ಕರ್ನಾಟಕ

karnataka

By ETV Bharat Karnataka Team

Published : Dec 28, 2023, 2:19 PM IST

ETV Bharat / state

ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಪರ ಬ್ಯಾಟ್ ಬೀಸಿದ ಸಿಎಂ ಸಿದ್ದರಾಮಯ್ಯ

ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಮುನ್ನಲೆಗೆ ಬಂದಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕೈ ಸಚಿವರು ಖರ್ಗೆ ಬದಲು ಪ್ರಧಾನಿ ಅಭ್ಯರ್ಥಿಯಾಗಿಸಲು ರಾಹುಲ್ ಗಾಂಧಿ ಪರ ಬ್ಯಾಟ್ ಬೀಸಿರುವುದು ಅಚ್ಚರಿ ಮೂಡಿಸಿದೆ.

CM Siddaramaiah
ಪ್ರಧಾನಿ ಅಭ್ಯರ್ಥಿಯಾಗಿಸಲು ರಾಹುಲ್ ಗಾಂಧಿ ಪರ ಬ್ಯಾಟ್ ಬೀಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: I.N.D.I.A ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಮುನ್ನಲೆಗೆ ಬಂದಿದ್ದರೆ, ರಾಜ್ಯ ನಾಯಕರು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಪರ ಬ್ಯಾಟಿಂಗ್​ ಮಾಡಿದ್ದಾರೆ.

I.N.D.I.A ಒಕ್ಕೂಟದ ಕೆಲ ಮೈತ್ರಿ ಪಕ್ಷಗಳು ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬೆಂಬಲಿಸಿದೆ. ಪ್ರತಿಪಕ್ಷಗಳ ಒಕ್ಕೂಟದ ಸಭೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಸ್ತಾಪಿಸಿದ್ದರು. ಅದಕ್ಕೆ ಆಪ್ ಪಕ್ಷವೂ ಬೆಂಬಲ ಸೂಚಿಸಿತ್ತು. ಆ ಮೂಲಕ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಮುನ್ನಲೆಗೆ ಬಂದಿತ್ತು. ಆದರೆ, ಇತ್ತ ಸಿಎಂ ಸಿದ್ದರಾಮಯ್ಯ ಆದಿಯಾಗಿ ರಾಜ್ಯ ಕೈ ಸಚಿವರು ಖರ್ಗೆ ಬದಲು ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಪರ ಬ್ಯಾಟ್ ಬೀಸಿರುವುದು ಅಚ್ಚರಿ ಮೂಡಿಸಿದೆ.

ಇಂದು ಕೆಪಿಸಿಸಿ ಕಚೇರಿ ಬಳಿಯ ಭಾರತ್ ಜೋಡೋ ಭವನದಲ್ಲಿ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಹುಲ್ ಗಾಂಧಿ ಈ ದೇಶದ ಮುಂದಿನ ಪ್ರಧಾನಿ ಆಗಬೇಕು. ದೇಶದಲ್ಲಿ ಭಾರತ್ ಜೋಡೋ ಯಾತ್ರೆ ಯಾರೂ ಮಾಡಿರಲಿಲ್ಲ. ಈಗ ಮತ್ತೆ ಭಾರತ್ ಜೋಡೋ ಆರಂಭ ಮಾಡುತ್ತಿದ್ದಾರೆ. ಇದು ನ್ಯಾಯ ಯಾತ್ರೆ ಹೆಸರಲ್ಲಿ ಶುರುವಾಗಲಿದೆ. ಎಲ್ಲರಿಗೂ ನ್ಯಾಯ ಸಿಗಬೇಕು. ಅದಕ್ಕಾಗಿ ಜಾಗೃತಿ ಮೂಡಿಸಲು ಯಾತ್ರೆ ಮಾಡಲು ಹೊರಟಿದ್ದಾರೆ. ನಾವೆಲ್ಲರೂ ರಾಹುಲ್ ಗಾಂಧಿ ಕೈಗೆ ಅಧಿಕಾರ ನೀಡಲು ಪ್ರಯತ್ನ ಮಾಡೋಣ. ಅದಕ್ಕಾಗಿ ನಮ್ಮಲ್ಲಿನ ಎಲ್ಲಾ ಭಿನ್ನಾಭಿಪ್ರಾಯ ಮರೆತು ಹೋರಾಟ ಮಾಡಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರಬೇಕು. ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಲು ಪ್ರಯತ್ನ ಮಾಡೋಣ ಎಂದು ಕರೆ ನೀಡಿದ್ದಾರೆ.

ನಂತರ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ ಅವರು ಕೂಡ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಪರ ಬ್ಯಾಟಿಂಗ್ ಮಾಡಿದರು. ಸಿಎಂ ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನ ಗೆಲ್ಲಬೇಕು. ಮೊನ್ನೆ ನಡೆದ ಪಂಚ ರಾಜ್ಯಗಳ ಸೋಲಿನಿಂದ ಎದೆಗುಂದಬಾರದು. ಕಾಂಗ್ರೆಸ್ ಪಕ್ಷ ಮೈಕೊಡವಿ ನಿಲ್ಲುತ್ತೆ. ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಮೈತ್ರಿಕೂಟದ ನೇತೃತ್ವ ವಹಿಸಲಿದೆ. ರಾಹುಲ್ ಗಾಂಧಿ ಅವರನ್ನು ಮುಂದಿನ ಪ್ರಧಾನಿ ಮಾಡುವ ಸಂಕಲ್ಪ ಮಾಡೋಣ ಎಂದರು.

ನಾನೂ ರಾಮನ ಭಜನೆ ಮಾಡುತ್ತಿದ್ದೆ:ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಾಫ್ಟ್ ಹಿಂದುತ್ವಾ ಅಂದ್ರೆ ಏನು? ಹಾರ್ಡ್ ಹಿಂದುತ್ವ ಅಂತಾರೆ. ಹಿಂದುತ್ವ ಬೇರೆ ಹಿಂದೂ ಬೇರೆ. ಐ ಆಮ್ ಹಿಂದು. ನಾವು ಶ್ರೀರಾಮನ ಪೂಜೆ ಮಾಡಲ್ವಾ? ನಮ್ಮ ಊರಲ್ಲಿ ರಾಮನ ಗುಡಿ ಕಟ್ಟಿಲ್ವಾ? ನಾವು ರಾಮನ ಭಜನೆ ಮಾಡಲ್ವಾ. ನಾನು ಊರಲ್ಲಿ ರಾಮನ ಭಜನೆಗೆ ಹೋಗುತ್ತಿದ್ದೆ. ಧನುರ್ಮಾಸದಲ್ಲಿ ರಾಮನ ಭಜನೆ ಮಾಡುತ್ತೇವೆ. ನಾವೆಲ್ಲಾ ಹಿಂದೂಗಳು. ಆದರೆ, ನಾವು ದೇಶದ ವ್ಯವಸ್ಥೆ ಬದಲಾವಣೆಗೆ ಇರುವುದು. ಎಲ್ಲರಿಗೂ ಸಮಾನ ಅವಕಾಶ ಇರಬೇಕು. ಇದು ಕಾಂಗ್ರೆಸ್ ಸಿದ್ಧಾಂತ. ಇದಕ್ಕೆ ನಾವು ಬದ್ಧರಾಗಿರಬೇಕು'' ಎಂದು ಹೇಳಿದರು.

ಮೋದಿಯಿಂದ ಡೋಂಗಿ ರಾಜಕಾರಣ- ಸಿದ್ದರಾಮಯ್ಯ:''ಈ ಪಕ್ಷ ಅಧಿಕಾರಕ್ಕಾಗಿ ಹುಟ್ಟಿದ್ದಲ್ಲ‌. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಕ್ಷ. ಬಿಜೆಪಿಯವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆ ಮಾಡುತ್ತಾರೆ. ಬಿಜೆಪಿಯ ಯಾರಾದರು ಒಬ್ಬರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನಿದರ್ಶನ ಇದೆಯಾ? 1950ರಲ್ಲಿ ಜನಸಂಘ ಸ್ಥಾಪನೆ ಆಗಿತ್ತು. ಆರ್​ಎಸ್ಎಸ್​ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ನಿದರ್ಶನ ಇದೆಯಾ? ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಕೇಳುವ ನೈತಿಕತೆ ಇದೆಯಾ? ದೇಶ ಭಕ್ತಿ, ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಪ್ರಧಾನಿ ಮೋದಿ ಸಬ್ ಕಾ ಸಾಥ್​, ಸಬ್ ಕಾ ವಿಕಾಸ್ ಅಂತಾರೆ. ಯಾವ ಸಬ್ ಕಾ ಸಾಥ್​ ಇದೆ. ಮೋದಿ ಡೋಂಗಿ ರಾಜಕಾರಣ ಮಾಡುತ್ತಾರೆ'' ಎಂದು ಸಿದ್ದರಾಮಯ್ಯ ಕಿಡಿಕಾರಿದರು.

''ಇದನ್ನು ಬಯಲು ಮಾಡುವುದು ಕಾಂಗ್ರೆಸ್ ಕರ್ತವ್ಯ. ಬಿಜೆಪಿಯವರು ಒಂದೇ ಒಂದು ಅಣೆಕಟ್ಟು ಕಟ್ಟಿದ್ದಾರಾ? 75 ವರ್ಷದಿಂದ ಕಾಂಗ್ರೆಸ್ ಏನು ಮಾಡಿತು ಅಂತಾರೆ, ನೀವು ಏನು ಮಾಡಿದ್ದೀರಾ? ಡಿಜಿಟಲ್ ಇಂಡಿಯಾಗೆ ಅಡಿಪಾಯ ಹಾಕಿದ್ದು ರಾಜೀವ್ ಗಾಂಧಿಯವರು. ಕಂಪ್ಯೂಟರ್, ವಿಜ್ಞಾನ, ತಂತ್ರಜ್ಞಾನಕ್ಕೆ ಒತ್ತು ಕೊಡದೇ ಇದ್ದರೆ ಡಿಜಿಟಲ್ ಇಂಡಿಯಾ ಆಗುತ್ತಾ? ಅವರು ಸುಮ್ಮನೆ ಬುರುಡೆ ಹೊಡೆಯುವುದು. ಹಿಂದುತ್ವದ ಅಮಲಿನ ಬೀಜ ಬಿತ್ತುವುದೇ ಅವರ ಕೆಲಸ ಆಗಿದೆ. 143 ಕೋಟಿ ಜನಸಂಖ್ಯೆ ಇದೆ ದೇಶದಲ್ಲಿ. ಅವರು ವಿವಿಧ ಜಾತಿ, ಭಾಷೆ, ಸಂಸ್ಕೃತಿಗೆ ಸೇರಿದ ಜನ. ಅವರನ್ನು ಒಟ್ಟಿಗೆ ಕೊಂಡೊಯ್ಯಬೇಕಲ್ವಾ? ದೇಶದ ಸರ್ವತೋಮುಖ ಬೆಳವಣಿಗೆ ಆಗಬೇಕಾದರೆ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಬೇಕು. ದೇಶದ ಎಲ್ಲಾ 143 ಜನರು ಮಾನವ ಜೀವಿಗಳಾಗಿದ್ದಾರೆ. ಕಾಂಗ್ರೆಸ್ ಪಕ್ಷ ಒಂದು ಚಳವಳಿ, ಒಂದು ಸಿದ್ಧಾಂತ. ಬಿಜೆಪಿಯವರ ಸಿದ್ಧಾಂತ ಏನು? ಸಮಸಮಾಜ ನಿರ್ಮಾಣ ಮಾಡುವುದರಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ'' ಎಂದು ಸಿಎಂ ಆರೋಪಿಸಿದರು.

''ಅಧಿಕಾರ ಎಲ್ಲರಿಗೂ ಸಿಗುತ್ತೆ, ಸಿಗದಿರಬಹುದು. ಆದರೆ ದೇಶದಲ್ಲಿ ಬದಲಾವಣೆ ತರಬೇಕಲ್ಲ? ಬದಲಾವಣೆ ತರುವ ಯಜ್ಞದಲ್ಲಿ ನಾವು ಇದ್ದೇವೆ. ಸ್ವಾತಂತ್ರ್ಯ ಹೋರಾಟದ ಬಳಿಕ ದೇಶ ಕಟ್ಟುವ ಕೆಲಸ ಮಾಡಿದ್ದು ಕಾಂಗ್ರೆಸ್ ಮಾತ್ರ. ಮೀಸಲಾತಿಯನ್ನು ವಿರೋಧ ಮಾಡಿದವರು ಬಿಜೆಪಿಯವರು. ಮಹಿಳಾ ಮೀಸಲಾತಿ ಈಗಲೇ ಜಾರಿಗೆ ತರವಹುದಿತ್ತಲ್ಲ? ನಾವು ಭರವಸೆ ನೀಡಿದ್ದೆಲ್ಲ ನಾವು ಜಾರಿ ಮಾಡಿದ್ದೇವೆ. ಗ್ಯಾರಂಟಿಯನ್ನು ಜಾರಿ ಮಾಡುತ್ತೇವೆ.‌ ಶಿವಮೊಗ್ಗದಲ್ಲಿ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ಜಾರಿ ಮಾಡುತ್ತೇವೆ. ಮೋದಿ ಗ್ಯಾರಂಟಿ ಜಾರಿ ಮಾಡಿದರೆ ರಾಜ್ಯ ದಿವಾಳಿ ಆಗುತ್ತೆ ಎಂದಿದ್ದರು. ನಾವು ಪಂಚ ಗ್ಯಾರಂಟಿ ಜಾರಿ ಮಾಡಿದ್ದೇವೆ. ರಾಜ್ಯದ ಅರ್ಥಿಕತೆ ಸುಭದ್ರವಾಗಿದೆ. ಪ್ರಧಾನಿ ಮೋದಿ ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಸಿಎಂ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಆಸ್ತಿ ಬರೆಸಿಕೊಂಡ ಆರೋಪ ಪ್ರಕರಣ​: ಇದೆಲ್ಲಾ ರಾಜಕೀಯ ಕುತಂತ್ರ ಎಂದ ಹೆಚ್ ಡಿ ರೇವಣ್ಣ

ABOUT THE AUTHOR

...view details