ಕರ್ನಾಟಕ

karnataka

ETV Bharat / state

ಡಿಸಿಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್​... ಬರ ಪರಿಸ್ಥಿತಿ ನಿರ್ವಹಣೆಗೆ ಖಡಕ್ ಸೂಚನೆ!

ಸಮಸ್ಯೆ ಇರುವ ಗ್ರಾಮಗಳಲ್ಲಿ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಅಗತ್ಯ ತೀರ್ಮಾನ ಕೈಗೊಳ್ಳಲು ಅಧಿಕಾರ ನೀಡಲಾಗಿದ್ದು, ಜನ/ಜಾನುವಾರುಗಳಿಗೆ ಕುಡಿಯುವ ನೀರು ಸರಬರಾಜು ಮತ್ತು ಮೇವಿನ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಎಚ್ಚರವಹಿಸಲು ಸಿಎಂ ನಿರ್ದೇಶಿಸಿದರು.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

By

Published : May 16, 2019, 3:26 AM IST

ಬೆಂಗಳೂರು: ಕುಡಿಯುವ ನೀರು ಸರಬರಾಜು ಹಾಗೂ ಜಾನುವಾರುಗಳಿಗೆ ಮೇವು ಸರಬರಾಜನ್ನು ಖಾತರಿ ಪಡಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಡ್ಡಾಯವಾಗಿ ಪ್ರತಿ ದಿನ ಗ್ರಾಮಗಳಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಸಿಎಂ, ಸಮಸ್ಯೆ ಇರುವ ಗ್ರಾಮಗಳಲ್ಲಿ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಅಗತ್ಯ ತೀರ್ಮಾನ ಕೈಗೊಳ್ಳಲು ಅಧಿಕಾರ ನೀಡಲಾಗಿದ್ದು, ಜನ/ಜಾನುವಾರುಗಳಿಗೆ ಕುಡಿಯುವ ನೀರು ಸರಬರಾಜು ಮತ್ತು ಮೇವಿನ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಎಚ್ಚರವಹಿಸಲು ನಿರ್ದೇಶಿಸಿದರು.

ಮೇವು ಸಂಗ್ರಹಕ್ಕೆ ಮುಂಚಿತವಾಗಿಯೇ ಸಿದ್ಧತೆ ನಡೆಸುವಂತೆ ಈ ಹಿಂದೆಯೇ ಸೂಚಿಸಲಾಗಿತ್ತು. ಎಲ್ಲಿಯೂ ಲೋಪವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಬಿಲ್ ಪಾವತಿಗೆ ಒಂದು ವಾರದ ಗಡುವು :

ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್​ಗಳಿಗೆ ಏಪ್ರಿಲ್ ತಿಂಗಳ ವರೆಗಿನ ಬಾಕಿ ಬಿಲ್ ಪಾವತಿಯನ್ನು ವಾರದೊಳಗೆ ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ತಿಳಿಸಿದರು. 15 ದಿನಗಳಿಗೊಮ್ಮೆ ಬಿಲ್ ಪಾವತಿಸುವಂತೆ ಸೂಚಿಸಿ, ಅವಧಿ ಮುಗಿದ ನಂತರ ಬಿಲ್ ಸಲ್ಲಿಸಿದರೆ ಆಯಾ ಪಿಡಿಒ, ಇಓ ಗಳೇ ಹೊಣೆಗಾರರು. ಅವರ ವಿರುದ್ಧ ಕ್ರಮ ಕೈಗೊಳುವಂತೆ ಸೂಚಿಸಿದರು.

ಟ್ಯಾಂಕರ್​ಗಳಿಗೆ ಜಿಪಿಎಸ್:

ಕುಡಿಯುವ ನೀರಿನ ಟ್ಯಾಂಕರ್​ಗಳಿಗೆ ಜಿಪಿಎಸ್ ಅಳವಡಿಕೆ ಕಾರ್ಯವನ್ನು ಕೆಲವು ಜಿಲ್ಲೆಗಳಲ್ಲಿ ಪೂರ್ಣಗೊಳಿಸಲಾಗಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಜಿಪಿಎಸ್ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು. ಹಣ ಸೋರಿಕೆಯಾಗುವುದನ್ನು ಅಧಿಕಾರಿಗಳು ತಡೆಗಟ್ಟಬೇಕು ಎಂದರು. ಈ ಕಾರ್ಯಗಳಿಗೆ ಹಣದ ಕೊರತೆ ಇಲ್ಲ ಎಂದೂ ತಿಳಿಸಿದರು.

ಬಾಡಿಗೆ ಆಧಾರದ ಮೇಲೆ ಕೊಳವೆ ಬಾವಿಗಳು:

ರಾಜ್ಯದಲ್ಲಿ ಒಟ್ಟು 1873 ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲಾಗಿದ್ದು, ಇನ್ನೂ ಹೆಚ್ಚಿನ ಶ್ರಮವಹಿಸಿ ನೀರು ಹೆಚ್ಚಿರುವ ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಅಂತರ್ಜಲ ಸಾರ್ವಜನಿಕರ ಸ್ವತ್ತು. ಹೀಗಾಗಿ ಅಗತ್ಯವಿದ್ದಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ವಶಕ್ಕೆ ಪಡೆಯಲು ಸಹ ಅಧಿಕಾರಿಗಳು ಹಿಂಜರಿಯಬಾರದು ಎಂದು ಹೇಳಿದರು. ಹೊಸದಾಗಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ಗ್ರಾಮಗಳಿಗೆ 24 ಗಂಟೆಗಳ ಒಳಗೆ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಬೇಕು ಎಂದು ಅವರು ಸೂಚನೆ ನೀಡಿದರು.

ಸಹಾಯವಾಣಿ :

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಎಲ್ಲಾ ಜಿಲ್ಲೆಗಳಲ್ಲಿ 24*7 ಸಹಾಯವಾಣಿಗಳನ್ನು ತೆರೆಯಲಾಗಿದ್ದು, ಇವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಕ್ರಮಕೈಗೊಳ್ಳುವಂತೆ ತಿಳಿಸಿದರು.

ಪ್ರತಿ ವ್ಯಕ್ತಿಗೆ ಕನಿಷ್ಠ 40 ಎಲ್​ಪಿಸಿಡಿ ನೀರು ಒದಗಿಸಲು ಅಧಿಕಾರಿಗಳು ಕ್ರಮವಹಿಸಬೇಕು. ರಾಜ್ಯದಲ್ಲಿ ತಲೆದೂರಿರುವ ಬರಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಬೇಕೆಂದು ಸೂಚಿಸಿದರು.

ನೆರೆ ಅನಾಹುತ ತಡೆಗೆ ಮುಂಜಾಗ್ರತೆ ವಹಿಸಲು ಸೂಚನೆ :

ಕೊಡಗು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ನೆರೆ ಅನಾಹುತ ತಡೆಗಟ್ಟಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಕೊಡಗು ಜಿಲ್ಲೆಯಲ್ಲಿ ಭಾರತೀಯ ಭೂ ವಿಜ್ಞಾನ ಸಮೀಕ್ಷಾ ಇಲಾಖೆ (ಜಿಎಸ್ಐ) ನಡೆಸಿದ ಸಮೀಕ್ಷೆಯಲ್ಲಿ ಭೂ ಕುಸಿತವಾಗುವ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಂಡಿದೆ. ಸತತ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.

ಜಿಎಸ್ಐ ಗುರುತಿಸಿರುವ ಅಪಾಯಕಾರಿ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಆಶ್ರಯ ತಾಣಗಳನ್ನು ಪ್ರಾರಂಭಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಜಾನುವಾರುಗಳ ಸುರಕ್ಷತೆಯ ಬಗ್ಗೆಯೂ ಕ್ರಮ ವಹಿಸಲಾಗಿದೆ ಎಂದರು. ಪ್ರವಾಹ ಉಂಟಾದಲ್ಲಿ ತಕ್ಷಣವೇ ಪರಿಹಾರ ಕೆಲಸಗಳನ್ನು ಕೈಗೊಳ್ಳಲು 8 ತಂಡಗಳನ್ನು ರಚಿಸಲಾಗಿದೆ. ಜೂನ್ ಕೊನೆ ವಾರದಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ತಂಡವನ್ನು ಕೊಡಗಿಗೆ ನಿಯೋಜಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಹಾರಂಗಿ ಜಲಾಶಯದಲ್ಲಿ ಹೂಳೆತ್ತುವ ಕಾರ್ಯಕ್ಕೆ ಜಲಸಂಪನ್ಮೂಲ ಇಲಾಖೆ ಕ್ರಮಕೈಗೊಳ್ಳುತ್ತಿದ್ದು, ಅಗ್ನಿಶಾಮಕ ಇಲಾಖೆ ಹಾಗೂ ಇತರ ಇಲಾಖೆಗಳಿಗೆ ರಕ್ಷಣಾ ಕಾರ್ಯಕ್ಕೆ ಅಗತ್ಯವಿರುವ ಪರಿಕರಗಳ ಖರೀದಿಗೆ ಕ್ರಮವಹಿಸಲಾಗಿದೆ ಹಾಗೂ ನೆರೆ ಸಂತ್ರಸ್ತರಿಗೆ ಗೃಹನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿರುವುದಾಗಿ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ABOUT THE AUTHOR

...view details