ಬೆಂಗಳೂರು: ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಮೊದಲು ಅಕ್ಕಿ ಕೊಡುತ್ತೇವೆ ಎಂದಿದ್ದರು. ಈಗ ಅಕ್ಕಿ ಕೊಡಲ್ಲ ಅಂತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ಗಾಂಧಿ ಭವನದಲ್ಲಿ ಆಯೋಜಿಸಿದ್ದ 20ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಮೊದಲು ಅಕ್ಕಿ ಕೊಡುತ್ತೇವೆ ಎಂದು ನಂತರ ಕೊಡಲ್ಲ ಅಂದರು. ನಾವೇನು ಅಕ್ಕಿಯನ್ನು ಪುಕ್ಕಟ್ಟೆ ಕೇಳಿದ್ವಾ? ತಿಂಗಳಿಗೆ 840 ಕೋಟಿ ರೂಪಾಯಿ ಅಕ್ಕಿಗೆ ಬೇಕು. ಅಕ್ಕಿ ಇಟ್ಕೊಂಡು ಕೊಡಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.
ಹೆಣ್ಣುಮಕ್ಕಳಿಗೆ 2000 ರೂಪಾಯಿ ಕೊಡ್ತೇವೆ ಎಂದಿದ್ದೆವು. ಅದನ್ನು ಕೊಡೋಕೆ ಎಚ್ಚರಿಕೆಯಿಂದ ಮಾಡಬೇಕಲ್ವಾ? ಜನರ ತೆರಿಗೆ ಹಣ ನಮ್ಮಪ್ಪನ ಮನೆಯದ್ದಾ? ಅದು ಜನರ ಹಣ ಅಲ್ವೇ. ಅದಕ್ಕೆ ಮಹತ್ವ ಇಲ್ವೇ? ಅದನ್ನು ಬಹಳ ಜಾಣತನದಿಂದ ಖರ್ಚು ಮಾಡಬೇಕಲ್ವಾ?. 200 ಯೂನಿಟ್ ವಿದ್ಯುತ್ ಕೊಡ್ತೇವೆ ಅಂದಿದ್ದೇವೆ. ನಿನಗೂ ಫ್ರೀ ನನಗೂ ಫ್ರೀ ಅಂದ್ರಿ. ಈಗ ಲಿಮಿಟ್ ಮಾಡ್ತೀರ ಅಂತ ಕೇಳ್ತಿದ್ದಾರೆ. 60-70 ಯೂನಿಟ್ ಮಾಡೋರಿಗೆ ಅಷ್ಟು ಕೊಡ್ತೇವೆ. ನೀವು 200 ಯೂನಿಟ್ ಅಂದ್ರಿ ಅಂತ ಕೇಳ್ತಾರೆ. ಇದನ್ನೆಲ್ಲ ಹೇಳಬಾರದು, ಆದ್ರೂ ಹೇಳ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
59 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗಳಿಗೆ ನೀಡಬೇಕು. ಕಾಂಗ್ರೆಸ್ ನ ಐದು ಗ್ಯಾರಂಟಿಗಳಿಗೆ ಇಷ್ಟು ಮೊತ್ತದ ಹಣ ಬೇಕಾಗುತ್ತೆ. ಜನರಿಗೆ ಕೊಟ್ಟ ಭರವಸೆ ಜಾರಿಗೆ ಬಜೆಟ್ ಮಂಡಿಸಬೇಕಿದೆ. ಹಿಂದಿನವರು ಯಾವ ಭರವಸೆ ಈಡೇರಿಸಲಿಲ್ಲ. 15 ಲಕ್ಷ ಪ್ರತಿಯೊಬ್ಬರಿಗೆ ಕೊಡ್ತೇವೆ ಅಂದ್ರು ಕೊಟ್ರಾ? ಆದಾಯ ದುಪ್ಪಟ್ಟು ಮಾಡ್ತೇವೆ ಅಂದ್ರು ಮಾಡಿದ್ರಾ? ಅಚ್ಛೆ ದಿನ್ ಆಯೇಂಗಾ ಅಂದ್ರು ಏನು ಮಾಡಿದ್ರು? ಯಡಿಯೂರಪ್ಪನವರು ಏನೋ ಹೇಳಿದ್ರು, ಅದಕ್ಕೆ ಕೋಪಿಸಿಕೊಳ್ಬೇಕೋ, ನಗಬೇಕೋ ಗೊತ್ತಿಲ್ಲ. ರೈತರ ಸಾಲಮನ್ನಾ ಮಾಡ್ತೇವೆ ಅಂದ್ರು ಮಾಡಿದ್ರಾ? ನೀರಾವರಿಗೆ 1.5 ಲಕ್ಷ ಕೋಟಿ ಕೊಡ್ತೇವೆ ಅಂದ್ರು. ಏನಾದ್ರೂ ಅವರು ಹಣ ಕೊಟ್ರಾ? ಅವರು ಈಗ ಧರಣಿ ಮಾಡ್ತಾರಂತೆ ಎಂದು ಬಿಎಸ್ ವೈ ಧರಣಿಗೆ ಸಿದ್ದರಾಮಯ್ಯ ಎಚ್ಚರಿಕೆ ಕೊಟ್ಟರು.
ಸಾಹಿತಿಗಳಿಗೆ ಸಿಎಂ ಅಭಯ.. ಸಾಹಿತಿಗಳು ಅಂದ್ರೆ ಮೆದುಳು ಇದ್ದಂತೆ. ಹಾಗಾಗಿ ಫ್ರೀಡಂ ಆಫ್ ಸ್ಪೀಚ್ಗೆ ನೀವು ಹೆದರಬೇಕಿಲ್ಲ. ಇದಕ್ಕೆ ಧಕ್ಕೆ ಬರದಂತೆ ನಾವು ನೋಡಿಕೊಳ್ತೇವೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ಕಾಯ್ತೇವೆ ಎಂದು ಸಾಹಿತಿಗಳಿಗೆ ಸಿಎಂ ಸಿದ್ದರಾಮಯ್ಯ ಅಭಯ ನೀಡಿದರು.