ಬೆಂಗಳೂರು: ಗೋ ಹತ್ಯೆ ನಿಷೇಧ ವಿಧೇಯಕವನ್ನು ಅಂಗೀಕರಿಸದಂತೆ ಹಾಗೂ ಉಪಸಭಾಪತಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ಕಾಂಗ್ರೆಸ್ ಪರಿಷತ್ ಸದಸ್ಯರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಗೋ ಹತ್ಯೆ ನಿಷೇಧ ಬಿಲ್ ತಡೆಹಿಡಿದು, ಉಪಸಭಾಪತಿ ವಿರುದ್ಧ ಕ್ರಮವಹಿಸಿ: ರಾಜ್ಯಪಾಲರಿಗೆ ಕಾಂಗ್ರೆಸ್ ಪತ್ರ - bill against cow slaughter
ಗೋ ಹತ್ಯೆ ನಿಷೇಧ ವಿಧೇಯಕದ ಅಂಗೀಕಾರವನ್ನು ತಡೆಹಿಡಿದು, ಅದನ್ನು ಮರುಪರಿಶೀನೆಗಾಗಿ ಸದನಕ್ಕೆ ಪುನಃ ಕಳಿಸುವಂತೆ ಕಾಂಗ್ರೆಸ್ ಪರಿಷತ್ ಸದಸ್ಯರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಫೆ. 8ರಂದು ಅಜೆಂಡಾ ಪ್ರಕಾರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಯಿತು. ಆದರೆ ಹಠಾತ್ ಉಪಸಭಾಪತಿಯವರು ಗೋಹತ್ಯೆ ನಿಷೇಧ ವಿಧೇಯಕವನ್ನು ಮಂಡಿಸುವಂತೆ ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ಗೆ ಸೂಚನೆ ನೀಡಿದರು. ಇದರ ವಿರುದ್ಧ ಪ್ರತಿಪಕ್ಷ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದೆವು. ಈ ವಿಧೇಯಕದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದೆವು. ಇದಕ್ಕೆ ಸಮ್ಮತಿಸಿದ ಉಪಸಭಾಪತಿ ಕೆಲ ಸದಸ್ಯರಿಗೆ ಚರ್ಚೆಗೆ ಅವಕಾಶ ಮಾಡಿಕೊಟ್ಟರು.
ಬಳಿಕ ಗೃಹ ಸಚಿವ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಮನವಿ ಮೇರೆಗೆ ವಿಧೇಯಕವನ್ನು ಪರ್ಯಾಲೋಚಿಸಲು ಸೂಚಿಸಿದರು. ಈ ವೇಳೆ ಪ್ರತಿಪಕ್ಷ ಸದಸ್ಯರು ವಿಧೇಯಕವನ್ನು ಮತಕ್ಕೆ ಹಾಕುವಂತೆ ಒತ್ತಾಯಿಸಿದರು. ಆದರೆ ಅದಕ್ಕೆ ಕಿವಿಗೊಡದ ಉಪಸಭಾಪತಿ ವಿಧೇಯಕವನ್ನು ಅಂಗೀಕರಿಸಿದರು ಎಂದು ದೂರಿದ್ದಾರೆ.
ಮರುದಿನ ಫೆ.9ರಂದು ಅಜೆಂಡಾದಂತೆ ಸಭಾಪತಿ ಚುನಾವಣೆಯ ನಿರ್ಣಯವನ್ನು ಮಂಡಿಸಿದರು. ಈ ವೇಳೆ ಎಲ್ಲಾ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ನಜೀರ್ ಅಹಮ್ಮದ್ ಸುಗಮವಾಗಿ ಕಲಾಪ ನಡೆಸುವಂತೆ ಉಪಸಭಾಪತಿಗೆ ಮನವಿ ಮಾಡಿದರು. ಆದರೆ ಉಪಸಭಾಪತಿ ಗದ್ದಲದ ಮಧ್ಯೆ ಚುನಾವಣೆ ನಡೆಸದೆ ಬಸವರಾಜ್ ಹೊರಟ್ಟಿಯವರನ್ನು ಸಭಾಪತಿ ಎಂದು ಘೋಷಿಸಿದರು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಗೋ ಹತ್ಯೆ ನಿಷೇಧ ವಿಧೇಯಕದ ಅಂಗೀಕಾರವನ್ನು ತಡೆಹಿಡಿದು, ಅದನ್ನು ಮರುಪರಿಶೀನೆಗಾಗಿ ಸದನಕ್ಕೆ ವಾಪಸ್ ಕಳುಹಿಸುವಂತೆ ತಮ್ಮಲ್ಲಿ ಮನವಿ ಮಾಡುತ್ತೇವೆ. ಜೊತೆಗೆ ಸಭಾಪತಿ ಚುನಾವಣೆ ಸಂಬಂಧ ಕಲಾಪದ ನಡಾವಳಿಯನ್ನು ಪರಿಶೀಲಿಸಿ, ಉಪಸಭಾಪತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.