ಕರ್ನಾಟಕ

karnataka

ETV Bharat / state

ವಿಧಾನಸಭಾ ಚುನಾವಣೆಗೆ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ ಕಾಂಗ್ರೆಸ್​​: ಭರ್ಜರಿ ಸ್ಪಂದನೆ

ವಿಧಾನಸಭಾ ಚುನಾವಣೆಗೆ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ ಕಾಂಗ್ರೆಸ್. ನಿನ್ನೆ(ಸೋಮವಾರ) ಸಂಜೆಯವರೆಗೆ ಒಟ್ಟು 1,056 ಅರ್ಜಿಗಳು ಸಲ್ಲಿಕೆ. ಅರ್ಜಿ ಸಂಖ್ಯೆ ಸಾವಿರ ಮೀರಿರುವ ಹಿನ್ನೆಲೆ ಕೈ ನಾಯಕರಲ್ಲಿ ಉತ್ಸಾಹ.

Congress has invited applications for aspirants
ವಿಧಾನಸಭಾ ಚುನಾವಣೆಗೆ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ ಕಾಂಗ್ರೆಸ್

By

Published : Nov 15, 2022, 1:07 PM IST

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತ್ತು. ಕೊಂಚ ದುಬಾರಿ ಶುಲ್ಕ ವಿಧಿಸಿದ್ದರೂ, ಕೈ ಪಾಳಯದಲ್ಲಿ ಆಕಾಂಕ್ಷಿಗಳ ಉತ್ಸಾಹ ಕುಗ್ಗಿಲ್ಲ. ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

ನ.5 ರಿಂದ 15ರವರೆಗೆ ಅರ್ಜಿ ನಮೂನೆ ಪಡೆದು ಸಲ್ಲಿಕೆ ಮಾಡಲು ಕಾಂಗ್ರೆಸ್ ಕಾಲಾವಕಾಶ ನೀಡಿತ್ತು. ಕಾಂಗ್ರೆಸ್ ಟಿಕೆಟ್​ಗೆ ಅರ್ಜಿ ಸಲ್ಲಿಸಲು ಇಂದು ಕೊನೆ ದಿನವಾಗಿದ್ದು, ಭರ್ಜರಿ ಸ್ಪಂದನೆ ಸಿಕ್ಕಿದೆ. ಕಡೆಯ ದಿನ ಆದ ಹಿನ್ನೆಲೆ ಟಿಕೆಟ್​​ಗಾಗಿ ಅರ್ಜಿ ಸಲ್ಲಿಸಲು ಇಂದು ಕೂಡ ಆಕಾಂಕ್ಷಿಗಳ ದಂಡು ಆಗಮಿಸುವ ನಿರೀಕ್ಷೆ ಇದೆ.

ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ

ನಾಯಕರಲ್ಲಿ ಉತ್ಸಾಹ: ನಿನ್ನೆ(ಸೋಮವಾರ) ಸಂಜೆಯವರೆಗೆ ಒಟ್ಟು 1056 ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ಸಂಖ್ಯೆ ಸಾವಿರ ಮೀರಿರುವ ಹಿನ್ನೆಲೆ ಕೈ ನಾಯಕರಲ್ಲಿ ಉತ್ಸಾಹ ಮೂಡಿದೆ.

ನಗದು ಪಾವತಿಸುವ ಷರತ್ತು: ಅರ್ಜಿ ಸಲ್ಲಿಕೆಗೆ ನಗದು ಪಾವತಿಸುವ ಷರತ್ತು ವಿಧಿಸಲಾಗಿತ್ತು. ಅರ್ಜಿ ನಮೂನೆಗೆ 5 ಸಾವಿರ ರೂ. ಹಾಗೂ ಸಲ್ಲಿಕೆಗೆ ಸಾಮಾನ್ಯ ವರ್ಗಕ್ಕೆ 2 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ, ಪಂಗಡದವರಿಗೆ 1 ಲಕ್ಷ ರೂ. ಡಿಡಿ ತೆಗೆದು ಅರ್ಜಿಯ ಜತೆ ಸಲ್ಲಿಸಲು ಸೂಚಿಸಲಾಗಿತ್ತು.

ಒಟ್ಟು 1056 ಅರ್ಜಿ ಸಲ್ಲಿಕೆ: ಕಟ್ಟಡ ನಿಧಿ ಹೆಸರಿನಲ್ಲಿ ಹಣ ಸಂಗ್ರಹಿಸಲಾಗಿದೆ. ಬರುವ ಹಣವನ್ನು ಚುನಾವಣಾ ವೆಚ್ಚ ಹಾಗೂ ಪಕ್ಷದ ಕಾರ್ಯ ಚಟುವಟಿಕೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಈವರೆಗೂ ಅರ್ಜಿ ಪಡೆದಿರುವ ಪರಿಶಿಷ್ಟ ಜಾತಿ, ಪಂಗಡದ ಆಕಾಂಕ್ಷಿಗಳು 350 ಮಂದಿಯಾಗಿದ್ದರೆ, ಅರ್ಜಿ ಪಡೆದಿರುವ ಸಾಮಾನ್ಯ ವರ್ಗದ ಆಕಾಂಕ್ಷಿಗಳ ಸಂಖ್ಯೆ 700 ಆಗಿದೆ. ಡಿಡಿ ಜೊತೆಗೆ ಕೆಪಿಸಿಸಿಗೆ ಸಲ್ಲಿಕೆಯಾಗಿರುವ ಅರ್ಜಿಗಳು 450 ಆಗಿವೆ. ಇಂದು ಕಡೆಯ ದಿನವಾಗಿದ್ದು, ಕನಿಷ್ಠ 50ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ.

ವಿಧಾನಸಭಾ ಚುನಾವಣೆಗೆ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ ಕಾಂಗ್ರೆಸ್

ಮರು ಆಯ್ಕೆ ಬಯಸಿ ಡಿಕೆಶಿ ಅರ್ಜಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕನಕಪುರದಿಂದ ಮರು ಆಯ್ಕೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದುವರೆಗೂ ಅರ್ಜಿ ಸಲ್ಲಿಸಿದ್ದರ ಬಗ್ಗೆ ಮಾಹಿತಿ ಇಲ್ಲ. ಸಾಕಷ್ಟು ಟಿಕೆಟ್ ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಜತೆ ಮೆರವಣಿಗೆ ಮೂಲಕ ಆಗಮಿಸಿ ಅರ್ಜಿ ಸಲ್ಲಿಸಿ ತಮ್ಮ ಬಲಪ್ರದರ್ಶನ ಸಹ ನಡೆಸಿರುವುದು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಮುಂಭಾಗ ಕಂಡು ಬಂದಿದೆ.

ವಿಧಾನಸಭಾ ಚುನಾವಣೆಗೆ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ ಕಾಂಗ್ರೆಸ್

ಬಾದರ್ಲಿ ಬಲ ಪ್ರದರ್ಶನ:ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಬಲ ಪ್ರದರ್ಶನದ ಮೂಲಕ ಆಗಮಿಸಿ ಅರ್ಜಿ ಸಲ್ಲಿಸಿದ್ದಾರೆ. ಬೆಂಬಲಿಗರಿಂದ ಜೈಕಾರ ಹಾಕಿಸಿಕೊಂಡು ನಿನ್ನೆ ಕೆಪಿಸಿಸಿ ಕಚೇರಿಗೆ ಆಗಮಿಸಿದ ಅವರು ಸಿಂಧನೂರು ಟಿಕೆಟ್ ನೀಡಬೇಕು ಒತ್ತಾಯಿಸಿದ್ದಾರೆ.

ವಿಧಾನಸಭಾ ಚುನಾವಣೆಗೆ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ ಕಾಂಗ್ರೆಸ್

ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸುವ ಸಾಧ್ಯತೆ:ಕಳೆದ 10 ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಅರ್ಜಿ ಸಲ್ಲಿಕೆಯಾಗಿದ್ದು, ಅನುದಾನ ಸಹ ಹರಿದು ಬಂದಿದೆ. ಆದರೆ ಅರ್ಜಿ ಪಡೆದವರೆಲ್ಲ ಇನ್ನೂ ಸಲ್ಲಿಕೆ ಮಾಡಿಲ್ಲ. ಕೇವಲ 5 ಸಾವಿರ ರೂ. ನೀಡಿ ಅರ್ಜಿ ಪಡೆದಿದ್ದಾರೆ. ಭರ್ತಿ ಮಾಡಿ ಕೊಟ್ಟಿಲ್ಲ. ಹೀಗಾಗಿ ಇವರಿಗೆ ಕಾಲಾವಕಾಶ ನೀಡಲು ಕಾಂಗ್ರೆಸ್ ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ. ಇದರಿಂದ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ಸಾಧ್ಯತೆ ಇದೆ. ಈ ಬಗ್ಗೆ ಇಂದು ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ.

ವಿಧಾನಸಭಾ ಚುನಾವಣೆಗೆ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ ಕಾಂಗ್ರೆಸ್

ಕುಟುಂಬ ರಾಜಕಾರಣ ಮುಂದುವರಿಯುವ ಮುನ್ಸೂಚನೆ:ವಿಧಾನಸಭಾ ಚುನಾವಣೆಗೆ ಆಕಾಂಕ್ಷಿಗಳು ಎಷ್ಟಿರಬಹುದು ಎಂದು ತಿಳಿಯಲು ಹಾಗೂ ಮುಂಬರುವ ಚುನಾವಣೆಗೆ ಸಿದ್ಧತೆ ಕೈಗೊಳ್ಳುವ ಸಲುವಾಗಿ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಲು ಮುಂದಾದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಕುಟುಂಬ ರಾಜಕಾರಣ ಮುಂದುವರಿಯುವ ಮುನ್ಸೂಚನೆ ಸ್ಪಷ್ಟವಾಗಿ ಗೋಚರಿಸಿದೆ.

ಭಿನ್ನಮತ ಸ್ಫೋಟಗೊಳ್ಳುವ ನಿರೀಕ್ಷೆ:ಟಿಕೆಟ್ ಆಕಾಂಕ್ಷಿಗಳ ಒತ್ತಡ, ನಿರೀಕ್ಷೆ, ಆಸೆ ಎಷ್ಟಿದೆ ಎಂದು ತಿಳಿಯಲು ರಾಷ್ಟ್ರೀಯ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸುವ ನಿರ್ಧಾರ ಕೈಗೊಂಡರು. ಅದೇ ರೀತಿ ನ.5 ರಿಂದ 15 ರವರೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ನಮೂನೆಯನ್ನು 5 ಸಾವಿರ ರೂ. ನೀಡಿ ಪಡೆಯಬಹುದು ಹಾಗೂ ಭರ್ತಿ ಮಾಡಿದ ಅರ್ಜಿಯನ್ನು ಸಾಮಾನ್ಯ ವರ್ಗದವರು 2 ಲಕ್ಷ ರೂ. ಮೊತ್ತದ ಡಿಡಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 1 ಲಕ್ಷ ರೂ. ಮೊತ್ತದ ಡಿಡಿಯನ್ನು ಕಾಂಗ್ರೆಸ್ ಕಟ್ಟಡ ಪರಿಹಾರ ನಿಧಿ ಹೆಸರಿನ ಸಮೇತ ಸಲ್ಲಿಸುವಂತೆ ಸೂಚಿಸಿದ್ದರು. ಇದಕ್ಕೆ ಪಕ್ಷದ ನಾಯಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿದೆ. ಆದರೆ ಇದರ ಜತೆ ಜತೆಗೆ ಕುಟುಂಬ ರಾಜಕಾರಣ ಮುಂದುವರಿಯುವ ಹಾಗೂ ಚುನಾವಣೆ ಸಂದರ್ಭ ಸಾಕಷ್ಟು ಭಿನ್ನಮತ ಸ್ಫೋಟಗೊಳ್ಳುವ ನಿರೀಕ್ಷೆ ಸಹ ಗೋಚರಿಸಿದೆ.

ಎದುರಾಯ್ತು ಸವಾಲುಗಳ ಸರಮಾಲೆ:ಹಲವು ನಾಯಕರು, ಮಾಜಿ ಸಚಿವರು, ಶಾಸಕರು ತಮಗೆ ಮಾತ್ರವಲ್ಲದೆ ತಮ್ಮ ಮಕ್ಕಳಿಗೂ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕೆಲ ತಿಂಗಳ ಹಿಂದೆ ವಿಧಾನ ಪರಿಷತ್​ಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಸಾಕಷ್ಟು ಕಾಂಗ್ರೆಸ್ ನಾಯಕರು ತಮ್ಮ ಕುಟುಂಬ ಸದಸ್ಯರಿಗೆ, ಸೋದರರಿಗೆ, ಸಂಬಂಧಿಗಳಿಗೆ ಟಿಕೆಟ್ ಕೊಡಿಸಿದ್ದರು. ಹೆಚ್ಚಿನವರು ಗೆಲುವು ಸಾಧಿಸಿದ್ದಾರೆ ಕೂಡ. ಇದೇ ಮಾದರಿಯಲ್ಲಿ ವಿಧಾನಸಭೆಗೂ ಕೆಲ ನಾಯಕರು ತಮ್ಮವರಿಗೆ ಟಿಕೆಟ್ ನಿರೀಕ್ಷಿಸುತ್ತಿದ್ದಾರೆ. ಇವರಿಗೆ ಪಕ್ಷ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಆಯ್ಕೆ ವಿಚಾರದಲ್ಲಿ ಕಗ್ಗಂಟು: ಒಂದೆಡೆ ರಾಜಕಾರಣಿಗಳು ತಮ್ಮ ಮಕ್ಕಳು, ಸಂಬಂಧಿಗಳಿಗೆ ಟಿಕೆಟ್ ಕೇಳಿದ್ದರೆ, ಇನ್ನೊಂದೆಡೆ ಒಂದೇ ಕ್ಷೇತ್ರಕ್ಕೆ ಹಲವರು ಅರ್ಜಿ ಸಲ್ಲಿಸಿದ್ದಾರೆ. ಇದು ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದೊಳಗೆ ಕಗ್ಗಂಟು ಸೃಷ್ಟಿಯಾಗುವ ಮುನ್ಸೂಚನೆ ನೀಡಿದೆ.

ಕ್ಷೇತ್ರ ಬದಲಿಸಲು ನಿರ್ಧರಿಸಿರುವ ಮಹದೇವಪ್ಪ:ಎಐಸಿಸಿ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆ ಇತ್ತೀಚೆಗೆ ಮೈಸೂರಿನಲ್ಲಿ ಸಾಗಿ ಹೋದ ಸಂದರ್ಭ ಜನರನ್ನು ಸೇರಿಸುವಲ್ಲಿ ವಿಫಲವಾಗಿ ಹೈಕಮಾಂಡ್ ಹಾಗೂ ರಾಷ್ಟ್ರೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಕ್ಷೇತ್ರ ಬದಲಿಸಲು ನಿರ್ಧರಿಸಿದ್ದಾರೆ.

ತಾವು ಈ ಹಿಂದೆ ಪ್ರತಿನಿಧಿಸಿದ್ದ ಟಿ. ನರಸೀಪುರದಿಂದ ಪುತ್ರ ಸುನೀಲ್ ಬೋಸ್​ಗೆ ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ತಮಗೆ ನಂಜನಗೂಡು ಮೀಸಲು ಕ್ಷೇತ್ರದಿಂದ ಟಿಕೆಟ್​​ ನೀಡುವಂತೆ ಕೋರಿದ್ದಾರೆ. ಚಾಮರಾಜನಗರದಿಂದ 2ನೇ ಬಾರಿ ಆಯ್ಕೆಗೆ ಬಯಸಿ ಲೋಕಸಭೆಗೆ ಸ್ಪರ್ಧಿಸಿ ಸೋತಿರುವ ಹಾಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಸಹ ನಂಜನಗೂಡು ಕ್ಷೇತ್ರದಿಂದ ಅಭ್ಯರ್ಥಿಯಾಗಲು ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿ ಇವರಿಬ್ಬರಿಗೆ ಸಾಕಷ್ಟು ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ.

ಬಾದಾಮಿಯಿಂದ ಭರ್ಜರಿ ಬೇಡಿಕೆ:ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶಾಸಕರಾಗಿರುವ ಬಾದಾಮಿ ಕ್ಷೇತ್ರದಿಂದ ಸಾಕಷ್ಟು ಅರ್ಜಿ ಸಲ್ಲಿಕೆಯಾಗಿದೆ. ಸಿದ್ದರಾಮಯ್ಯ ತಾವು ಈ ಬಾರಿ ಬಾದಾಮಿಯಿಂದ ಕಣಕ್ಕಿಳಿಯುವುದಿಲ್ಲ ಎಂದಿದ್ದಾರೆ. ಹಿಂದೆ ಇವರಿಗಾಗಿ ಸ್ಥಾನ ಬಿಟ್ಟುಕೊಟ್ಟಿದ್ದ ಮಾಜಿ ಸಚಿವ ಬಿ.ಬಿ ಚಿಮ್ಮನಕಟ್ಟಿ ಈ ಸಾರಿ ಕೈ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ್ದಾರೆ.

ಅಲ್ಲದೇ, ತಮ್ಮ ಪುತ್ರ ಭೀಮಸೇನ್ ಅವರಿಂದಲೂ ಅರ್ಜಿ ಹಾಕಿಸಿದ್ದಾರೆ. ಇವರ ಜತೆ ಬಾದಾಮಿಯಿಂದ ಟಿಕೆಟ್ ಬಯಸಿ ಕಾಂಗ್ರೆಸ್ ಪಕ್ಷದ ನಾಲ್ವರು ನಾಯಕರು ಅರ್ಜಿ ನಮೂನೆ ಪಡೆದಿದ್ದಾರೆ. ಮಾಜಿ ಸಚಿವರಾದ ಶಿವಾನಂದ ಪಾಟೀಲ್, ವಿಜಯಪುರದಿಂದ ಸ್ಪರ್ಧಿಸುವ ಉತ್ಸಾಹ ವ್ಯಕ್ತಪಡಿಸಿದ್ದಾರೆ. ತಮ್ಮ ಹಾಲಿ ಕ್ಷೇತ್ರವಾದ ಬಸವನ ಬಾಗೇವಾಡಿಯಿಂದ ಪುತ್ರಿ ಸಂಯುಕ್ತ ಪಾಟೀಲ್​ಗೆ ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಸಂಯುಕ್ತ ಸದ್ಯ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯವಾಗಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರ ಕಟ್ಟಾ ಬೆಂಬಲಿಗ ಡಾ. ಮೂರ್ತಿ ಎಂಬುವರು ಮಳವಳ್ಳಿ ಮೀಸಲು ಕ್ಷೇತ್ರದಿಂದ ಅರ್ಜಿ ಹಾಕಿದ್ದು, ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಪಿ. ಎಂ. ನರೇಂದ್ರ ಸ್ವಾಮಿಗೆ ದೊಡ್ಡ ಆಘಾತ ನೀಡಿದೆ. ಇವರು ಸಹ ತಮ್ಮ ಸ್ಪರ್ಧೆಗೆ ನಿರ್ಧರಿಸಿ ಅರ್ಜಿ ಪಡೆದಿದ್ದು, ಭರ್ತಿ ಮಾಡಿ ಹಿಂದಿರುಗಿಸಿಲ್ಲ. ಮಂಚನಹಳ್ಳಿ ಮಹದೇವ್ ಪುತ್ರಿ ಐಶ್ವರ್ಯಾ ಮಹದೇವ್ ಅವರು ಕೆ.ಆರ್ ನಗರ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

ಕನಕಪುರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅರ್ಜಿ ಸಲ್ಲಿಕೆ ಮಾಡಿದ್ದು, ಇವರಿಗೆ ಯಾವುದೇ ಪ್ರತಿಸ್ಪರ್ಧಿ ಇಲ್ಲ. ಕ್ಷೇತ್ರ ಆಯ್ಕೆ ಗೊಂದಲದಲ್ಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈವರೆಗೆ ಯಾವುದೇ ಕ್ಷೇತ್ರದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:'ಕೈ' ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ ಶುರು; ಬಂಡಾಯ ಸ್ಪರ್ಧೆಗಿಲ್ಲ ಅವಕಾಶ

ABOUT THE AUTHOR

...view details