ಬೆಂಗಳೂರು : ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಂದ ಚುನಾವಣಾ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಚುನಾವಣಾಧಿಕಾರಿಗಳಿಗೆ ಇಂದು ದೂರು ಸಲ್ಲಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಂಸದ ಉಗ್ರಪ್ಪ, ಕಾನೂನು ವಿಭಾಗದ ಮುಖ್ಯಸ್ಥ ಪೊನ್ನಣ್ಣ ಮತ್ತಿತರ ನಾಯಕರು ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ತೆರಳಿ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ಗೆ ದೂರು ನೀಡಿದರು.
ದೂರು ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾನೂನು ವಿಭಾಗದ ಮುಖ್ಯಸ್ಥ ವಿ ಎಸ್ ಉಗ್ರಪ್ಪ, ಮುಕ್ತ ಹಾಗೂ ನಿರ್ಭಯವಾಗಿ ಮತದಾನ ಆಗಬೇಕು ಎಂಬ ಕಾರಣಕ್ಕಾಗಿ ಗುರುತಿನ ಚೀಟಿ ನೀಡಲಾಗಿದೆ. ಆದರೆ, ಒಬ್ಬ ಮತದಾರರಿಗೆ ಐದು ಸಾವಿರ ಕೊಟ್ಟು ಮತದಾರರ ಗುರುತಿನ ಚೀಟಿ ಖರೀದಿಸಿದ್ದಾರೆ. ಕಳೆದ ಬಾರಿ ಕೂಡಾ ಈ ಅಭ್ಯರ್ಥಿ ಇದೇ ರೀತಿಯ ಅವ್ಯವಹಾರ ಮಾಡಿದ್ದರು.
ಒಬ್ಬ ಅಭ್ಯರ್ಥಿ ₹28 ಲಕ್ಷ ಮಾತ್ರ ಚುನಾವಣೆಗೆ ಖರ್ಚು ಮಾಡಬೇಕು. ಆದರೆ, ವೋಟರ್ ಐಡಿ ಖರೀದಿಗಾಗಿ ಈಗಾಗಲೇ ಐದು ಲಕ್ಷ ಖರ್ಚು ಮಾಡಿದ್ದಾರೆ. ಈ ಎಲ್ಲ ಕಾರಣಕ್ಕಾಗಿ ಬಿಜೆಪಿ ಅಭ್ಯರ್ಥಿಯನ್ನು ಅನರ್ಹ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದರು.
ಸಾಧನೆಗಳ ಮೂಲಕ ಜನರನ್ನು ತಲುಪಬೇಕೇ ವಿನಃ, ಅವ್ಯವಹಾರ ಮಾಡಿ ಮತ ಗಳಿಸಬಾರದು. ಜನ ಕೂಡ ಇಂತಹ ಅಭ್ಯರ್ಥಿಯನ್ನು ತಿರಸ್ಕರಿಸಿ ಬುದ್ಧಿ ಕಲಿಸಬೇಕು. ಚುನಾವಣೆಯಲ್ಲಿ ಮುನಿರತ್ನ ಅಕ್ರಮವೆಸಗುತ್ತಿದ್ದಾರೆ. ಮತದಾರರಿಗೆ ಅಮಿಷ ಒಡ್ಡುತ್ತಿದ್ದಾರೆ. ವೋಟರ್ ಐಡಿ ಪಡೆದು ಹಣ ಹಂಚುತ್ತಿದ್ದಾರೆ. ಅಕ್ರಮ ಮತದಾನಕ್ಕೆ ಪ್ರಯತ್ನ ನಡೆಸುತ್ತಿದ್ದಾರೆಂದು ದೂರು ನೀಡಿದ್ದೇವೆ ಎಂದರು.
ಮುಕ್ತ ಮತದಾನಕ್ಕೆ ಗುರುತಿನ ಚೀಟಿ ನೀಡಲಾಗಿದೆ. ಗುರುತಿನ ಚೀಟಿ ಪಡೆದು ಹಣ ಕೊಟ್ಟಿದ್ದಾರೆ. ಒಂದೊಂದು ಐಡಿಗೆ ₹5 ಸಾವಿರ ಕೊಟ್ಟಿದ್ದಾರೆ. ಕಳೆದ ಬಾರಿ ಇದೇ ಅಭ್ಯರ್ಥಿ ಅವ್ಯವಹಾರ ಮಾಡಿದ್ದರು. ಒಬ್ಬ ಅಭ್ಯರ್ಥಿ ₹28 ಲಕ್ಷ ಖರ್ಚು ಮಾಡಬೇಕು. ವೋಟರ್ ಐಡಿ ಖರೀದಿಗೆ 2.5 ಕೋಟಿ ಖರ್ಚು ಮಾಡಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನು ಅನರ್ಹ ಮಾಡಬೇಕು. ಹೀಗಾಗಿ, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ನಾಳೆ ಸಂಜೆಯೊಳಗೆ ಕ್ರಮ ತೆಗೆದುಕೊಳ್ತೇವೆ ಅಂದಿದ್ದಾರೆ. ಆಯೋಗದ ಮೇಲೆ ನಮಗೆ ವಿಶ್ವಾಸವಿದೆ ಎಂದರು.
ಉಗ್ರಪ್ಪ ಸವಾಲು :ಡಿಕೆಶಿ ಮೀರ್ ಸಾದಿಕ್ ಎಂಬ ಡಿಸಿಎಂ ಅಶ್ವತ್ಥ್ ನಾರಾಯಣ್ ಆರೋಪಕ್ಕೆ ಮಾಜಿ ಸಂಸದ ಉಗ್ರಪ್ಪ ಸವಾಲು ಹಾಕಿ, ಧಮ್ಮು-ತಾಕತ್ ಇದ್ರೆ ಬಹಿರಂಗ ಚರ್ಚೆಗೆ ಬರಲಿ. ನಾವು ನಮ್ಮ ಅಭ್ಯರ್ಥಿ ಜೊತೆ ಬರ್ತೇವೆ. ಅವರು ಅವರ ಅಭ್ಯರ್ಥಿ ಜೊತೆ ಬರಲಿ. ವಿಧಾನಸೌಧದ ಪೂರ್ವ ದ್ವಾರದ ಮುಂದೆ ಬರಲಿ. ಯಾರು ಸರ್ಕಾರ ಬೀಳಿಸಿದ್ರು, ಎಲ್ಲವೂ ಬಹಿರಂಗವಾಗಲಿದೆ ಎಂದರು.
ನಾವು ದೂರನ್ನ ನೀಡಿದ್ದೇವೆ :ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಬಿಜೆಪಿ ಅಭ್ಯರ್ಥಿಯಿಂದ ಚುನಾವಣೆ ಅಕ್ರಮ ನಡೆಯುತ್ತಿದೆ. ನಮ್ಮ ಮತದಾರರಿಗೆ ಅಮಿಷ ಒಡ್ಡುತ್ತಿದ್ದಾರೆ. ಅವರಿಗೆ ಸೋಲಿನ ಅನುಭವವಾಗುತ್ತಿದೆ. ಅದಕ್ಕೆ ಈ ರೀತಿಯ ಪ್ರಯತ್ನ ಮಾಡ್ತಿದ್ದಾರೆ. ಇದರ ಬಗ್ಗೆ ನಾವು ದೂರನ್ನ ನೀಡಿದ್ದೇವೆ. ಚುನಾವಣಾ ಆಯೋಗ ಕ್ರಮವನ್ನು ತೆಗೆದುಕೊಳ್ಳಲಿದೆ. ಸೋಲಿನ ವಾಸನೆ ಅವರಿಗೆ ಗಮನಕ್ಕೆ ಬಂದಿದೆ. ಎರಡೂ ಕ್ಷೇತ್ರಗಳಲ್ಲಿ ನಾವೇ ಗೆಲ್ತೇವೆ ಎಂದರು.
ಮುನಿರತ್ನ ಹಿಂದೆಯೂ ಅಕ್ರಮವೆಸಗಿದ್ದಾರೆ :ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಮಾತನಾಡಿ, ಮುನಿರತ್ನ ಹಿಂದೆಯೂ ಅಕ್ರಮವೆಸಗಿದ್ದಾರೆ. ಅವರ ಮೇಲೆ ಕೇಸ್ ಕೂಡ ದಾಖಲಾಗಿದೆ. ಈಗಲೂ ಅದೇ ಪ್ರಯತ್ನದಲ್ಲೇ ಗೆಲ್ಲೋಕೆ ಹೊರಟಿದ್ದಾರೆ. ಇದರ ಬಗ್ಗೆ ನಾವು ಆಯೋಗಕ್ಕೆ ದೂರು ನೀಡಿದ್ದೇವೆ. ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಇದರ ಜೊತೆ ಪೊಲೀಸ್ ಆಯುಕ್ತರೂ ದೂರು ದಾಖಲಿಸಬೇಕು. ಸೂಕ್ಷ್ಮ ಪ್ರದೇಶವಾಗಿರೋದ್ರಿಂದ ಹೆಚ್ಚು ಗಮನಹರಿಸಬೇಕು. ಮೂರು ವಿಚಾರದ ಬಗ್ಗೆ ನಾವು ದೂರು ನೀಡಿದ್ದೇವೆ. ನ್ಯಾಯಯುತವಾಗಿ ಚುನಾವಣೆ ನಡೆಯಬೇಕು ಎಂದು ವಿವರಿಸಿದರು.