ಬೆಂಗಳೂರು:ಜನತಾ ಕರ್ಫ್ಯೂ ಬೆಂಬಲಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ನಿವಾಸದ ಎರಡನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿದರು.
ಇಡೀ ದಿನ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿಯೇ ಇದ್ದ ಸಿಎಂ ಸಂಜೆ 5 ಗಂಟೆ ಆಗುತ್ತಿದ್ದಂತೆ ಕುಟುಂಬ ಸದಸ್ಯರ ಜೊತೆ ಬಂದು ಭಿತ್ತಿ ಪತ್ರ ಪ್ರದರ್ಶಿಸಿದ ಬಳಿಕ ಚಪ್ಪಾಳೆ ಹೊಡೆದರು.
ಜನತಾ ಕರ್ಫ್ಯೂ ಬೆಂಬಲಿಸಿದ ಸಿಎಂ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈದ್ಯರು, ಪೊಲೀಸರು ಕೋವಿಡ್ 19ರ ವಿರುದ್ಧ ಹೋರಾಡಲು ತಮ್ಮ ಜೀವನವನ್ನೇ ಪಣಕ್ಕಿಟ್ಟಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಮಾರ್ಚ್ 31ರ ತನಕ ಎಲ್ಲರೂ ಸ್ಪಂದಿಸಬೇಕು. ಮಾರ್ಚ್ 31ರವರೆಗೆ 9 ಜಿಲ್ಲೆಗಳಲ್ಲಿ ಬಂದ್ ಮುಂದುವರಿಸಬೇಕು ಎಂದರು.
ವಿಧಾನಸಭೆ ಅಧಿವೇಶನ ಮುಂದೂಡಿಕೆ ಇಲ್ಲ. ನಾಳೆ ಮತ್ತೆ ತುರ್ತು ಸಚಿವ ಸಂಪುಟ ಸಭೆ ಇದೆ. ಸಂಸತ್ತಿನ ಮಾದರಿಯಲ್ಲಿ ನಮ್ಮ ರಾಜ್ಯದ ಅಧಿವೇಶನ ನಡೆಯಲಿದೆ. ರಾಜ್ಯದ ಜನರು ಸಂಕಷ್ಟದಲ್ಲಿರುವಾಗ ಆ ಸಮಸ್ಯೆಗಳನ್ನು ನಾವು ಚರ್ಚೆ ಮಾಡಬಹುದು ಎನ್ನುವ ಮೂಲಕ ಅಧಿವೇಶನವನ್ನು ಮೊಟಕು ಮಾಡಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.