ಬೆಂಗಳೂರು:ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿ ನಿಭಾಯಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜೂಭಾಯ್ ವಾಲಾರನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕರು, ರಾಜ್ಯದ ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿ ಸಿದ್ಧಪಡಿಸಿದ ವರದಿಯನ್ನು ಸಲ್ಲಿಸಿದರು. ಜೊತೆಗೆ ಪರಿಣಾಮಕಾರಿಯಾಗಿ ಕಾಮಗಾರಿಗಳನ್ನು ರೂಪಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ. ಇದನ್ನು ತಾವು ಪ್ರಧಾನಿಗಳ ಗಮನಕ್ಕೆ ತಂದು ರಾಜ್ಯಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಬೇಕೆಂದು ಮನವಿ ಮಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಆರ್.ವಿ ದೇಶಪಾಂಡೆ, ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್, ರಮಾನಾಥ ರೈ ನೇತೃತ್ವದ ನಿಯೋಗದಿಂದ ಮನವಿ ಸಲ್ಲಿಸಲಾಯಿತು.
ಕೈ ನಾಯರಿಂದ ರಾಜ್ಯಪಾಲರಿಗೆ ದೂರು ವಸ್ತು ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇವೆ :
ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿ, ರಾಜ್ಯದ ವಸ್ತು ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇವೆ. ಉ.ಕ, ಮಲೆನಾಡು, ಕರಾವಳಿ ಭಾಗದಲ್ಲಿ ಅತಿವೃಷ್ಠಿಯಿಂದ ಹಾನಿಯಾಗಿದ್ದು, 104 ತಾಲೂಕುಗಳು ಸಂಕಷ್ಟದಲ್ಲಿದೆ. ಜನ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ರಸ್ತೆ, ಸೇತುವೆ, ಕಟ್ಟಡಗಳು ಕುಸಿದು ಹಳ್ಳಿಗಳು ಮುಳುಗಡೆಯಾಗಿವೆ. ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಿದ್ದೇವೆ. ಒಂದು ಲಕ್ಷ ಕೋಟಿಗೂ ಹೆಚ್ಚು ಹಾನಿಯಾಗಿದ್ದು, ಹೀಗಾಗಿ ಪ್ರಧಾನಿ ಕೂಡಲೇ ರಾಜ್ಯಕ್ಕೆ ಭೇಟಿ ನೀಡಬೇಕು. ಪರಿಸ್ಥಿತಿಯನ್ನ ಅರಿತು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಶೀಘ್ರದಲ್ಲಿ ಕೇಂದ್ರ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಈ ಮೂರು ಬೇಡಿಕೆಯ ಮನಿವಿಯನ್ನು ರಾಜ್ಯಪಾಲರ ಮುಂದಿಟ್ಟಿದ್ದೇವೆ ಎಂದರು.
ಲಕ್ಷ ಕುಟುಂಬಗಳು ಬೀದಿಗೆ ಬಂದಿವೆ :
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ನೂರು ವರ್ಷದಲ್ಲಿ ಕಂಡು ಕೇಳರಿಯದ ಪ್ರವಾಹ ಉಂಟಾಗಿದೆ. ಸಾವಿರ ಹಳ್ಳಿಗಳು ಪ್ರವಾಹದಲ್ಲಿ ಮುಳುಗಿವೆ. ಲಕ್ಷ ಕುಟುಂಬಗಳು ಬೀದಿಗೆ ಬಂದಿವೆ. ಜನರಿಗೆ ವಾಸ ಮಾಡೋಕೆ ಜಾಗವಿಲ್ಲದೆ ನಿರಾಶ್ರಿತರಾಗಿದ್ದಾರೆ. ಮುಳುಗಿರುವ ಹಳ್ಳಿಗಳನ್ನು ಸಂಪೂರ್ಣ ಸ್ಥಳಾಂತರಿಸಿ, ಅವುಗಳನ್ನ ಮುಳುಗಡೆ ಪ್ರದೇಶ ಎಂದು ಘೋಷಿಸಬೇಕು. ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್ ಹಾಕಿಕೊಡಬೇಕು. ಮನೆ ಕಟ್ಟಿಕೊಳ್ಳುವವರೆಗೆ ಮೂಲಭೂತ ಸೌಲಭ್ಯ ಒದಗಿಸಬೇಕು. 10 ಸಾವಿರ ಸಾಲಲ್ಲ, ಒಂದು ಲಕ್ಷ ರೂ. ಪರಿಹಾರ ನೀಡಬೇಕು. ಎಕರೆಗೆ 50 ಲಕ್ಷ, ಹೆಕ್ಟೇರ್ ಗೆ 1.25 ಲಕ್ಷ ರೂ ನೀಡಬೇಕು. ರಾಜ್ಯದ 7 ಜಿಲ್ಲೆಗಳಲ್ಲಿ ಭೀಕರ ಬರಗಾಲವಿದೆ. ಕೂಡಲೇ ಬರಪರಿಹಾರ ಕಾರ್ಯಕ್ರಮ ಆರಂಭಿಸಬೇಕು. ಪ್ರವಾಹ ಪ್ರದೇಶಗಳಲ್ಲಿ ಸಮಾರೋಪಾದಿಯಲ್ಲಿ ಕೆಲಸ ಆಗಬೇಕು. ಬಿದ್ದ ಶಾಲೆಗಳನ್ನ ಕೂಡಲೇ ಪ್ರಾರಂಭಿಸಬೇಕು. ಕನಿಷ್ಠ ಒಂದು ಲಕ್ಷ ಕೋಟಿ ಇದಕ್ಕೆ ಬೇಕಿದೆ ಎಂದು ಹೇಳಿದರು.