ಬೆಂಗಳೂರು :ರಾಜ್ಯದ ವಿವಿಧ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಮಣಿಸಿರುವ ಪ್ರತಿಪಕ್ಷ ಕಾಂಗ್ರೆಸ್ ಮರಳಿ ರಾಜ್ಯದ ಅಧಿಕಾರದ ಗದ್ದುಗೆ ಹಿಡಿಯುವ ಕನಸನ್ನು ಬಲಗೊಳಿಸಿಕೊಂಡಿದೆ.
ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ನ ಸಾವಿರಕ್ಕೂ ಹೆಚ್ಚು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 500ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ 400 ರ ಗಡಿ ದಾಟಿದೆ. ಅದೇ ರೀತಿ ಪಕ್ಷೇತರರು ಮೂರನೇ ಶಕ್ತಿಯಾಗಿ ಹೊರಹೊಮ್ಮಿದ್ದು, ಜಾತ್ಯಾತೀತ ಜನತಾದಳ ಎರಡಂಕಿಯನ್ನು ದಾಟಲಾಗದೆ ನಾಲ್ಕನೇ ಸ್ಥಾನಕ್ಕೆ ಕುಸಿದು ನಿರಾಶೆ ಅನುಭವಿಸಿದೆ.
ಆಪರೇಷನ್ ಕಮಲಕ್ಕೆ ಬಿಜೆಪಿ ಸಿದ್ಧತೆ:
ಪರಿಸ್ಥಿತಿ ತನ್ನ ಕೈ ಮೀರುತ್ತಿರುವುದನ್ನು ಅರಿತ ಬಿಜೆಪಿ ಇದೀಗ ಮತ್ತೊಮ್ಮೆ ಆಪರೇಷನ್ ಕಮಲ ಕಾರ್ಯಾಚರಣೆಗೆ ಸಜ್ಜಾಗಿದ್ದು, ಮೂರನೇ ಶಕ್ತಿಯಾಗಿ ಹೊರ ಹೊಮ್ಮಿರುವ ಪಕ್ಷೇತರರಿಗೆ ಗಾಳ ಹಾಕಿದೆ. ಅವರ ಬೆಂಬಲದೊಂದಿಗೆ ಬಹುತೇಕ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ಗಳ ಅಧಿಕಾರ ಸೂತ್ರ ವಶಪಡಿಸಿಕೊಳ್ಳಲು ವಿದ್ಯುಕ್ತ ಪ್ರಯತ್ನ ಆರಂಭಿಸಿದೆ ಎನ್ನಲಾಗ್ತಿದೆ. ಅದೇನೆ ಇದ್ದರೂ 5 ನಗರಸಭೆ, 19 ಪುರಸಭೆ, 38 ಪಟ್ಟಣ ಪಂಚಾಯತ್ಗಳ ಚುನಾವಣೆಯಲ್ಲಿ ತನಗೆ ಸಿಕ್ಕ ಗೆಲುವಿನಿಂದ ಕಾಂಗ್ರೆಸ್ ಪಕ್ಷ ಮರಳಿ ರಾಜ್ಯದ ಅಧಿಕಾರ ಹಿಡಿಯುವ ಕನಸಿಗೆ ಹತ್ತಿರವಾದಂತಾಗಿದೆ.
ಕುಸಿದ ಜನರ ವಿಶ್ವಾಸ:
ಈ ಹಿಂದೆ ರಾಜ್ಯದ ಎರಡು ವಿಧಾನಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ, ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ನಡಿಗೆಗೆ ಬ್ರೇಕ್ ಹಾಕಿದ್ದ ಕಾಂಗ್ರೆಸ್, ಇದೀಗ ಹ್ಯಾಟ್ರಿಕ್ ಸಾಧನೆ ಮಾಡಿದೆ. ಈ ಬಾರಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ಬಸವರಾಜ ಬೊಮ್ಮಾಯಿಯವರು ಗದ್ದುಗೆ ಮೇಲೇರುವ ಅವಕಾಶ ಪಡೆದರಾದರೂ ಅವರ ಆಡಳಿತದ ಮೇಲೆ ಜನ ವಿಶ್ವಾಸ ತೋರಿಸಿಲ್ಲ ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿದೆ.