ಬೆಂಗಳೂರು:ಗುರುವಾರ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುವ ಹಿನ್ನೆಲೆ ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ನಿಟ್ಟಿನಲ್ಲಿ ತಂತ್ರಗಾರಿಕೆ ಹೆಣೆಯುವ ಪ್ರಯತ್ನ ನಡೆಯುತ್ತಿದೆಯೆಂಬ ಮಾತು ಸಹ ಕೇಳಿಬರುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪ್ರಮುಖವಾಗಿ ಸದನದಲ್ಲಿ ಪ್ರವಾಹ ಪರಿಹಾರ ವಿಚಾರವಾಗಿಯೇ ಕಾಂಗ್ರೆಸ್ ದನಿ ಎತ್ತಲಿದೆ. ಈ ನಿಟ್ಟಿನಲ್ಲಿ ಯಾವ ರೀತಿ ಬಿಜೆಪಿ ಸರ್ಕಾರದ ಲೋಪದೋಷಗಳನ್ನು ಪ್ರಸ್ತಾಪಿಸಬೇಕೆಂಬ ಬಗ್ಗೆ ಶಾಸಕಾಂಗ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ.
ಮೂರು ದಿನದ ಕಲಾಪದಲ್ಲೂ ಇದೇ ವಿಚಾರವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಮುಂದಾಗಿದೆ. ಸಂತ್ರಸ್ತರ ಸಮಸ್ಯೆಗಳಿಗೆ ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂಬ ಪ್ರಶ್ನೆ ಎತ್ತಲು, ಪ್ರವಾಹ ಸಂಬಂಧ ಚರ್ಚೆಗೆ ಅಧಿವೇಶನ ವಿಸ್ತರಿಸಲು ಒತ್ತಡ ಹೇರುವ ಬಗ್ಗೆ ಶಾಸಕಾಂಗ ಸಭೆಯಲ್ಲಿ ನಿರ್ಧಾರವಾಗಲಿದೆ.
ಪ್ರವಾಹ ಪರಿಹಾರ ಸಂಬಂಧ ತಂತ್ರಗಾರಿಕೆ ಮಾಡಿ ಸರ್ಕಾರವನ್ನು ಹಣಿಯಲು ತಂತ್ರಗಾರಿಕೆ ರೂಪಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಎಲ್ಲ ಶಾಸಕರಿಗೆ ಧ್ವನಿ ಎತ್ತಲು ಸೂಚನೆ ನೀಡಲಾಗುವುದು. ಈ ಸಂಬಂಧ ನಾಳೆ ನಡೆಯುವ ಸಿಎಲ್ಪಿ ಸಭೆಯಲ್ಲಿ ಹಲವು ಸೂಚನೆಗಳನ್ನು ನೀಡಲಾಗುವುದೆಂದು ಹೇಳಲಾಗುತ್ತಿದೆ.