ಬೆಂಗಳೂರು :ರಾಜ್ಯದಲ್ಲಿ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲು ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಸರತ್ತು ನಡೆಸುತ್ತಿದ್ದರೆ, ಇನ್ನೊಂದೆಡೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮತ್ತೊಮ್ಮೆ ರಾಜ್ಯದ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕರ ಜಂಗಿ ಕುಸ್ತಿ ಕಂಡು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಫುಲ್ ಖುಷಿಯಾಗಿದ್ದಾರೆ.
ಜಂಗಿ ಕುಸ್ತಿ: ಮುಂದಿನ ಚುನಾವಣೆಯ ನಂತರ ಸಿಎಂ ಆಗುವ ಹಂಬಲದಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡೆಸಿರುವ ಜಂಗಿ ಕುಸ್ತಿ ಒಂದೇ ರೇಂಜಿನಲ್ಲಿ ನಡೆದಿದೆ. ಸಿದ್ದರಾಮಯ್ಯ ಅವರ ಜನ್ಮ ದಿನದ ಹೆಸರಿನಲ್ಲಿ ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆದ ದೊಡ್ಡ ಸಮಾರಂಭ ಸ್ಪಷ್ಟವಾಗಿ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಪ್ರತಿಬಿಂಬಿಸುವ ಉದ್ದೇಶವಾಗಿತ್ತು.
ಇದು ಮನದಟ್ಟಾಗುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರ್ಣಾಯಕ ಆಟಕ್ಕೆ ಮುಂದಾದರು. ಬೆಂಗಳೂರಿನಲ್ಲಿ ಆ. 15 ರಂದು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬಸವನಗುಡಿ ನ್ಯಾಷನಲ್ ಕಾಲೇಜ್ ವರೆಗೂ ಬೃಹತ್ ಜಾಥಾ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.
ಒಕ್ಕಲಿಗರಿಗೆ ಸಿಎಂ ಆಗುವ ಅವಕಾಶ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಂತರ ಮತ್ತೊಮ್ಮೆ ಒಕ್ಕಲಿಗರಿಗೆ ಸಿಎಂ ಆಗುವ ಅವಕಾಶ ಬಂದಿದೆ. ಹೀಗಾಗಿ ತಮಗೆ ಸಮುದಾಯದ ಬೆಂಬಲ ಇರಲಿ ಎಂದು ಸಮುದಾಯದ ಬೆಂಬಲವನ್ನು ಡಿಕೆ ಕೋರಿದ್ದರು. ಯಾವಾಗ ಅವರು ಈ ಮನವಿ ಮಾಡಿಕೊಂಡರೋ? ಇದಾದ ನಂತರ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಖುಷಿಯಾಗಿದ್ದಾರೆ. ಕಾರಣ, ಡಿ.ಕೆ.ಶಿವಕುಮಾರ್ ಹಾಕಿದ ಕೂಗು ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಪಾಸಿಟಿವ್ ಸಂದೇಶ ರವಾನಿಸುವ ಬದಲು ನೆಗೆಟಿವ್ ಸಂದೇಶ ರವಾನಿಸಿದೆ. ಅಂದರೆ, ಕಾಂಗ್ರೆಸ್ನಲ್ಲಿ ನಾಯಕತ್ವಕ್ಕಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ನಡುವೆ ನಡೆಯುತ್ತಿರುವ ಸಂಘರ್ಷ ಒಕ್ಕಲಿಗ ಮತದಾರರಲ್ಲಿ ಸಂದೇಹ ಮೂಡಿಸಿದೆ.
ಡಿಕೆಶಿ ಅವರ ನೇರ ಮನವಿಗೆ ಕಾರಣ: ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ದಿನದಿಂದ ದಿನಕ್ಕೆ ಪವರ್ಫುಲ್ ಆಗುತ್ತಿದ್ದಾರೆ. ಹೀಗೆ ಶಕ್ತಿ ಶಾಲಿಯಾಗುತ್ತಿರುವ ಅವರಿಗೆ ಸರಿಸಾಟಿ ಆಗಬೇಕೆಂದರೆ ಭವಿಷ್ಯದ ಶಾಸಕಾಂಗ ಪಕ್ಷದಲ್ಲಿ ತಮಗೂ ಬಲ ಇರಬೇಕು. ಶಾಸಕಾಂಗ ನಾಯಕನ ಆಯ್ಕೆಯ ಸಂದರ್ಭದಲ್ಲಿ ಸಿದ್ದರಾಮಯ್ಯ 60 ಬೆಂಬಲಿಗ ಶಾಸಕರನ್ನು ತೋರಿಸಿದರೆ, ತಾವು ಕೂಡಾ ಅಂತಹದೇ ಶಕ್ತಿ ಪ್ರದರ್ಶನಕ್ಕೆ ಸಿದ್ಧರಾಗಿರಬೇಕು. ಆದರೆ, ಇವತ್ತಿನ ಸ್ಥಿತಿಯಲ್ಲಿ ಕೈ ಪಾಳೆಯದ ಬಹುತೇಕ ಶಾಸಕರು ಸಿದ್ದರಾಮಯ್ಯ ಅವರ ಜತೆಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯ ನಂತರವೂ ಈ ಪರಿಸ್ಥಿತಿ ಮುಂದುವರಿದರೆ ಸಿದ್ದರಾಮಯ್ಯ ಸಹಜವಾಗಿಯೇ ಶಾಸಕಾಂಗ ಪಕ್ಷದ ನಾಯಕರಾಗಬಹುದು.
ಬಲಾಬಲ: ಕಾಂಗ್ರೆಸ್ ಹೈಕಮಾಂಡ್ ಬಲಾಬಲ ಲೆಕ್ಕ ಹಾಕದೆ ಶಾಸಕಾಂಗ ನಾಯಕರನ್ನು ನೇಮಕ ಮಾಡಿದ ಹಲವು ಉದಾಹರಣೆಗಳು ಸಹ ಇವೆ. 1990 ರಲ್ಲಿ ವೀರೇಂದ್ರ ಪಾಟೀಲರು ಸಿಎಂ ಹುದ್ದೆಯಿಂದ ಕೆಳಗಿಳಿದಾಗ ಪಕ್ಷದ ಶಾಸಕಾಂಗದಲ್ಲಿ ಹೆಚ್ಚು ಸಂಖ್ಯಾಬಲ ಇದ್ದದ್ದು ಕೆ.ಹೆಚ್. ಪಾಟೀಲರಿಗೆ. ಆದರೆ, ಪಾರ್ಟಿ ಫಂಡ್ ಸಂಗ್ರಹಿಸುವ ವಿಷಯದಲ್ಲಿ ಕೆ.ಹೆಚ್. ಪಾಟೀಲರಿಗಿಂತ ಬಂಗಾರಪ್ಪ ಅವರಿಗೆ ಶಕ್ತಿ ಜಾಸ್ತಿ ಅಂತ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿತು. ಇದೇ ರೀತಿ 1992 ರಲ್ಲಿ ಬಂಗಾರಪ್ಪ ಅವರನ್ನು ಪದಚ್ಯುತಗೊಳಿಸಲು ಪ್ರಧಾನಿ ಪಿ.ವಿ. ನರಸಿಂಹರಾವ್ ನಿರ್ಧರಿಸಿದಾಗ ಭವಿಷ್ಯದ ನಾಯಕನ ರೇಸಿನಲ್ಲಿ ಎಸ್.ಎಂ.ಕೃಷ್ಣ ಮುಂದಿದ್ದರು. ಅಂದರೆ, ಶಾಸಕಾಂಗ ಪಕ್ಷದಲ್ಲಿ ಅವರಿಗೆ ಹೆಚ್ಚಿನ ಬೆಂಬಲವಿತ್ತು. ಆದರೆ, ಕೊನೆಯ ಕ್ಷಣದಲ್ಲಿ ದೆಹಲಿಯಿಂದ ಬಂದ ಲಕೋಟೆ ವೀರಪ್ಪ ಮೊಯ್ಲಿ ಅವರಿಗೆ ಅದೃಷ್ಟ ಖುಲಾಯಿಸಿತ್ತು.
ಆದರೆ, ಈಗಿನ ಪರಿಸ್ಥಿತಿ ಹಾಗಿಲ್ಲ. ಶಾಸಕಾಂಗ ಪಕ್ಷದಲ್ಲಿ ಯಾರಿಗೆ ಹೆಚ್ಚು ಬೆಂಬಲ ಇದೆಯೋ? ಅವರಿಗೆ ಪಟ್ಟ ಕಟ್ಟಲೇಬೇಕು. ಆ ದೃಷ್ಟಿಯಿಂದ ಲೆಕ್ಕ ಹಾಕಿದರೆ ಸಿದ್ದರಾಮಯ್ಯ ಅವರ ಹಿಂದೆ ಹೆಚ್ಚು ಶಾಸಕರು ನಿಲ್ಲುವ ಸಾಧ್ಯತೆ ಹೆಚ್ಚು. ಹೀಗಿರುವಾಗ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಬದಲು ಡಿಕೆಶಿಗೆ ಪಟ್ಟ ಕಟ್ಟಲು ಮುಂದಾದರೆ ತಿರುಗಿ ಬೀಳಲು ಸಿದ್ದರಾಮಯ್ಯ ಹಿಂಜರಿಯುವುದಿಲ್ಲ.
ಡಿಕೆಶಿ ಈ ಕೂಗು ಬೇರೆ ಪಕ್ಷಕ್ಕೆ ಲಾಭ:ಇದು ಹೈಕಮಾಂಡ್ಗೂ ಗೊತ್ತಿದೆ. ಹೀಗಾಗಿ ಶಾಸಕಾಂಗ ಪಕ್ಷದಲ್ಲಿ ನಿಮ್ಮ ಬಲ ಹೆಚ್ಚಿರುವಂತೆ ನೋಡಿಕೊಳ್ಳಿ ಅಂತ ಡಿಕೆಶಿಗೆ ಸೂಚನೆ ಕೊಡದೆ ಅವರಿಗೂ ಬೇರೆ ದಾರಿ ಇಲ್ಲ. ಇದು ಗೊತ್ತಿರುವುದರಿಂದಲೇ ಡಿಕೆಶಿ ಇದ್ದಕ್ಕಿದ್ದಂತೆ ಒಕ್ಕಲಿಗರ ಪಾಳೇಪಟ್ಟಿನ ಮುಂದೆ ನಿಂತು ಅಲವತ್ತುಕೊಂಡಿದ್ದಾರೆ. ಎಸ್.ಎಂ.ಕೃಷ್ಣ ಅವರ ನಂತರ ಒಕ್ಕಲಿಗರಿಗೆ ಸಿಎಂ ಆಗುವ ಅವಕಾಶ ಬಂದಿದೆ. ಹೀಗಾಗಿ ನನಗೆ ನಿಮ್ಮ ಬೆಂಬಲವಿರಲಿ ಎಂಬುದು ಅವರ ಕೂಗಿಗೆ ಕಾರಣ. ಆದರೆ, ಡಿಕೆಶಿ ಈ ಕೂಗು ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುವುದಕ್ಕಿಂತ ಹೆಚ್ಚಾಗಿ ಜೆಡಿಎಸ್ಗೆ ಅನುಕೂಲ ಒದಗಿಸಿಕೊಡುವ ಲಕ್ಷಣ ಹೆಚ್ಚು.
ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಶಕ್ತಿ ಹೆಚ್ಚಿರುವುದರಿಂದ ಸಿಎಂ ಹುದ್ದೆಯ ರೇಸಿನಲ್ಲಿ ಅವರೇ ಮುಂದಿರುತ್ತಾರೆ. ಹೀಗಾಗಿ ಡಿಕೆಶಿ ಮಾತು ಕೇಳಿ ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಲ್ಲುವುದೆಂದರೆ ಸಿದ್ದರಾಮಯ್ಯ ಅವರಿಗೆ ಪಟ್ಟ ಕಟ್ಟಲು ನೆರವು ನೀಡುವುದೆಂದೇ ಅರ್ಥ. ಹಾಗೆ ಸಿದ್ದರಾಮಯ್ಯ ಅವರಿಗೆ ಪಟ್ಟ ಕಟ್ಟಲು ನೆರವು ನೀಡುವುದಕ್ಕಿಂತ ಜೆಡಿಎಸ್ ಪಕ್ಷದ ಜತೆ ನಿಂತು ತಮ್ಮ ಸಮುದಾಯದ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಹುದ್ದೆಗೇರುವಂತೆ ನೋಡಿಕೊಳ್ಳುವುದೇ ಉತ್ತಮ ಅಂತ ಬಹುಸಂಖ್ಯಾತ ಒಕ್ಕಲಿಗರು ಭಾವಿಸುತ್ತಾರೆ. ಸಮುದಾಯಗಳು ಹೀಗೆ ಯೋಚಿಸುವುದು ಹೊಸತೇನಲ್ಲ.