ದೇವನಹಳ್ಳಿ: ಏಷ್ಯಾದ ಅತಿದೊಡ್ಡ ಏರ್ ಶೋ ಏರೋ ಇಂಡಿಯಾ- 2023 ಯಲಹಂಕದ ಏರ್ಫೋರ್ಸ್ ಸ್ಟೇಷನ್ನಲ್ಲಿ ಫೆಬ್ರವರಿ 13 ರಿಂದ 17 ರವರೆಗೆ ನಡೆಯಲಿದೆ. ಸುರಕ್ಷತೆಯ ದೃಷ್ಟಿಯಿಂದ ಪಕ್ಕದಲ್ಲಿಯೇ ಇರುವ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಸೇವೆಯನ್ನು ಕೆಲಕಾಲ ಸ್ಥಗಿತಗೊಳಿಸಲಾಗಿದ್ದು, ಇದರಿಂದಾಗಿ ನಿಲ್ದಾಣದಲ್ಲಿ ಜನದಟ್ಟನೆ ಉಂಟಾಗಿದೆ. ಕೆಲವು ಪ್ರಯಾಣಿಕರು ತಮ್ಮ ವಿಮಾನಗಳನ್ನೂ ಮಿಸ್ ಮಾಡಿಕೊಂಡಿದ್ದಾರೆ.
ಏರ್ ಶೋ ನಡೆಯುವ ಮುನ್ನವೇ ಫೆಬ್ರವರಿ 8 ರಿಂದ 17ರವರೆಗೆ ವಿಮಾನ ನಿಲ್ದಾಣದ ವಾಣಿಜ್ಯ ವಿಮಾನಗಳ ಸೇವೆಯಲ್ಲಿ ವ್ಯತ್ಯಯ ಮಾಡಿದ್ದೇ ಇದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತೀಕ್ ಶ್ರೀವಾತ್ಸವ್ ಎಂಬ ಪ್ರಯಾಣಿಕ ಟ್ವಿಟರ್ನಲ್ಲಿ ಬರೆದುಕೊಂಡಿದ್ದು, ಫೆಬ್ರವರಿ 9ರ ಮುಂಜಾನೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಜನದಟ್ಟನೆಯಿಂದ ಪ್ರಯಾಣಿಕರ ಗದ್ದಲ, ಕೂಗಾಟ ಪ್ರಾರಂಭವಾಗಿತ್ತು. ಕೆಲವು ಪ್ರಯಾಣಿಕರು ತಮ್ಮ ವಿಮಾನಗಳನ್ನು ತಪ್ಪಿಸಿಕೊಂಡಿದ್ದಾರೆ. ಟರ್ಮಿನಲ್ 2 ಗೆ ವಿಮಾನ ಸೇವೆಯನ್ನು ವಿಸ್ತರಿಸುವುದು ಹೇಗೆ, ಈ ಬಗ್ಗೆ ನಿಮ್ಮ ಯೋಜನೆಗಳೇನು? ವಿಮಾನ ನಿಲ್ದಾಣದ ಅಧಿಕಾರಿಗಳು ನಿಜವಾಗಿಯೂ ಏನಾದರೂ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.