ಬೆಂಗಳೂರು:ಸಶಕ್ತ ಹಿಂದುಳಿದ ವರ್ಗದಿಂದ ಸಶಕ್ತ ಭಾರತ ನಿರ್ಮಾಣದ ಸಂಕಲ್ಪ ಮಾಡಲಾಗಿದೆ. ಹಿಂದುಳಿದ ವರ್ಗದವರನ್ನು ಒಗ್ಗೂಡಿಸಿ, ಆ ಸಮಾಜವನ್ನು ಪ್ರಬಲಗೊಳಿಸುವ ಕೆಲಸವನ್ನು ಮಾಡುತ್ತೇವೆ ಹಾಗೂ ಭಾರತೀಯ ಜನತಾ ಪಕ್ಷ ಹಿಂದುಳಿದ ವರ್ಗದ ಸಬಲೀಕರಣಕ್ಕೆ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜೊತೆ ಬೆಂಗಳೂರಿನ ಯಲಹಂಕದಲ್ಲಿ ಆಯೋಜಿಸಲಾಗಿದ್ದ ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಪ್ರಶಿಕ್ಷಣ ಶಿಬಿರದಲ್ಲಿ ಸಿಎಂ ಪಾಲ್ಗೊಂಡರು. ಜೆ ಪಿ ನಡ್ಡಾ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಿ ಗೌರವಿಸಿದರು. ನಂತರ ಮಾತನಾಡಿದ ಸಿಎಂ, ಭಾರತೀಯ ಜನತಾ ಪಕ್ಷ ಹಾಗೂ ಭಾರತ ದೇಶಕ್ಕೂ ಹಿಂದುಳಿದ ವರ್ಗ ಶಕ್ತಿ ತುಂಬಲಿದೆ. ದೇಶವನ್ನು ಸಶಕ್ತಗೊಳಿಸುವಲ್ಲಿ ಹಿಂದುಳಿದ ವರ್ಗದವರ ಕೊಡುಗೆ ಪ್ರಮುಖವಾಗಿದೆ. ಹಿಂದುಳಿದ ವರ್ಗದವರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬಂದಾಗ ಮಾತ್ರ ಸಮಾನತೆಯ ಕನಸು ನನಸಾಗುತ್ತದೆ. ಭಾರತೀಯ ಜನತಾ ಪಕ್ಷದಲ್ಲಿ ನಾವು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಸಮಾನತೆಯ ನೀತಿಯ ಮೇಲೆ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ರಾಜ್ಯದ ಮನೆಮನೆಗೂ ತಲುಪಿಸುವ ಕೆಲಸವನ್ನು ಓಬಿಸಿ ಮೋರ್ಚಾ ಉತ್ತಮ ರೀತಿಯಲ್ಲಿ ಮಾಡಬೇಕು ಎಂದರು.
ಜನತಾ ಪಕ್ಷ ರಾಷ್ಟ್ರೀಯ ಪ್ರಶಿಕ್ಷಣ ಶಿಬಿರದ ಉದ್ಘಾಟನೆ ಹಿಂದುಳಿದ ವರ್ಗ ಹಾಗೂ ಭಾರತೀಯ ಜನತಾ ಪಕ್ಷದ ಮಧ್ಯೆ ಅನ್ಯೋನ್ಯ ಸಂಬಂಧವಿದೆ : ಇಂದು ಒಬಿಸಿ ಮೋರ್ಚಾ ಸಮ್ಮೇಳನವನ್ನು ಕರ್ನಾಟಕದಲ್ಲಿ ಆಯೋಜಿಸಿರುವುದು ಅಭಿನಂದನೀಯ. ಅಖಿಲ ಭಾರತ ಮಟ್ಟದಲ್ಲಿ ಪಕ್ಷ ಪ್ರಬಲವಾಗಿ ಬೆಳೆದಿರುವುದಕ್ಕೆ ಒಬಿಸಿ ವರ್ಗದ ಸಂಪೂರ್ಣ ಸಹಕಾರವಿದ್ದು, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರವರು ಇದನ್ನು ಸಾಧ್ಯವಾಗಿಸಿದ್ದಾರೆ. ಹಿಂದುಳಿದ ವರ್ಗ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಅನ್ಯೋನ್ಯ ಸಂಬಂಧವಿದೆ. ಹಿಂದುಳಿದ ವರ್ಗವನ್ನು ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತಂದು, ಹಿಂದುಳಿದ ವರ್ಗಕ್ಕೆ ಪ್ರಬಲ ಧ್ವನಿಯಾಗಲು ಪಕ್ಷದ ರಾಷ್ಟ್ರಿಯ ಅಧ್ಯಕ್ಷರ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿದರು.
ಹಿಂದುಳಿದ ವರ್ಗದವರನ್ನು ಒಗ್ಗೂಡಿಸಲಾಗುವುದು :ರಾಜ್ಯದಲ್ಲಿನ ಹಿಂದುಳಿದ ವರ್ಗ ಜಾಗೃತವಾಗಿದೆ. ಹಿಂದುಳಿದ ವರ್ಗಕ್ಕೆ ಪ್ರಾಮುಖ್ಯತೆಯನ್ನು ಮೊದಲಿನಿಂದಲೂ ನೀಡಲಾಗಿದೆ. ಎಲ್ಲ ವರ್ಗದ ಜನರ ರಾಜಸತ್ವ ಕರ್ನಾಟಕದಲ್ಲಿತ್ತು. ವಿವಿಧ ಸಾಮ್ರಾಜ್ಯದ ರಾಜರೂ ಸಹ ಈ ವರ್ಗದಿಂದ ಬಂದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಸಾಮರಸ್ಯ ಮೊದಲಿನಿಂದಲೂ ಇದೆ. ರಾಜಕೀಯವಾಗಿ, ಆಡಳಿತಾತ್ಮಕವಾಗಿ ಅಭಿವೃದ್ಧಿಯನ್ನು ಹಿಂದುಳಿದ ವರ್ಗದವರು ಹೊಂದಿದ್ದಾರೆ. ಹಾವನೂರು, ವೆಂಕಟಸ್ವಾಮಿ, ಚಿನ್ನಪ್ಪಸ್ವಾಮಿ ಆಯೋಗಳು ಸೇರಿದಂತೆ ವಿವಿಧ ಹಿಂದುಳಿದ ವರ್ಗಗಳ ಆಯೋಗಗಳ ಮೂಲಕ ಪ್ರಬಲವಾದ ಸಮಾಜ ನಿರ್ಮಾಣ ಮಾಡಲಾಗುತ್ತಿದೆ. 33% ಹೆಚ್ಚಿನ ಪ್ರಾಬಲ್ಯ ಹೊಂದಿರುವ ಹಿಂದುಳಿದ ವರ್ಗದವರನ್ನು ಒಗ್ಗೂಡಿಸಿ, ಆ ಸಮಾಜವನ್ನು ಪ್ರಬಲಗೊಳಿಸುವ ಕೆಲಸವನ್ನು ಮಾಡಲಾಗುವುದು ಎಂದರು.
ಸಮಾನತೆಯ ಧ್ಯೇಯದ ಕಾರ್ಯಕ್ರಮಗಳು:3 ‘ಇ’ ಗಳು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಶ್ರೇಯೋಭಿವೃದ್ಧಿಗೆ ಪ್ರಮುಖವಾದುದು. ಶಿಕ್ಷಣ, ಉದ್ಯೋಗ, ಸಬಲೀಕರಣವೆಂಬ ಮಂತ್ರದಿಂದ ರಾಜ್ಯದ ಜನರನ್ನು ಅಭಿವೃಧ್ಧಿಯತ್ತ ಕೊಂಡೊಯ್ಯಲಾಗುತ್ತಿದೆ. ರಾಜ್ಯ ಸರ್ಕಾರದ ಈ ಚಿಂತನೆಗೆ ಪ್ರಧಾನಿ ನರೇಂದ್ರ ಮೋದಿಯವರೇ ಸ್ಪೂರ್ತಿ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಸಮಾನತೆಯ ಧ್ಯೇಯದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕನಕದಾಸರ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲಾಗುತ್ತಿದೆ. ರಾಜ್ಯದ ಪ್ರಮುಖ 5 ಶೈಕ್ಷಣಿಕ ಕೇಂದ್ರಗಳಾಗಿದ್ದು, 1000 ಸಾಮರ್ಥ್ಯದ ವಿದ್ಯಾರ್ಥಿ ನಿಲಯ, ವಿದ್ಯಾರ್ಥಿ ವೇತನ ಹೆಚ್ಚಳ, ಶ್ರೀ ನಾರಾಯಣಗುರು ವಸತಿ ಶಾಲೆಗಳನ್ನು ತಲಾ 20 ಕೋಟಿ ರೂ. ವೆಚ್ಚದಲ್ಲಿ 4 ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗುವುದು ಎಂದರು.
ಜೆಪಿ ನಡ್ಡಾ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಿ ಗೌರವಿಸಿದ ಬೊಮ್ಮಾಯಿ ದುಡಿಯುವ ವರ್ಗದ ಸಬಲೀಕರಣ :ರಾಜ್ಯದಲ್ಲಿ ವೃತ್ತಿಪರ ಸಮಾಜಗಳಿವೆ. ಕುಂಬಾರರು, ಮಡಿವಾಳರು, ವಿಶ್ವಕರ್ಮ, ಮೀನುಗಾರರು ಸೇರಿದಂತೆ ವಿವಿಧ ಹಿಂದುಳಿದ ವರ್ಗಗಳಿವೆ. ಈ ವೃತ್ತಿಗಳನ್ನು ಪ್ರಬಲಗೊಳಿಸಲು ಈ ಬಾರಿಯ ಆಯವ್ಯಯದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವರಿಗೆ ಸಾಲಸೌಲಭ್ಯ, ಮಹಿಳೆಯರಿಗೆ ಸ್ತ್ರೀಶಕ್ತಿ ಸಂಘಗಳಿಗೆ ತಲಾ 1.50 ಲಕ್ಷ ಆರ್ಥಿಕ ನೆರವು, ಆ್ಯಂಕರ್ ಬ್ಯಾಂಕ್ ಜೋಡಣೆ, ಪ್ರತಿ ಸಂಘಕ್ಕೂ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ 70% ಜನರು ಜೀವನೋಪಾಯಕ್ಕಾಗಿ ದುಡಿಯುತ್ತಿದ್ದಾರೆ. ಈ ದುಡಿಯುವ ವರ್ಗದ ಆದಾಯ ಹೆಚ್ಚಳವಾದಾಗ ರಾಜ್ಯದ ಆರ್ಥಿಕತೆ, ಜಿಡಿಪಿ, ತಲಾವಾರು ಆದಾಯ ಬೆಳೆಯುತ್ತದೆ. ಆಗ ಸಮಾನತೆಯ ಸಮಾಜವೂ ನಿರ್ಮಾಣವಾಗುತ್ತದೆ. ವಿವಿಧ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಯೋಜನೆಗಳಿಂದ ದುಡಿಯುವ ವರ್ಗದ ಸಬಲೀಕರಣ ಸರ್ಕಾರದ ಗುರಿಯಾಗಿದೆ ಎಂದರು.
ಇದನ್ನೂ ಓದಿ:ರಾಜ್ಯಕ್ಕೆ ಪ್ರಧಾನಿ ಭೇಟಿ.. ಎಲ್ಲಾ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ.. ಸಿಎಂ ಬೊಮ್ಮಾಯಿ