ಬೆಂಗಳೂರು :ಕಾಂಗ್ರೆಸ್ ನಾಯಕರು ಶಿಸ್ತಿನ ರೇಖೆಯನ್ನು ದಾಟಬಾರದು ಎಂದು ಮಾಜಿ ಸಚಿವ ಎಚ್ ಕೆ ಪಾಟೀಲ್ ರೋಷನ್ ಬೇಗ್ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಕ್ಷ ಸದ್ಯ ಸಂದಿಗ್ಧ ಸ್ಥಿತಿಯಲ್ಲಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಹೆಜ್ಜೆ ಇಡಬೇಕು. ಕಾಂಗ್ರೆಸ್ ನಾಯಕರು ಶಿಸ್ತಿನ ರೇಖೆಯನ್ನು ದಾಟದಿದ್ದರೆ ಪಕ್ಷಕ್ಕೆ ಒಳಿತು. ಮತಗಟ್ಟೆ ಸಮೀಕ್ಷೆಗಳ ಆಧಾರದಲ್ಲಿ ಸೋಲಿನ ಬಗ್ಗೆ ಮಾತನಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರು ಒಬ್ಬ ಉತ್ತಮ ನಾಯಕರಾಗಿದ್ದಾರೆ. ಅವರ ಮೇಲೆ ಯಾವುದೇ ಆರೋಪ ಹೊರಿಸುವುದು ಸರಿಯಲ್ಲ ಎಂದು ತಿಳಿಸಿದರು.
ಮಾಜಿ ಸಚಿವ ಹೆಚ್ ಕೆ ಪಾಟೀಲ್ ಸಿದ್ದರಾಮಯ್ಯ ಸಂಬಂಧ ರೋಷನ್ ಬೇಗ್ ಹೇಳಿಕೆಯನ್ನು ನಾನು ನೋಡಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮದ ತೀರ್ಮಾನದ ವೇಳೆ ನಾನು ಸಚಿವ ಸಂಪುಟದಲ್ಲಿ ಇದ್ದೆ. ಆ ತೀರ್ಮಾನದ ಪರಿಣಾಮ ಏನು ಬಂದಿದೆ, ಅದು ಬೇರೆ. ಆ ನಿರ್ಣಯದಲ್ಲಿ ನಾನು ಪಾಲುದಾರನಾಗಿದ್ದರಿಂದ ನಾನು ಯಾವುದೇ ನಿಲುವು ವ್ಯಕ್ತಪಡಿಸಲ್ಲ ಎಂದು ಸ್ಪಷ್ಟಪಡಿಸಿದರು.
ಎಕ್ಸಿಟ್ ಪೋಲ್ ಬಗ್ಗೆ ಪ್ರತಿಕ್ರಿಯಿಸುತ್ತಾ, ಮತಗಟ್ಟೆ ಸಮೀಕ್ಷೆಗಳನ್ನು ನಾನು ನಂಬಲ್ಲ. ಅದಕ್ಕೆ ವ್ಯತಿರಿಕ್ತವಾದ ಫಲಿತಾಂಶ ಬರಲಿದೆ. ರಾಜ್ಯದಲ್ಲಿ ಕಾಂಗ್ರೆಸ್ 12-16 ಸೀಟು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.