮುದಾಯದ ನಾಗರಿಕರಲ್ಲಿ ಆಕ್ರೋಶ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಕಡೆ ಇವರು ಒಲವು ತೋರುವಂತೆ ಮಾಡಲು ಸಹಕಾರಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.