ಕರ್ನಾಟಕ

karnataka

ETV Bharat / state

ರಾಜೀನಾಮೆಗೆ ಆಗ್ರಹಿಸಿ ಸಿಎಂ ನಿವಾಸದತ್ತ ಹೊರಟಿದ್ದ ಕಾಂಗ್ರೆಸ್​ ನಾಯಕರು ಪೊಲೀಸ್​​​ ವಶಕ್ಕೆ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ಆಗ್ರಹ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ಆಗ್ರಹ - ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ಕಾಂಗ್ರೆಸ್ ನಾಯಕರು - ಸಿದ್ದರಾಮಯ್ಯ ಸೇರಿದಂತೆ ಎಲ್ಲರನ್ನು ವಶಕ್ಕೆ ಪಡೆದ ಪೊಲೀಸರು

Etv Bharatcongress-leaders-detained-while-protest-in-bengaluru
ರಾಜೀನಾಮೆಗೆ ಆಗ್ರಹಿಸಿ ಸಿಎಂ ನಿವಾಸದತ್ತ ಹೊರಟಿದ್ದ ಕಾಂಗ್ರೆಸ್​ ನಾಯಕರು ಪೊಲೀಸ್​​​ ವಶಕ್ಕೆ

By

Published : Mar 4, 2023, 12:07 PM IST

Updated : Mar 4, 2023, 1:25 PM IST

ರಾಜೀನಾಮೆಗೆ ಆಗ್ರಹಿಸಿ ಸಿಎಂ ನಿವಾಸದತ್ತ ಹೊರಟಿದ್ದ ಕಾಂಗ್ರೆಸ್​ ನಾಯಕರು ಪೊಲೀಸ್​​​ ವಶಕ್ಕೆ

ಬೆಂಗಳೂರು:ಭ್ರಷ್ಟಾಚಾರ ಆರೋಪದ ಕಾರಣ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿದ್ದ ‌ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆಗೆ ಬ್ರೇಕ್​ ಬಿದ್ದಿದೆ. ಸಿಎಂ ನಿವಾಸದತ್ತ ಹೊರಟಿದ್ದ ಕಾಂಗ್ರೆಸ್​ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ದಾಖಲೆ ಸಮೇತ ಲೋಕಾಯುಕ್ತರ ಬಲೆಗೆ ಬಿದ್ದ ಪ್ರಕರಣ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಪ್ರತಿಭಟನೆ ಹಮ್ಮಿಕೊಂಡಿತ್ತು.

ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಕೃಷ್ಣ ಬೈರೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಕೆಜೆ ಜಾರ್ಜ್ ಪಕ್ಷದ ಹಿರಿಯ ಮುಖಂಡರುಗಳು, ಸಂಸದರು, ಶಾಸಕರುಗಳು, ಕೆಪಿಸಿಸಿ ಪದಾಧಿಕಾರಿಗಳು ಭಾಗವಹಿಸಿದ್ದರು. ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದ ಕಾಂಗ್ರೆಸ್ ನಾಯಕರನ್ನು ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ ಬಳಿಯೇ ತಡೆದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಂಗ್ರೆಸ್​ ನಾಯಕರ ಪ್ರತಿಭಟನೆ

ಪ್ರತಿಭಟನೆ ವೇಳೆ ಮಾತನಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಕರ್ನಾಟಕದಲ್ಲಿನ ಬೊಮ್ಮಾಯಿ ಸರ್ಕಾರದ ಹೆಸರನ್ನು ಭ್ರಷ್ಟ ಬೊಮ್ಮಾಯಿ ಸರ್ಕಾರ ಎಂದು ಬದಲಾಯಿಸಬೇಕು. ಭಾರತದಲ್ಲಿ ಸಿಎಂ ಬೊಮ್ಮಾಯಿ ಎಲ್ಲಿಗೇ ಹೋದರೂ ಕರ್ನಾಟಕದ 40 ಪರ್ಸೆಂಟ್ ಸರ್ಕಾರದ ಸಿಎಂಗೆ ಸ್ವಾಗತ ಎಂಬ ಪೋಸ್ಟರ್​ಗಳಿಂದ ಸ್ವಾಗತ ಸಿಗುತ್ತದೆ. 40 ಪರ್ಸೆಂಟ್ ಸರ್ಕಾರದ ಹಗರಣವು ಇಡೀ ರಾಜ್ಯದ ಜನರಿಗೆ ಮನವರಿಕೆ ಇದೆ. ನೀವೂ ಹಾಗೂ ನಿಮ್ಮ ಸರ್ಕಾರ ನಡೆಸುತ್ತಿರುವ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಯ ಸಾಬೂನಿನ ಸುವಾಸನೆಯಲ್ಲೂ ಭ್ರಷ್ಷಾಚಾರದ ಸುಗಂಧ ಪಸರಿಸುತ್ತದೆ. 20 ರೂಪಾಯಿ ಸಾಬೂನಿನಲ್ಲೇ ಇಷ್ಟೊಂದು ಭ್ರಷ್ಟಾಚಾರ ನಡೆಸುತ್ತಿರುವ ನಿಮ್ಮ ಸರ್ಕಾರವು ಇಡೀ ರಾಜ್ಯದಲ್ಲಿ ಎಷ್ಟು ಭ್ರಷ್ಷಾಚಾರ ನಡೆಸಿರಬಹುದು ಎಂದು ಪ್ರಶ್ನಿಸಿದರು.

ಕಾಂಗ್ರೆಸ್​ ಪ್ರತಿಭಟನೆ

ಸಿದ್ದರಾಮಯ್ಯ ಆಕ್ರೋಶ:ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಅಂದ್ರೆ ಭ್ರಷ್ಟ ಜನತಾ ಪಾರ್ಟಿ ಅಂತ ಕರೆಯಬೇಕಾಗುತ್ತದೆ. ಇಷ್ಟೊಂದು ಭ್ರಷ್ಟಾಚಾರ ಮಾಡಿದ ಪಕ್ಷ ಬಂದಿಲ್ಲ. 1983 ರಿಂದಲೂ ನಾನು ಕೆಲಸ ಮಾಡಿದ್ದೇನೆ. ಭ್ರಷ್ಟ, ಸುಳ್ಳು ಹೇಳುವ ಸರ್ಕಾರ ನೋಡಿರಲಿಲ್ಲ ಎಂದರು. ಬಿಜೆಪಿಯು ಸುಳ್ಳಿನ ಪ್ಯಾಕ್ಟರಿ ಆಗಿದೆ. ಪ್ರಧಾನಿ ಮೋದಿ, ನಡ್ಡಾ, ಅಮಿತ್ ಶಾ ಸುಳ್ಳು ಹೇಳ್ತಾರೆ, ಬಸವರಾಜ ಬೊಮ್ಮಯಿ ಇವರನ್ನ ಮೀರಿಸುವ ರೀತಿ ಸುಳ್ಳು ಹೇಳ್ತಾರೆ. ನಾವು ಭ್ರಷ್ಟಾಚಾರ ಆರೋಪ ಮಾಡಿದ್ರೆ ದಾಖಲಾತಿ ಕೊಡಿ ಎಂದು ಕೇಳಿದ್ದರು. ಹಿಂದಿನ ಸರ್ಕಾರ ಭ್ರಷ್ಟಾಚಾರ ಹೆಚ್ಚು ಮಾಡಿದೆ ಎಂದು ಡಿಫೆನ್ಸ್ ತೆಗೆದುಕೊಳ್ಳುವುದನ್ನು ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಎಡಿಜಿಪಿಯೇ ಜೈಲಿಗೆ ಹೋಗಿದ್ದಾರೆ. ಇದಕ್ಕೂ ಸಾಕ್ಷಿ ಬೇಕು ಅಂತ ಕೇಳಿದರೆ ಅದು ನಗೆಪಾಟಿಲು ಆಗುತ್ತದೆ. ನಾವು ಅಧಿಕಾರಕ್ಕೆ ಬಂದರೆ ಆರು ತಿಂಗಳ ಹಿಂದೆ ಕೊಟ್ಟ ಎಲ್ಲ ಟೆಂಡರ್ ರದ್ದು ಮಾಡುತ್ತೇವೆ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದರು.

ಪ್ರತಿಭಟನಾನಿರತ ಕಾಂಗ್ರೆಸ್​ ನಾಯಕರು ಪೊಲೀಸ್​ ವಶಕ್ಕೆ

ಪೋಸ್ಟರ್​ ಅಂಟಿಸಿದ ರಾಮಲಿಂಗಾರೆಡ್ಡಿ:ಇದೇ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ವಿರುದ್ಧ ಪೋಸ್ಟರ್ ಅಂಟಿಸಿದರು. ಬಿಜೆಪಿಯ ರೋಲ್ ಕಾಲ್ "ಮಾಡೆಲ್" ವಿರೂಪಾಕ್ಷಪ್ಪ ಎಂಬ ಪೋಸ್ಟರ್ ಅಂಟಿಸಿದರು. ನಿತ್ಯ ಲೂಟಿ ಮಾಡುವುದೇ ಬಿಜೆಪಿಯ ಸಂಕಲ್ಪ, ಲಂಚ ಪಡೆಯಲು ಬಿಜೆಪಿಯೇ ಭರವಸೆ ಎಂಬ ಪೋಸ್ಟರ್ ಅಂಟಿಸಲಾಯಿತು. ಇದೇ ವೇಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧಿಸಿ ಎಂದು ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದರು. ಕೋಟಿ ಕೋಟಿ ಬಿಜೆಪಿ ಲೂಟಿ ಎಂದು ಘೋಷಣೆ ಕೂಗಿದರು.

Last Updated : Mar 4, 2023, 1:25 PM IST

ABOUT THE AUTHOR

...view details