ಕರ್ನಾಟಕ

karnataka

ETV Bharat / state

ಬಿಎಸ್‌ವೈ ಉತ್ತರಾಧಿಕಾರಿಯ 'ವಿಜಯ'ದ ಓಟಕ್ಕೆ ಸಿದ್ದು-ಡಿಕೆಶಿ ಜುಗಲ್‌ಬಂದಿಯೇ ಬ್ರೇಕ್‌!? - ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಒಂದೆಡೆ ಶಿರಾ ಇನ್ನೊಂದೆಡೆ ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರ ಉಪಚುನಾವಣೆ ಜವಾಬ್ದಾರಿ ಹಂಚಿಕೊಂಡಿದ್ದ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಇದೀಗ ಈ ಎರಡು ಉಪಚುನಾವಣೆ ಸಂದರ್ಭ ಒಂದಾಗಿ ಹೋರಾಡಲು, ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದ್ದಾರೆ..

congress-by-election-plan-story-news
ವಿಜಯೇಂದ್ರ ಓಟಕ್ಕೆ ಬ್ರೇಕ್ ಹಾಕ್ತಾರಾ ಸಿದ್ದು-ಡಿಕೆಶಿ

By

Published : Nov 15, 2020, 5:29 PM IST

ಬೆಂಗಳೂರು :ಮಂಡ್ಯದ ಕೆಆರ್ ಪೇಟೆ, ತುಮಕೂರಿನ ಶಿರಾ ಉಪಚುನಾವಣೆ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿ, ಬಿಜೆಪಿಯ ಗೆಲುವಿನ ಓಟಗಾರ ಎನಿಸಿರುವ ಬಿ ವೈ ವಿಜಯೇಂದ್ರರನ್ನು ಮುಂಬರುವ ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ವೇಳೆ ಮಣ್ಣುಮುಕ್ಕಿಸಬೇಕೆಂದು ಕಾಂಗ್ರೆಸ್ ಯೋಜನೆ ರೂಪಿಸುತ್ತಿದೆ.

ವಿಜಯೇಂದ್ರ ಓಟಕ್ಕೆ ಬ್ರೇಕ್ ಹಾಕ್ತಾರಾ ಸಿದ್ದು-ಡಿಕೆಶಿ

ತಾವು ಕಳೆದುಕೊಂಡ ಕ್ಷೇತ್ರವನ್ನು ಬಿಜೆಪಿ ಬಾಚಿಕೊಳ್ಳುತ್ತಿರುವ ಸಂದರ್ಭದಲ್ಲಿ ಗೆಲುವಿಗೆ ವಿಜಯೇಂದ್ರ ಕೊಡುಗೆ ಹೆಚ್ಚಿದೆ ಎಂಬುದನ್ನು ಅರಿತಿದ್ದಾರೆ ಕಾಂಗ್ರೆಸ್ ನಾಯಕರು. ಬಿ ಎಸ್ ಯಡಿಯೂರಪ್ಪ ನಂತರ ಬಿಜೆಪಿಯಲ್ಲಿ ಮತ್ತೊಬ್ಬ ಪ್ರಬಲ ಲಿಂಗಾಯಿತ ಸಮುದಾಯದ ನಾಯಕರಾಗಿ ಗುರುತಿಸಿಕೊಳ್ಳಲು ಮುಂದಾಗಿರುವ ವಿಜಯೇಂದ್ರರನ್ನು ಈಗಲೇ ಕಟ್ಟಿಹಾಕಬೇಕು. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್​​ಗೆ ಇವರು ಇನ್ನಷ್ಟು ಕಂಟಕಪ್ರಾಯರಾಗಲಿದ್ದಾರೆ ಎನ್ನುವ ಲೆಕ್ಕಾಚಾರ ಹಾಕಿದ್ದಾರೆ ಕೈ ನಾಯಕರು.

ಮುಂಬರುವ ಎರಡು ಉಪಚುನಾವಣೆ ಗೆಲ್ಲಿಸಿಕೊಳ್ಳಲು ಈಗಲೇ ಕ್ಷೇತ್ರಗಳತ್ತ ಪ್ರಯಾಣ ಬೆಳೆಸಿರುವ ವಿಜಯೇಂದ್ರರನ್ನು ಕಟ್ಟಿಹಾಕಬೇಕು. ಆ ಕ್ಷೇತ್ರವನ್ನು ಕಾಂಗ್ರೆಸ್ ಮರಳಿ ಗೆಲ್ಲುವ ಮೂಲಕ ಒಂದೇ ಹೊಡೆತದಲ್ಲಿ ಎರಡು ಹಕ್ಕಿ ಹೊಡೆದುರುಳಿಸುವ ಹೊಸ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್‌ನ ರಾಜ್ಯ ನಾಯಕರು ಮುಂದಾಗಿದ್ದಾರೆ.

ಒಂದೆಡೆ ಶಿರಾ ಇನ್ನೊಂದೆಡೆ ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರ ಉಪಚುನಾವಣೆ ಜವಾಬ್ದಾರಿ ಹಂಚಿಕೊಂಡಿದ್ದ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಇದೀಗ ಈ ಎರಡು ಉಪಚುನಾವಣೆ ಸಂದರ್ಭ ಒಂದಾಗಿ ಹೋರಾಡಲು, ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದ್ದಾರೆ.

ಒಂದೆಡೆ ಮಸ್ಕಿ ಹಾಗೂ ಇನ್ನೊಂದೆಡೆ ಬಸವಕಲ್ಯಾಣ ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆ ಯಾವುದೇ ಸಂದರ್ಭದಲ್ಲಿ ಘೋಷಣೆಯಾಗಬಹುದು. ವಿಜಯೇಂದ್ರ ಆಗಲೇ ಕ್ಷೇತ್ರಕ್ಕೆ ತೆರಳಿ ಪ್ರವಾಸ, ಪ್ರಚಾರ ಆರಂಭಿಸಿದ್ದಾರೆ. ಕೆಆರ್‌ಪೇಟೆ ಹಾಗೂ ಶಿರಾ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದಿದ್ದರೂ ಗೆಲುವು ಧಕ್ಕಿಸಿಕೊಡುವಲ್ಲಿ ಯಶಸ್ವಿಯಾಗಿರುವ ವಿಜಯೇಂದ್ರಗೆ ಈ ಎರಡು ಕ್ಷೇತ್ರ ಸವಾಲಾಗದು. ಇದನ್ನರಿತ ಕಾಂಗ್ರೆಸ್ ಇಲ್ಲಿ ತಂತ್ರಗಾರಿಕೆ ಆರಂಭಿಸಿದೆ.

ಸಿದ್ದು-ಡಿಕೆಶಿ ಜುಗಲ್‌ಬಂದಿ :ಮಸ್ಕಿ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಸಾಕಷ್ಟು ಹುಡುಕಾಟ ನಡೆಸಿ, ಕಡೆಗೆ ಮೂಡಾ ಅಧ್ಯಕ್ಷರಾಗಿದ್ದ ಬಿಜೆಪಿ ಹಿಂದಿನ ಚುನಾವಣೆ ಅಭ್ಯರ್ಥಿಯನ್ನೇ ಆಪರೇಷನ್ ಮಾಡಿ ಕಾಂಗ್ರೆಸ್‌ಗೆ ಕರೆತರಲಾಗಿದೆ. ಬಸವನಗೌಡ ತುರುವಿಹಾಳ್ ಮುಂದಿನ ಉಪಚುನಾವಣೆಗೆ ಮಸ್ಕಿಯಿಂದ ಕಾಂಗ್ರೆಸ್ ಅಭ್ಯರ್ಥಿ. ಇನ್ನು ಬಸವಕಲ್ಯಾಣದಲ್ಲಿ ಟಿಕೆಟ್​​ಗೆ ಸಾಕಷ್ಟು ಲಾಬಿ ನಡೆದಿದೆ. ಆದರೆ, ಅಲ್ಲಿ ಅನುಕಂಪ ನೆಚ್ಚಿ ಕಾಂಗ್ರೆಸ್ ಶಾಸಕರಾಗಿದ್ದ ಬಿ. ನಾರಾಯಣ್ ರಾವ್ (ಇತ್ತೀಚೆಗೆ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ) ಕುಟುಂಬಕ್ಕೆ ಟಿಕೆಟ್ ನೀಡುವ ಸಾಧ್ಯತೆ ಇದೆ.

ಮಸ್ಕಿ, ಬಸವಕಲ್ಯಾಣ ಇತಿಹಾಸ :ಪ್ರತಾಪ್ ಗೌಡ ಪಾಟೀಲ್ 2008ರಲ್ಲಿ ಬಿಜೆಪಿ, 2013, 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು, ಕ್ಷೇತ್ರದಲ್ಲಿ 12 ವರ್ಷಗಳಿಂದ ಉತ್ತಮ ಹಿಡಿತ ಸಾಧಿಸಿದ್ದಾರೆ. ಇದೀಗ ಬಿಜೆಪಿ ಅಭ್ಯರ್ಥಿ ಆಗಿದ್ದು, ಆಡಳಿತ ಪಕ್ಷದ ಪರ ಉತ್ತಮ ಅಲೆ ಕಂಡು ಬರುತ್ತಿರುವ ಸಂದರ್ಭ ಚುನಾವಣೆ ಎದುರಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇವಲ 213 ಮತಗಳಿಂದ ಗೆದ್ದಿರುವ ಇವರನ್ನು ಈ ಸಾರಿ ಸೋಲಿಸುವುದು ಕಾಂಗ್ರೆಸ್ ಗುರಿ.

ಶತಾಯ ಗತಾಯ 1957ರಿಂದ ಈವರೆಗೆ ಅತಿ ಹೆಚ್ಚು ಸಾರಿ ಅಂದರೆ 6 ಸಾರಿ ಗೆದ್ದಿರುವ ಕ್ಷೇತ್ರ ಮರಳಿ ಪಡೆಯುವುದು ಕೈ ಗುರಿಯಾಗಿದೆ. ಇನ್ನೊಂದೆಡೆ ಬಸವಕಲ್ಯಾಣ ಕೂಡ ಕಾಂಗ್ರೆಸ್ ಪಾಲಿಗೆ ಭರವಸೆಯ ಕ್ಷೇತ್ರ. ಇಲ್ಲಿಯೂ ಅತಿಹೆಚ್ಚು ಅಂದರೆ 6 ಸಾರಿ ಗೆದ್ದ ಕೀರ್ತಿ ಕೈ ಪಕ್ಷಕ್ಕಿದೆ. ಅಲ್ಲದೇ ಈ ಸಾರಿ ಅನುಕಂಪದ ಅಲೆಯೂ ಬೆನ್ನಿಗಿದೆ. ರಾಜರಾಜೇಶ್ವರಿನಗರ, ಶಿರಾಗಿಂತ ಸುಲಭವಾಗಿ ಗೆಲ್ಲುವ ಅವಕಾಶ ಕಾಂಗ್ರೆಸ್‌ಗೆ ಇದ್ದು, ಶತಾಯ ಗತಾಯ ಗೆದ್ದು ಕ್ಷೇತ್ರ ಉಳಿಸಿಕೊಳ್ಳುವ ಜತೆಗೆ ಬಿ ವೈ ವಿಜಯೇಂದ್ರ ಗೆಲುವಿನ ಓಟ ತಡೆಯುವ ಆಶಯವನ್ನೂ ಕಾಂಗ್ರೆಸ್ ನಾಯಕರು ಹೊಂದಿದ್ದಾರೆ.

ಈ ಸಾರಿ ಎಲ್ಲೆಡೆ ಒಟ್ಟಾಗಿ ತೆರಳಿ ಒಗ್ಗಟ್ಟು ಪ್ರದರ್ಶಿಸಲು ಕೂಡ ನಿರ್ಧರಿಸಿದ್ದಾರೆ. ಒಟ್ಟಾರೆ ಕಾಂಗ್ರೆಸ್‌ಗೆ ಗೆಲುವು ಸದ್ಯಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ವಿಜಯೇಂದ್ರ ನಿಯಂತ್ರಣ ಕೂಡ ಅಷ್ಟೇ ಪ್ರಮುಖವಾಗಿದೆ. ಮತ್ತೊಮ್ಮೆ ರಾಜ್ಯ ಕಾಂಗ್ರೆಸ್ ನಾಯಕರು ಇದಕ್ಕಾಗಿ ಒಗ್ಗಟ್ಟು ಪ್ರದರ್ಶನ ನಡೆಸಲೇಬೇಕಿದೆ, ಇದೇ ನಿಟ್ಟಿನಲ್ಲಿ ಕಾರ್ಯ ಯೋಜನೆ ಕೂಡ ರೂಪುಗೊಳ್ಳುತ್ತಿದೆ.

ABOUT THE AUTHOR

...view details