ಬೆಂಗಳೂರು:ಸಚಿವೆ ಶಶಿಕಲಾ ಜೊಲ್ಲೆ ರಾಜೀನಾಮೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಹೆಸರು ಪಾಟೀಲ್ ಸೇರಿದಂತೆ ಹಲವು ನಾಯಕರು ಆಗ್ರಹಿಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಕೇಳಿ ಬಂದಿರುವ ಮೊಟ್ಟೆ ಹಗರಣ ಆರೋಪ ಗಂಭೀರವಾಗಿದೆ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷ ತನ್ನ ಟ್ವೀಟ್ನಲ್ಲಿ, ಕೊರೊನಾ 3ನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಎಂದು ತಜ್ಞರು ಹಲವು ಬಾರಿ ಎಚ್ಚರಿಸಿದ್ದರೂ ಬಿಜೆಪಿ ಸರ್ಕಾರ ರಾಜ್ಯದ ಮಕ್ಕಳಿಗೆ ಪೌಷ್ಟಿಕಾಂಶ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯಾವುದೇ ಕಾರ್ಯಕ್ರಮ ರೂಪಿಸಲಿಲ್ಲ. ಮಕ್ಕಳನ್ನು ಸದೃಢಗೊಳಿಸಿಬೇಕಾದ ಸರ್ಕಾರ ಅವರ ತಟ್ಟೆಗೆ ಬಾಯಿ ಹಾಕಿ ಮೊಟ್ಟೆಗಳನ್ನು ನುಂಗಿದೆ. ಮೊಟ್ಟೆ ಕಳ್ಳ ಬಿಜೆಪಿ ಎಂದು ದೂರಿದೆ.
ರಣದೀಪ್ ಸುರ್ಜೆವಾಲಾ ಆರೋಪ:
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಟ್ವೀಟ್ ಮಾಡಿದ್ದು, ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರ ಲಂಚ ಪ್ರಕರಣ ಕರ್ನಾಟಕ ಬಿಜೆಪಿ ಸರ್ಕಾರದಲ್ಲಿ ಚಾಲ್ತಿಯಲ್ಲಿರುವ ಭ್ರಷ್ಟಾಚಾರದ ಪ್ರಮಾಣವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಮಕ್ಕಳಲ್ಲಿ ಪೌಷ್ಠಿಕಾಂಶವನ್ನು ಹೆಚ್ಚಿಸುವ ಹಾಗೂ ಅಪೌಷ್ಟಿಕತೆಯ ವಿರುದ್ಧ ಹೋರಾಡುವ ಬದಲು ಅದಕ್ಕಾಗಿ ಮೀಸಲಿರುವ ಹಣವನ್ನೆ ಲೂಟಿ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಲೋಕಾಯುಕ್ತರು ತನಿಖೆಗೆ ಸಿದ್ದ ಆಗ್ರಹ:
ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದು, ಲಂಚದ ಹಣಕ್ಕೆ ರಾಜ್ಯ ಬಿಜೆಪಿ ನಾಯಕರು ಜೊಲ್ಲು ಸುರಿಸುತ್ತಿರುವವರು ಎಂದು ಲೋಕಕ್ಕೆ ಗೊತ್ತಿದೆ. 'ಮಾತೃಪೂರ್ಣ' ಯೋಜನೆಯಡಿ ಗರ್ಭಿಣಿಯರು ಮತ್ತು ಮಕ್ಕಳಿಗೆ ನೀಡುವ ಮೊಟ್ಟೆಗಳ ಖರೀದಿಯಲ್ಲಿ ಲಂಚ ಪಡೆದಿರುವ ಹಗರಣದಲ್ಲಿ ಭಾಗಿಯಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಕ್ಷಣ ರಾಜೀನಾಮೆ ನೀಡಬೇಕು. ಈ ಬಗ್ಗೆ ಲೋಕಾಯುಕ್ತರು ತನಿಖೆ ನಡೆಸಬೇಕು. ಒಂದೆಡೆ ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಹಣ ನೀಡದೆ ಸ್ಥಗಿತಗೊಳಿಸುವ ಹುನ್ನಾರ ನಡೆಸುತ್ತಿರುವ ಬಿಜೆಪಿ ಸರ್ಕಾರ, ಇನ್ನೊಂದೆಡೆ ಅದೆ ಕಾರ್ಯಕ್ರಮಗಳನ್ನು ತಮ್ಮ ಜೇಬು ತುಂಬಿಕೊಳ್ಳಲು ದುರ್ಬಳಕೆ ಮಾಡುತ್ತಿದೆ ಎಂದಿದ್ದಾರೆ.
ಸಚಿವೆಯನ್ನು ಬಂಧಿಸಬೇಕು:
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್. ಆರ್ .ಪಾಟೀಲ್ ಟ್ವೀಟ್ ಮಾಡಿದ್ದು, ಲಂಚ ತೆಗೆದುಕೊಂಡು ಸಿಕ್ಕಿಬಿದ್ದಿದ್ದರಿಂದ ಶಶಿಕಲಾ ಜೊಲ್ಲೆ ಅವರ ರಾಜೀನಾಮೆಗೆ ನಾನು ಒತ್ತಾಯಿಸುತ್ತೇನೆ. ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನು ತಕ್ಷಣ ಬಂಧಿಸಬೇಕು. ಮಕ್ಕಳು ಮತ್ತು ಗರ್ಭಿಣಿ ತಾಯಂದಿರಿಗೆ ಮೊಟ್ಟೆ ನೀಡಲು ಸಚಿವರು ಲಂಚ ಪಡೆದಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.