ಬೆಂಗಳೂರು:ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾದ ಕ್ರಿಯಾ ಯೋಜನೆಗೆ ಸಚಿವರೊಬ್ಬರ ಆಪ್ತ ಕಾರ್ಯದರ್ಶಿ ತಡೆ ಹಿಡಿದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್ ಶಾಸಕ ಭೀಮಾನಾಯಕ್ ಸದನದ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.
ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಅವರ ಉತ್ತರಕ್ಕೆ ತೃಪ್ತರಾಗದ ಅವರು, ಸಚಿವ ಆಪ್ತ ಕಾರ್ಯದರ್ಶಿ ಕ್ರಿಯಾಯೋಜನೆ ಪತ್ರಕ್ಕೆ ತಡೆ ಹಿಡಿದಿದ್ದಾರೆ ಎಂದರೆ ಶಾಸಕರ ಹಕ್ಕಿಗೆ ಬೆಲೆ ಇಲ್ಲವೇ? ಇದು ಸರಿಪಡಿಸಬೇಕೆಂದು ಒತ್ತಾಯಿಸಿ ಸದನದ ಬಾವಿಗಿಳಿದು ಪ್ರತಿಭಟಿಸಿದರು.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣ ಪಂಚಾಯಿತಿಗೆ ನಗರೋತ್ಥಾನ ಯೋಜನೆಯಡಿ 8 ಕೋಟಿ ಕ್ರಿಯಾ ಯೋಜನೆಯನ್ನು ಕಳುಹಿಸಲಾಗಿತ್ತು. ಆದರೆ, ಈ ಕ್ರಿಯಾ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ತಡೆ ಹಿಡಿದಿದ್ದಾರೆ. ಇದು ಶಾಸಕರ ಹಕ್ಕು ಮೊಟಕುಗೊಳಿಸಿದಂತೆ. ರಾಜ್ಯದ 224 ಕ್ಷೇತ್ರಗಳಿಗೂ ಈ ರೀತಿ ಮಾಡಿದ್ದೀರಾ.. ನಮಗೆ ನ್ಯಾಯ ಕೊಡಿ ಎಂದು ಸಭಾಧ್ಯಕ್ಷರ ಬಳಿ ಮನವಿ ಮಾಡಿದರು.
ಆಗ ಮಧ್ಯಪ್ರವೇಶಿಸಿದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರು, ಹಗರಿಬೊಮ್ಮನಹಳ್ಳಿಯ ಪಟ್ಟಣ ಪಂಚಾಯಿತಿಯ ಎಲ್ಲ ವಾರ್ಡ್‍ಗಳಿಗೆ ನ್ಯಾಯಬದ್ಧವಾಗಿ ಅನುದಾನ ಹಂಚಿಕೆ ಮಾಡದೇ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಇದನ್ನು ತಡೆ ಹಿಡಿಯಲಾಗಿದೆ ಎಂದು ಸಮರ್ಥಿಸಿಕೊಂಡರು.
ಎಲ್ಲ ವಾರ್ಡ್‍ಗಳಿಗೂ ನಿಯಮ ಬದ್ಧವಾಗಿ ಅನುದಾನ ಹಂಚಿಕೆಯಾಗಬೇಕು. ಒಂದೊಂದು ವಾರ್ಡ್‍ಗಳಿಗೆ ಒಂದೊಂದು ರೀತಿ ಮಾಡಲು ಬರುವುದಿಲ್ಲ. ಒಂದು ವೇಳೆ ಇದರಲ್ಲಿ ಲೋಪದೋಷಗಳಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.