ಬೆಂಗಳೂರು:ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಸಚಿವ ಡಿ.ಕೆ.ಶಿವಕುಮಾರ್ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದಾರೆ.
ಮೈತ್ರಿ ಸರ್ಕಾರ ಕಾಪಾಡಿಕೊಳ್ಳುವುದು, ನಾಯಕತ್ವ ಬದಲಾವಣೆ ಹಾಗೂ ಕಾಂಗ್ರೆಸ್ನಿಂದ ರಿವರ್ಸ್ ಆಪರೇಷನ್ ನಡೆಸುವ ವಿಚಾರವಾಗಿ ಚರ್ಚಿಸಲು ಡಿಕೆಶಿ ಹಾಗೂ ಅವರ ಸೋಹೋದರ ಮತ್ತು ಸಂಸದ ಡಿ.ಕೆ.ಸುರೇಶ್ ಆಗಮಿಸಿದ್ದಾರೆ ಎನ್ನಲಾಗಿದೆ. ಇದಲ್ಲದೆ ಶಾಸಕರಾದ ಶರಣಬಸಪ್ಪ ದರ್ಶನಾಪೂರ, ಮಾಜಿ ಸಂಸದರಾದ ಆರ್.ಧ್ರುವನಾರಾಯಣ್, ಚಂದ್ರಪ್ಪ ಹಾಗೂ ವಿ.ಎಸ್.ಉಗ್ರಪ್ಪ, ಯು.ಬಿ.ವೆಂಕಟೇಶ್ ಮತ್ತಿತರರು ಸದಾಶಿವನಗರದ ಮಲ್ಲಿಕಾರ್ಜುನ ಖರ್ಗೆಯವರ ನಿವಾಸಕ್ಕೆ ಆಗಮಿಸಿದ್ದು, ಸುದೀರ್ಘ ಚರ್ಚೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ಹಿಂದೆ ಸ್ಪಷ್ಟವಾಗಿ ಬಿಜೆಪಿ ಕೈವಾಡ ಕಂಡುಬರುತ್ತಿದೆ. ಇದಲ್ಲದೆ ಶಾಸಕರು ವಿಶೇಷ ವಿಮಾನದಲ್ಲಿ ಮುಂಬೈಗೆ ಹೇಗೆ ತೆರಳುತ್ತಿದ್ದರು. ಅಲ್ಲಿ ಹೇಗೆ ವಾಸ್ತವ್ಯ ಹೂಡಲು ಸಾಧ್ಯ. ಅವರು ಅಷ್ಟೊಂದು ಸ್ಥಿತಿವಂತರಲ್ಲ. ರಾಜೀನಾಮೆ ನೀಡಿದ ಶಾಸಕರನ್ನು ಮುಂಬೈಗೆ ಬರಮಾಡಿಕೊಂಡವರು ಯಾರು ಎನ್ನುವುದನ್ನು ಗಮನಿಸಿದರೆ ಇದರ ಹಿಂದೆ ಯಾರಿದ್ದಾರೆ ಎನ್ನುವುದು ತಿಳಿಯುತ್ತದೆ. ಬಿಜೆಪಿಯವರಿಂದ ಸಂಚು ನಡೆಯುತ್ತಿದೆ ಎಂದು ದೂರಿದರು.