ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶಿರಾ ಶಾಸಕ ಸತ್ಯನಾರಾಯಣ ನಿಧನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿರಾ ಜೆಡಿಎಸ್ ಶಾಸಕರಾದ ಸತ್ಯನಾರಾಯಣ ಕಳೆದ ಕೆಲದಿನಗಳಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಇವರು ನಿಧನರಾಗಿದ್ದು, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ರಾಜ್ಯಸಭೆ ಸದಸ್ಯ ಜಿಸಿ ಚಂದ್ರಶೇಖರ್ ಸೇರಿದಂತೆ ಹಲವು ನಾಯಕರು ಟ್ವಿಟರ್ ಮೂಲಕ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ತಮ್ಮ ಟ್ವೀಟ್ನಲ್ಲಿ, ನನ್ನ ಆತ್ಮೀಯ ಸ್ನೇಹಿತರಾದ ಶಾಸಕ ಭುವನಹಳ್ಳಿ ಸತ್ಯನಾರಾಯಣ ಅವರು ಸರಳ ವ್ಯಕ್ತಿತ್ವ, ಸಜ್ಜನಿಕೆಯ ನಡವಳಿಕೆಯ ಸ್ನೇಹಜೀವಿಯಾಗಿದ್ದರು. ಅವರ ಅಕಾಲಿಕ ಸಾವಿನಿಂದಾಗಿ ನನಗೆ ಅತೀವ ದುಃಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್ ಮಾಡಿದ್ದು, ಮಾಜಿ ಸಚಿವ ಹಾಗೂ ಶಿರಾ ಕ್ಷೇತ್ರದ ಹಾಲಿ ಶಾಸಕರಾದ ಬಿ. ಸತ್ಯನಾರಾಯಣ ಅವರ ಸಾವಿನ ಸುದ್ದಿ ತೀವ್ರ ದುಃಖಕರ ಸಂಗತಿ. ಸತ್ಯನಾರಾಯಣ ಅವರ ಸಾವು ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.