ಬೆಂಗಳೂರು: ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದು ಬೆಂಗಳೂರಿನ ವಿಜಯನಗರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ರೋಡ್ ಶೋ ನಡೆಸಿ ಪ್ರಚಾರ ಮಾಡಿದರು. ವಿಜಯನಗರದ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಂ ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಪರವಾಗಿ ಪ್ರಚಾರ ನಡೆಸಿದ ಪ್ರಿಯಾಂಕಾ, "ಜನ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಬೇಕು. ಭ್ರಷ್ಟಾಚಾರದಿಂದ ಮುಳುಗಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು" ಎಂದು ಮನವಿ ಮಾಡಿದರು.
"ಬಿಜೆಪಿಯವರು ಒಂದು ದಿನವೂ ಜನರ ಸಮಸ್ಯೆ ಬಗ್ಗೆ ಮಾತನಾಡಲಿಲ್ಲ. ಬೆಲೆ ಏರಿಕೆ ಬಗ್ಗೆ ಮಾತನಾಡಲಿಲ್ಲ. ಬೇರೆಯವರಿಗೆ ಅಪಮಾನ ಮಾಡುವ ನಿಟ್ಟಿನಲ್ಲಿ ಮಾತನಾಡುತ್ತಾರೆ. ಮೋದಿ ಕೇವಲ ಭಾವನೆ ಕೆರಳಿಸುವ ಕೆಲಸ ಮಾಡ್ತಾರೆ. ನಾವು ಮಹಿಳೆಯರಿಗೆ ಬಸ್ ಪಾಸ್ ಉಚಿತ ಮಾಡಿದ್ದೇವೆ. ಮಹಿಳೆಯರಿಗೆ ಎರಡು ಸಾವಿರ ಭತ್ಯೆ ಕೊಡುತ್ತೇವೆ. ಯುವ ನಿಧಿ ಘೋಷಣೆ ಮಾಡಿದ್ದೇವೆ. ಅನ್ನಭಾಗ್ಯ ಹತ್ತು ಕೆಜಿ ಉಚಿತ ಅಕ್ಕಿ ನೀಡುತ್ತೇವೆ. ಬೆಂಗಳೂರು ಟೆಕ್ ಹಬ್, ಇದರ ಗತವೈಭವ ಮತ್ತೆ ಎತ್ತಿ ಹಿಡಿಯುತ್ತೇವೆ" ಎಂದು ಹೇಳಿದರು.
"ಬೆಂಗಳೂರು ಎಲೆಕ್ಟ್ರಿಕ್ ಹಬ್ ಮಾಡುತ್ತೇವೆ. ಯುವಕರಿಗೆ ಆದ್ಯತೆ ನೀಡುತ್ತೇವೆ. ಸ್ಟಾರ್ಟಪ್ ಮಾಡಲು ಪ್ರತಿ ಕ್ಷೇತ್ರಕ್ಕೆ ಹತ್ತು ಕೋಟಿ ನೀಡುತ್ತೇವೆ. ಈಗಾಗಲೇ ನಾವು ಯಾವ ರೀತಿಯ ಕೆಲಸ ಮಾಡಬೇಕು, ಅದರ ಬಗ್ಗೆ ಸ್ಪಷ್ಟವಾಗಿ ಚಿಂತನೆ ಮಾಡಿದ್ದೇವೆ. ಅದೇ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತೆ" ಎಂಬ ಭರವಸೆ ನೀಡಿದರು.
"ಯಾವಾಗ ಬೆಲೆ ಏರಿಕೆಯಾಗುತ್ತೆ ಆಗ ಜನರಿಗೆ ಹೊರೆಯಾಗದಂತೆ ಸರ್ಕಾರ ನಿಭಾಯಿಸಬೇಕು. ನಿರುದ್ಯೋಗ ಸರ್ಕಾರಿ ಹುದ್ದೆ ಖಾಲಿ ಇದ್ದರೆ ಅದನ್ನ ಭರಿಸೋದು ಸರ್ಕಾರದ ಕರ್ತವ್ಯ. ಒಂದು ಸರ್ಕಾರ ತಾಂತ್ರಿಕವಾಗಿ ಮತ್ತೊಂದು ಸರ್ಕಾರ ಮತ್ತೊಂದು ರೀತಿ ಕೆಲಸ ಮಾಡಿರುತ್ತದೆ. ಈಗಾಗಲೇ ಮೂರುವರೆ ವರ್ಷ ಇದ್ದ ಸರ್ಕಾರ ಎಲ್ಲರನ್ನು ಖರೀದಿ ಮಾಡಿದ ಸರ್ಕಾರ ಶೇ 40ರಷ್ಟು ಕಮಿಷನ್ ಸರ್ಕಾರ ಎಂದು ಗುರುತಿಸಿಕೊಂಡಿದೆ" ಎಂದು ಬಿಜೆಪಿ ಪರ ವಾಗ್ದಾಳಿ ನಡೆಸಿದರು.