ಬೆಂಗಳೂರು: ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುಲಾಭಾರ ಕಾರ್ಯಕ್ರಮದ ಮೂಲಕ ಚಾಲನೆ ನೀಡುವರು. ಇಂದು ಸಂಜೆ 6 ಗಂಟೆ ಸುಮಾರಿಗೆ ಪರಿಷೆಯ ಸಂಭ್ರಮ ಆರಂಭವಾಗಲಿದ್ದು, ಸತತ ಮೂರು ದಿನಗಳ ಕಾಲ ಜರುಗಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ದೊಡ್ಡ ಗಣಪತಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆಗಳ ಪರಿಶೀಲನೆ ನಡೆಸಿ ಮಾಹಿತಿ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು) ಜಯರಾಮ್ ರಾಯ್ ಪುರ, ಪೆಂಡಾಲ್, ಆಸನಗಳು, ಗಣ್ಯ ವ್ಯಕ್ತಿಗಳು ಹಾಗು ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಎ.ಪಿ.ಎಸ್ ಕಾಲೇಜ್ ಆಟದ ಮೈದಾನ ಮತ್ತು ಕೊಹಿನೂರು ಆಟದ ಮೈದಾನ ಆಶ್ರಮ ವೃತ್ತದಲ್ಲಿ ಕಲ್ಪಿಸಲಾಗಿದೆ. ಭಕ್ತರಿಗೆ ದೇವರ ದರ್ಶನ ಪಡೆಯಲು ಹಲವೆಡೆ ಎಲ್.ಇ.ಡಿ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಅಹಿತಕರ ಚಟುವಟಿಕೆಗಳನ್ನು ನಿಯಂತ್ರಿಸಲು ಹಲವು ಕಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಭಕ್ತರಿಗೆ ಮಾರ್ಗದರ್ಶನ ನೀಡಲು ಹೋಂ ಗಾರ್ಡ್ಸ್, ಪೊಲೀಸ್ ಇಲಾಖೆ ಹಾಗೂ ಧ್ವನಿವರ್ಧಕಗಳನ್ನು ಬಳಸಿಕೊಳ್ಳಲಾಗುವುದು. ತುರ್ತು ಸಂದರ್ಭದಲ್ಲಿ ಮಕ್ಕಳು, ವೃದ್ಧರ ಅನುಕೂಲಕ್ಕಾಗಿ ತಾತ್ಕಾಲಿಕ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವ್ಯಾಪಾರಸ್ಥರಿಗೆ ಸುಮಾರು 2 ಸಾವಿರ ತಾತ್ಕಾಲಿಕ ಅಂಗಡಿಗಳನ್ನು ತೆರೆಯಲು ಪಾದಚಾರಿ ಬದಿಯಲ್ಲಿ ಟ್ರಾಫಿಕ್ ಸಮಸ್ಯೆ ಇಲ್ಲದೆ ಅನುಕೂಲ ಕಲ್ಪಿಸಲಾಗಿದೆ. ಸುಮಾರು 1 ಕಿ.ಮೀ ಸರಹದ್ದು ವ್ಯಾಪ್ತಿಯಲ್ಲಿ ವಿದ್ಯುತ್ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿದೆ.
ಅಗ್ನಿಶಾಮಕ ವಾಹನ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿದ್ಯುತ್ ಸರಬರಾಜು ಸಮರ್ಪಕವಾಗಿ ನಿರ್ವಹಿಸಲು ಬೆಸ್ಕಾಂ ಇಲಾಖೆಯಿಂದ ವ್ಯವಸ್ಥೆಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ವತಿಯಿಂದ ಸುಮಾರು 500 ರಿಂದ 600 ಸಿಬ್ಬಂದಿ ಇದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಹಲವು ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಾಗಿದೆ ಎಂದು ಹೇಳಿದರು.